ಪ್ರಿಯಕರನೊಂದಿಗೆ ಸುತ್ತಾಟಕ್ಕೆ ಪಟ್ಟು : ಮಗಳನ್ನೇ ಕೊಂದ ಹೆತ್ತತಾಯಿ
RB NEWS
Bureau Report
ಪ್ರಿಯಕರನೊಂದಿಗೆ ಸುತ್ತಾಟಕ್ಕೆ ಪಟ್ಟು : ಮಗಳನ್ನೇ ಕೊಂದ ಹೆತ್ತತಾಯಿ
ಕಾರ್ಕಳ : ಪ್ರಿಯಕರನನ್ನು ಭೇಟಿಯಾಗಲು ಮುಂದಾಗಿದ್ದ ಮಗಳ ಕತ್ತು ಬಿಗಿದು ಕೊಲೆಗೈದ ಘಟನೆ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೆತ್ತತಾಯಿಯಿಂದಲೇ ಕೊಲೆಗೀಡಾದ ಯುವತಿ ಶಿಫನಾಜ್ (17) ಆಗಿದ್ದು, ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿ ಗುಲ್ಬಾರ್ ಬಾನು(45)ಎಂದು ತಿಳಿದುಬಂದಿದೆ.
ಘಟನೆಯ ವಿವರ….
ಸೆ.20ರಂದು ಯುವತಿ ತನ್ನ ಪ್ರಿಯಕರ ಮಹಮ್ಮದ್ ಸಲೀಂ ನನ್ನು ಭೇಟಿಯಾಗಲು ಉಡುಪಿಯ ಮಲ್ಪೆಗೆಂದು ಹೊರಟಿದ್ದಳು. ಇದು ಆಕೆಯ ತಾಯಿ ಗುಲ್ಬಾರ್ ಬಾನು ಅವರಿಗೆ ಇಷ್ಟ ಇರಲಿಲ್ಲ. ಅದೇ ಸಂದರ್ಭದಲ್ಲಿ ತಾಯಿ-ಮಗಳ ನಡುವೆ ವಾಗ್ವಾದ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಶಿಫನಾಜ್ ತನ್ನ ತಾಯಿಯ ಮೇಲೆ ದಾಳಿಗೆ ಮುಂದಾಗಿದ್ದಳು. ತಡೆಯುವ ಭರದಲ್ಲಿ ತನ್ನ ಕದಂಬ ಬಾಹುಗಳಿಂದ ಮಗಳ ಕತ್ತನ್ನು ಬಿಗುವಾಗಿ ಒತ್ತಿ ಹಿಡಿದಿದ್ದರು.
ಆ ಸಂದರ್ಭದಲ್ಲಿ ತಾಯಿ-ಮಗಳ ನಡುವೆ ತಳ್ಳಾಟ ಮುಂದುವರಿದಿದ್ದು, ಇಬ್ಬರ ನಡುವೆ ಬಲಾಬಲ ಏರ್ಪಟ್ಟಿತ್ತು. ಕ್ಷಣ ಮಾತ್ರದಲ್ಲಿ ಮಗಳು ಶಿಫನಾಜ್ (17) ಸ್ಥಳದಲ್ಲಿ ಕುಸಿದು ಬಿದ್ದಳು. ಇದರಿಂದ ಭಯಭೀತಳಾದ ತಾಯಿ ಗುಲ್ಬಾರ್ ಬಾನು ಆಸ್ಪತ್ರೆಗೆ ಕರೆದೊದ್ದಿದ್ದು, ಆಕೆ ಅದಾಗಲೇ ಮೃತಪಟ್ಟಿದ್ದಾಳೆಂಬ ಮಾಹಿತಿಯು ಪೊಲೀಸರ ತನಿಖೆಯಿಂದ ಬಯಲಾಗಿತ್ತು.
ಈ ಘಟನೆಯ ವೇಳೆಗೆ ಮನೆಯಲ್ಲಿ ಅವರಿಬ್ಬರು ಮಾತ್ರವೇ ಇದ್ದರೆಂದು ತಿಳಿದುಬಂದಿದೆ.
ಆತ್ಮಹತ್ಯೆ ಎಂಬ ಕಥೆ
ಶಿಫನಾಜ್ ಆತ್ಮಹತ್ಯೆಗೈದಿದ್ದು, ಆಕೆಯನ್ನು ರಕ್ಷಿಸುವ ಭರದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ತನ್ನಿಂದ ರಕ಼ಿಸಲು ಅಸಾಧ್ಯವಾಗಿತ್ತೆಂಬ ಕಟ್ಟುಕತೆಯನ್ನು ಎಣಿದು ತನ್ನ ಪತಿ ಶೇಖ್ ಮುಸ್ತಾಫ್ ಗೆ ನಂಬಿಸುವಂತೆ ಮಾಡಿದ್ದಳು. ಅದರನ್ವಯ ಶಿಫನಾಜ್ (17) ಸೆ. 20ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಶಿಫನಾಜ್ ತಂದೆ ಶೇಖ್ ಮುಸ್ತಾಫ್ ದೂರು ನೀಡಿದ್ದರು.
ತಾಯಿ ಮಗಳ ಮಧ್ಯೆ ಜಗಳವಾಗಿದ್ದು ಕೋಪಗೊಂಡ ಶಿಫನಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರ ತನಿಖೆಯಿಂದಲೇ ಮೊದಲು ಬಯಲು…
ಪೊಲೀಸರ ಸ್ಥಳ ಮಹಜರು ವೇಳೆಗೆ ಆತ್ಮಹತ್ಯೆ ನಿಗೂಢತೆ ಬಯಲಿಗೆ ಬಂದಿತ್ತು. ಯುವತಿ ಆತ್ಮಹತ್ಯೆ ಬಳಸಿದ ಕುಣಿಕೆಯ ಪರಿಕರ ಯಾವುದೆಂದು ಪ್ರಶ್ನಿಸಿದರೆ, ಅಲ್ಲೊಂದು ಇದ್ದ ಶಾಲು ತೆಗೆದು ಒಪ್ಪಿಸಿದ ತಾಯಿ ಗುಲ್ಬಾರ್ ಬಾನು ತನ್ನನ್ನು ಮನ್ನಿಸಿ ಎಂದು ಗೋಗೆರೆಯಲು ಶುರುಮಾಡಿದಳು.
ಶಿಫನಾಜ್ ಸಾವು ಆತ್ಮಹತ್ಯೆಯಲ್ಲ. ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವರದಿ ಪೋಸ್ಟ್ ಮಾರ್ಟಂನಿಂದ ತಿಳಿದುಬಂದ ಹಿನ್ನಲ್ಲೆಯಲ್ಲಿ ಗುಲ್ಬಾರ್ ಬಾನುಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಅಗ ನಡೆದಿರುವ ಎಲ್ಲಾ ಘಟನೆಗಳನ್ನು ಎಳೆ ಎಳೆಯಾಗಿ ಗುಲ್ಬಾರ್ ಬಾನು ತೆರೆದಿಟ್ಟಳು.