ವಾರದ ಬೆಳಕು

ಪ್ರಯತ್ನಕ್ಕೆ ಫಲ
ಹೌದು, ಯಾವತ್ತೂ ಪ್ರಯತ್ನಕ್ಕೇ ಫಲ, ಪ್ರಯತ್ನದಿಂದ ಮಾತ್ರವೇ ಫಲ. ಇದು ಸ್ಪಷ್ಟ. ಅನುಮಾನವೇ ಇಲ್ಲ. ಇದು ಪ್ರತಿಯೊಬ್ಬರಿಗೂ ಅನುಭವ ಸಿದ್ಧ.
ಮಂತ್ರಕ್ಕೆ ಮಾವಿನಕಾಯಿ ಉದುರೀತೇ…?, ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ! ಎಂಬಿತ್ಯಾದಿ ಗಾದೆಮಾತುಗಳಿವೆ. ಇದು ಲಾಗಾಯ್ತಿನಿಂದಲೂ ಜನರ ನಡುವೆ ಚಾಲ್ತಿಯಲ್ಲಿರುವ, ಹಿರಿಯರಿಂದ ಹರಿದುಬಂದ ಸತ್ಯದ ಮಾತು.
ಮಾಡಬೇಕಾದ ಯಾವುದೇ ಕೆಲಸವನ್ನು ಮಾಡದೇ ಇದ್ದರೆ ಏನಾಗಬಹುದೆಂದು ಹೇಳುವ ಅಗತ್ಯವಿಲ್ಲ. ಹಾಗೆಯೇ ಸಣ್ಣದಿರಲಿ, ದೊಡ್ಡದಿರಲಿ ಯಾವುದೇ ಸಾಧನೆಗೂ, ಗುರಿ ಸಾಧನೆಗೂ ಪ್ರಯತ್ನ, ಸತತ ಪರಿಶ್ರಮ ಹಾಕಲೇಬೇಕು. ಇದು ಅನಿವಾರ್ಯ. ಸಾಧನೆಯನ್ನು ಹೊರತುಪಡಿಸಿ ನೋಡುವಾಗಲೂ, ಸಹಜ ಜೀವನ ಪಯಣದಲ್ಲೂ ವಿಧ ವಿಧದ ಸಮಸ್ಯೆಗಳು, ಸಂಕಟಗಳು ಇತ್ಯಾದಿಗಳ ಪರಿಹಾರದಲ್ಲೂ ಬೇಕಾಗಿಬರುವುದು ಪ್ರಯತ್ನವೇ.
ನಂಬಿಕೆ, ಪ್ರಾರ್ಥನೆ ಇತ್ಯಾದಿಗಳಿಂದ ಯಾವ ಸಾಧನೆಯನ್ನೂ ಸಾಧಿಸಲಾಗದು. ಬದುಕಿನಲ್ಲಿ ಆಶಾವಾದ ಬೇಕು. ಆದರೆ ಕೇವಲ ಆಶಾವಾದದಿಂದಲೂ ಸಾಧನೆ ಅಸಾಧ್ಯ.
ಸತತ ಓದಿನ ಪ್ರಯತ್ನದಿಂದ ಸೂಕ್ತ ಅಂಕ – ಉತ್ತೀರ್ಣತೆ, ಸೂಕ್ತ ಅನ್ವೇಷಣೆಯ ಪ್ರಯತ್ನದಿಂದ ಉದ್ಯೋಗ ಪ್ರಾಪ್ತಿ. ವಧು – ವರ ಅನ್ವೇಷಣೆಯಲ್ಲೂ ಹುಡುಕುವ ಪ್ರಯತ್ನ ಮಾಡಬೇಕಾಗುತ್ತದೆ. ಅನಾರೋಗ್ಯ ಬಂದಾಗಲೂ ಕೆಲವೊಮ್ಮೆ ಸೂಕ್ತ – ತಜ್ಞ ವೈದ್ಯರನ್ನು ಹುಡುಕುವ ಪ್ರಯತ್ನ ಮಾಡಬೇಕಾಗುತ್ತದೆ.
ಯಾವುದೇ ಸ್ಪರ್ಧೆಗಳಲ್ಲಿ ಬಹುಮಾನಗಳಿಸಲೂ ಪ್ರಯತ್ನ ಬೇಕೇಬೇಕು. ನಮ್ಮದೀಗ ಸ್ಪರ್ಧಾತ್ಮಕ ಜಗತ್ತು. ಆದ್ದರಿಂದ ಈಗ ಯಾವುದೇ ಸಾಧನೆಗಳಿಗೂ, ಪ್ರತೀ ಯಶಸ್ಸುಗಳಿಗೂ ಪ್ರಯತ್ನ – ಪರಿಶ್ರಮ ಅತೀ ಅಗತ್ಯ.
“ನನಗೆ ನಂಬಿಕೆಯಿದೆ, ನನ್ನ ದೇವರು ನನ್ನ ಕೈಬಿಡಲ್ಲ” ಎಂದು ಕೈಕಟ್ಟಿ ಕುಳಿತರೆ, ಮಲಗಿದರೆ ಏನಾದೀತು ? “ನಾನು ಕೈಮುಗಿದು ಪ್ರಾರ್ಥಿಸಿದ್ದೇನೆ, ದಿನವೂ ಪ್ರಾರ್ಥಿಸುತ್ತೇನೆ, ದಿನಕ್ಕೆ ಮೂರ್ನಾಲ್ಕು ಬಾರಿ ಪ್ರಾರ್ಥಿಸುತ್ತೇನೆ,
ಹಾಗಾಗಿ ನನ್ನ ಕೆಲಸ ಆಗಿಯೇ ಆಗುತ್ತದೆ” ಎಂದು ನಂಬಿ, ಮಾಡಬೇಕಾದ ಪ್ರಯತ್ನವನ್ನು ಮಾಡದೇ ಹೋದರೆ ಏನಾಗಬಹುದು ? ಏನೂ ಆಗದು ತಾನೇ…
ನಂಬಿಕೆ ಬೇಕಾದರೆ ಇರಲಿ, ಪ್ರಾರ್ಥನೆ ಬೇಕಾದರೆ ಮಾಡಿ, ಭಜನೆಯನ್ನೂ ಮಾಡಿ, ಹರಕೆ ಬೇಕಾದರೂ ಹಾಕಿ, ಹೋಮ ಹವನ ಬೇಕಾದರೂ ಮಾಡಿ, ನೂರೊಂದು ದೇವಸ್ಥಾನಕ್ಕೆ ಬೇಕಾದರೂ ಹೋಗಿ ಬನ್ನಿ, ತೀರ್ಥಸ್ನಾನವನ್ನಾದರೂ ಮಾಡಿ, ಆದರೆ ಇದಾವುದನ್ನೂ ಮಾಡಿದರೂ ಆಗಬೇಕಾದ ಕೆಲಸದಲ್ಲಿ, ಮಾಡಬೇಕಾದ ಸಾಧನೆಗಾಗಿ ಪ್ರಯತ್ನ – ಸತತ ಪರಿಶ್ರಮ ಇಲ್ಲದಿದ್ದಲ್ಲಿ ಯಾವುದೂ ನೆರವೇರಲಾರದು.
ಕೆಲವೊಮ್ಮೆ ಒಂದೇ ಪ್ರಯತ್ನ ಸಾಕಾದೀತು. ಇನ್ನು ಕೆಲವೊಮ್ಮೆ ಹಲವು ಪ್ರಯತ್ನ ಬೇಕಾದೀತು. ಹತಾಶರಾಗದೆ ನಿರಂತರವಾಗಿ ಪ್ರಯತ್ನಿಸಿದಾಗ ಈಡೇರಿಯೇ ಈಡೇರುತ್ತದೆ. ಯಶಸ್ಸು ಕಟ್ಟಿಟ್ಟ ಬುತ್ತಿ. ಫಲ ಮಾತ್ರ ಪ್ರಯತ್ನ ಪಟ್ಟಷ್ಟು ಮಾತ್ರ. ಇದು ಗೊತ್ತಿರಲೇಬೇಕು.
ಪ್ರಯತ್ನ ಮಾಡಿದ್ದರಲ್ಲಿ ಯಾವುದೇ ನಷ್ಟವಿಲ್ಲ. ಪ್ರಯತ್ನದಿಂದ ಕೆಲವೊಮ್ಮೆ ಲಾಭ ಆಗದೇ ಇರಬಹುದು. ಆದರೆ ಪ್ರಯತ್ನದ ಫಲವಾಗಿ ನಮಗಾಗುವ ಅನುಭವಗಳು, ಪಾಠಗಳು ಮಾತ್ರ ಅಪಾರವಾದುದು ಆಗಿರುತ್ತದೆ. ಸತತ – ನಿರಂತರ ಪ್ರಯತ್ನ ಫಲವಾಗಿ ಸಿಗುವ ತಿಳಿವಳಿಕೆ, ಅರಿವು, ಜ್ಞಾನ ಪರ್ಯಾಯ ಮಾರ್ಗಕ್ಕೂ ದಾರಿ ತೋರಿಸುವ ಸಾಧ್ಯತೆ ಇರುತ್ತದೆ.
ಪ್ರಯತ್ನಶೀಲರಾಗೋಣ. ಮತ್ಯಾಕೆ ತಡ, ಒಂದು ಪ್ರಯತ್ನ ಮಾಡಿ ನೋಡುವ…
~ ಶ್ರೀರಾಮ ದಿವಾಣ

b





































