“ಪ್ರತಿಷ್ಠಿತ” ಎನ್ನುವ ಪ್ರಶ್ನಾತೀತ ಪ್ರತಿಷ್ಠೆ..!
ಪ್ರತಿಷ್ಠಿತ ಕಾಲೇಜು/ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿನಿ,ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ.
ಪ್ರತಿಷ್ಠಿತ ಮಳಿಗೆಯೊಂದರ ಉದ್ಯೋಗಿ ಅಸಹಜ ಸಾವನ್ನಪ್ಪಿದ್ದಾಳೆ. ಪ್ರತಿಷ್ಠಿತ ಬ್ಯಾಕೊಂದರಲ್ಲಿ ಹಣ ವಂಚನೆಯಾಗಿದ್ದು ಪ್ರಬಂಧಕನನ್ನು ಬಂಧಿಸಲಾಗಿದೆ.
ಪ್ರತಿಷ್ಠಿತ ದೇವಸ್ಥಾನದ ಮೊಕ್ತೇಸರನೊಬ್ಬನನ್ನು ಪೊಕ್ಸೋ ನಿಯಮದಡಿ ಬಂಧಿಸಲಾಗಿದೆ.
ಯಾವುದೇ ಬಣ್ಣದ ಬೇಗಡೆಯ ಕಿರೀಟ ಧರಿಸಿಕೊಂಡಿರದೆ ಕರ್ತವ್ಯನಿಷ್ಠೆಯೊಂದಿಗೆ ಸೇವೆ ಮಾಡುತ್ತಿರುವ ಪುಟ್ಟ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಪ್ರಮಾದವನ್ನು ಪ್ರಕಟಿಸುವಾಗ ಆ ಶಾಲೆಯ ಆಡಳಿತ ವ್ಯಕ್ತಿಯ ಹೆಸರು,ವಿದ್ಯಾರ್ಹತೆ ಹಾಗೂ ಆತನು ಕೃಷಿ ಮಾಡಿಕೊಂಡಿರುವ ಜಾಗದ ವಿಸ್ತೀರ್ಣ ಸಹಿತ ವಿವರಗಳನ್ನು ಮಾಧ್ಯಮ ಪ್ರಕಟಿಸಿ ಎದೆತಟ್ಟಿಕೊಳ್ಳುತ್ತದೆ.
ನಮ್ಮ ದೇಶದ ನಾಗರಿಕತೆಯ ಲಕ್ಷಣಗಳೇ ಹಾಗೆ, ಶ್ರೀಮಂತನ ರಹಸ್ಯ ಕಾಪಾಡುವುದು ಬಡವನ ಮಾನ ಹರಾಜು ಮಾಡುವುದು. ಅಲ್ಲಿ ಅಡಗಿರುವ ಉದ್ದೇಶವೇನೆಂದರೆ ಹಣ ಸಂಪಾದನೆಯ ದಾರಿಗೆ ಅಡ್ಡಿ ಮಾಡಿಕೊಳ್ಳದಿರುವುದು.
ಹೆಸರು ಬಹಿರಂಗವಾಗುವುದು ಕೇವಲ ಮಾಧ್ಯಮಗಳ ಮೂಲಕವೇ ಎಂದು ತಿಳಿದುಕೊಂಡರೆ ಅದು ಮೂರ್ಖತನ.
ಬಾಯಿಂದ ಬಾಯಿಗೆ ಹೋಗುವ ಸುದ್ದಿ ಕೂಡಾ ಪತ್ರಿಕೆ ಹಾಗೂ ಇತರ ಮಾಧ್ಯಮಕ್ಕಿಂತಲೂ ವೇಗವಾಗಿ ಪಸರುತ್ತದೆ.
ಸಮಾಜದಲ್ಲಿ ಹುಟ್ಟಿಕೊಂಡ ಪ್ರಶ್ನಾತೀತರ ವರ್ಗದವರ ಯಾವುದೇ ಕಳಪೆ ಕಸುಬು ಕೂಡಾ ಪ್ರತಿಷ್ಠಿತವೆಂದು ಕರೆಯಲ್ಪಡುತ್ತದೆ. ಹಾಗೆ ಕರೆಯುವವರು ಕೂಡಾ ಆ ಕಸುಬಿನವರಿಗೆ ಪ್ರತಿಷ್ಠಿತ ಮಾಧ್ಯಮದವರು ಎಂತಾಗಿರುತ್ತದೆ ಕೂಡ ! ಕೊಡುಕೊಳ್ಳುವ ಬಿರುದು ಅಷ್ಟೇ ಅದರ ತಾತ್ಪರ್ಯ!
ಮಂಗಳೂರು ವಿ. ವಿ. ನಲ್ಲಿ ವಿದ್ಯಾರ್ಥಿ/ಶಿಕ್ಷಕ ಯಾರದ್ದೇ ಎಡವಟ್ಟು ಸಂಭವಿಸಿದರೆ ಆಗ ನಮಗೆ ಅದು ಪ್ರತಿಷ್ಠೆಯ ವಿ. ವಿ. ಅನಿಸುವುದಿಲ್ಲ. ಕಾರಣ ಅದು ಸರಕಾರಿ. ಮಂಗಳೂರು ವಿ ವಿ ಕಾಲೇಜಿನಲ್ಲಿ ಕೆಟ್ಟ ಘಟನೆ ನಡೆದಾಗಲೂ ಆ ಸುದ್ದಿ ಪತ್ರಿಕೆಯ ಮುಖಪುಟದ ಬಾಟಮ್ ನ್ಯೂಸ್ ಆಗಿಬಿಡುತ್ತದೆ! ಕಾರಣ, ನಮ್ಮಲ್ಲಿರುವ ತಾತ್ಸಾರ ಹಾಗೂ ಅಸ್ಥಿತ್ವಕ್ಕೆ ಧಕ್ಕೆ ತರಬೇಕೆನ್ನುವ ಕೆಟ್ಟ ಚಿಂತನೆ.
ಮಂಗಳೂರಿನ ವೆನ್ ಲಾಕ್ /ಲೇಡಿಗೊಷನ್ ಆಸ್ಪತ್ರೆಯೊಳಗೆ ಸಣ್ಣಪುಟ್ಚ ಸಹಜ ಎಡವಟ್ಟಾಗುವುದೂ ಕೂಡ ಮಾಧ್ಯಮದಲ್ಲಿ ಬ್ರೇಕಿಂಗ್/ಶಾಕಿಂಗ್ ನ್ಯೂಸ್ ಆಗಿ ಪರಿವರ್ತನೆಗೊಳ್ಳುವುದು. ಪತ್ರಿಕೆಗಳಲ್ಲೂ ಕೂಡ ದೊಡ್ಡಕ್ಷರಗಳಲ್ಲಿ ಮುದ್ರಣವಾಗುತ್ತದೆ.
ಒಟ್ಟಾರೆ ಏನೆಂದರೆ ಸರಕಾರಿ ಸಂಸ್ಥೆಗೆ ಜವಾಬ್ದಾರಿ ಇಲ್ಲವೇ ? ಎನ್ನುವ ಪ್ರಶ್ನೆ,ಸವಾಲು.
ಜವಾಬ್ದಾರಿ ಎನ್ನುವ ಅರಿವು ಸರಕಾರದ ಸಂಸ್ಥೆಗಳಿಗೆ ಮಾತ್ರವೇ ಇರಬೇಕೆಂದಾದರೆ ಖಾಸಗಿ ವ್ಯಕ್ತಿಗಳಿಗೆ ಶಾಲೆ/ಆಸ್ಪತ್ರೆ/ಬ್ಯಾಂಕು ಇತ್ಯಾದಿಗಳ ಸ್ಥಾಪನೆಯ ಕಾರುಬಾರು ಯಾಕೆ ಬೇಕಾಗುತ್ತದೆ? ಆತನಲ್ಲಿ ಜವಾಬ್ದಾರಿ ಎಂದಿರುವುದು ನಾಗರಿಕರಿಂದ ಫೀಸು ,ಮಜೂರಿ ,ಬಡ್ಡಿ ಇತ್ಯಾದಿಯನ್ನು ವಸೂಲಿ ಮತ್ತು ಸುಲಿಗೆ ಮಾಡುವುದಕ್ಕೆ ಮಾತ್ರವಾ?
ಒಂದು ಸಮಾಜದಲ್ಲಿ ಪ್ರತಿಷ್ಠಿತ ಹಾಗೂ ಪ್ರತಿಷ್ಠಿತವಲ್ಲದ ಸಂಸ್ಥೆ ಗುರುತಿಸಲ್ಪಡುವುದು ಯಾಕೆ? ಹಾಗೆ ಪ್ರತ್ಯೇಕಿಸುವುದಕ್ಕೆ ಮಾಧ್ಯಮದವರಿಗೆ ಹೇಳಿರುವುದು ಯಾರು? ಖಾಸಗಿ ಸಂಸ್ಥೆಗಳ ಎಂಜಲು ತಿನ್ನುವುದಕ್ಕಾಗಿ ಅವರ ಎಲ್ಲ ತಪ್ಪು,ಅನಾಚಾರ,ವ್ಯಭಿಚಾರಗಳನ್ನು ಸರ್ವಶ್ರೇಷ್ಠ ಎಂದು ಸೇರಿಸಿ ಹೊಗಳುವ ಜನರು ಮತ್ತು ಮಾಧ್ಯಮವನ್ನು ಏನನ್ನಬೇಕು?
ಕೆಲವು ಖಾಸಗಿ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ,ಹೈಸ್ಕೂಲುಗಳಿವೆ .ಅವು ಎಷ್ಟೊಂದು ನಿಯಮಬದ್ಧವಾಗಿ ಸೇವೆ ಒದಗಿಸುತ್ತಿವೆ ಎಂದರೆ ಅಂಥದ್ದನ್ನು ಕಾಣಲು ಹೋಗುವುದಕ್ಕೂ ಯಾವ ಮಾಧ್ಯಮವೂ ಆಸಕ್ತಿಪಡುವುದಿಲ್ಲ. ಇನ್ನು ಕೆಲವು ಅಂಗನವಾಡಿ ಕೇಂದ್ರಗಳಿವೆ, ಅಲ್ಲಿಯ ಮಕ್ಕಳ ಚಟುವಟಿಕೆಯನ್ನು ನೋಡಿದಾಗ ಸ್ವರ್ಗ ಬೇರೆ ಇದೆ ಅಂತ ಯಾವ ಕವಿ ವರ್ಣನೆಯಿದ್ದರೂ ಅದು ಶುದ್ಧ ತಪ್ಪು ಮತ್ತು ಜನರಂಜಿತ ಎನ್ನಬಹುದು. ಅದು ಸರಕಾರಿ ಪ್ರಾಯೋಜಿತವಾದ್ದರಿಂದ ಮಾಧ್ಯದಲ್ಲಿ ಪ್ರಚುರಪಡಿಸುವ ಜವಾಬ್ದಾರಿ ನಮಗೆ ಬೇಡ. ಖಾಸಗಿಯವರ ಕೃತಕ ಕೈ ಕಾಲುಗಳ ಅಡಿಯಲ್ಲಿ ನಡೆಯುವ ಏನೇ ಕೃತ್ಯವಿದ್ದರೂ ಅದಕ್ಕೆ ಪ್ರತಿಷ್ಠೆಯ ಪದ ಸೇರ್ಪಡೆ.
–ವಿ. ಕೆ. ವಾಲ್ಪಾಡಿ






































