ಪ್ರಣಯ್ ಹತ್ಯೆ ಕೇಸ್ – ಅಪರಾಧಿಗೆ ಗಲ್ಲು ಶಿಕ್ಷೆ, ಉಳಿದವರಿಗೆ ಜೀವಾವಧಿ ಶಿಕ್ಷೆ

Picture of RB NEWS

RB NEWS

Bureau Report


ಹೈದರಾಬಾದ್‌: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣದ ಅಪರಾಧಿಗೆ ಇಲ್ಲಿನ ಎಸ್‌ಸಿ/ಎಸ್‌ಟಿ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ದಲಿತ ವ್ಯಕ್ತಿ ಪ್ರಣಯ್ (23) ಎಂಬುವರ ಹತ್ಯೆಯಾಗಿತ್ತು.

ನ್ಯಾಯಾಲಯವು ಪ್ರಕರಣದ ಎರಡನೇ ಆರೋಪಿಯಾದ ಸುಭಾಶ್ ಕುಮಾ‌ರ್ ಶರ್ಮಾಗೆ ಮರಣದಂಡನೆ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕೊಲೆ ಸಂಚನ್ನು ಕಾರ್ಯರೂಪಕ್ಕೆ ತಂದಿದ್ದ ಸುಭಾಶ್ ಬಿಹಾರ ಮೂಲದ ವ್ಯಕ್ತಿ.

ಮೇಲ್ಟಾತಿಯ ಯುವತಿಯನ್ನು ಪ್ರೀತಿಸಿ ಪ್ರಣಯ್ ವಿವಾಹವಾಗಿದ್ದರು. ಇದಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪತಿಯ ಕೊಲೆಯಲ್ಲಿ ತನ್ನ ತಂದೆ ಮಾರುತಿ ರಾವ್ ಪಾತ್ರ ಇದೆ ಎಂದು ಯುವತಿ ಆರೋಪಿಸಿದ್ದರು.

ಕೊಲೆಗೆ ಸುಪಾರಿ:

ಅಳಿಯನ ಕೊಲೆಗೆ ಸಂಚು ರೂಪಿಸಿ, ಸುಪಾರಿ ನೀಡಿದ್ದ ಯುವತಿಯ ತಂದೆ ಮಾರುತಿ ರಾವ್, ಚಿಕ್ಕಪ್ಪ ಸೇರಿದಂತೆ ಎಂಟು ಜನರನ್ನು ಪೊಲೀಸರು 2018ರ ಸೆಪ್ಟೆಂಬರ್ 18ರಂದು ಬಂಧಿಸಿದ್ದರು. ಕೊಲೆಗೆ  1 ಕೋಟಿ ರೂಪಾಯಿ ಸುಪಾರಿಗೆ ಮಾತುಕತೆ ನಡೆಸಿದ್ದ ಯುವತಿಯ ತಂದೆ, ₹ 15 ಲಕ್ಷವನ್ನು ಮುಂಗಡ ಪಾವತಿಸಿದ್ದರು.

ಪ್ರಕರಣದಲ್ಲಿ ಮಾರುತಿ ರಾವ್ ಮೊದಲ ಆರೋಪಿಯಾಗಿದ್ದರೆ, ಸುಭಾಶ್ ಕುಮಾರ್ ಶರ್ಮಾ ಎರಡನೇ ಆರೋಪಿ. ಇವರೂ ಸೇರಿದಂತೆ ಇತರ ಆರೋಪಿಗಳಾದ ಅಸ್ಲರ್ ಅಲಿ, ಬಾರಿ, ಕರೀಂ, ಶ್ರವಣ ಕುಮಾ‌ರ್ (ಯುವತಿಯ ಚಿಕ್ಕಪ್ಪ), ಶಿವ, ನಿಜಾಂ ವಿರುದ್ಧ ಪೊಲೀಸರು 2019ರಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಬಂಧಿತರಲ್ಲಿ ಇಬ್ಬರು, ಗುಜರಾತಿನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. 2020ರಲ್ಲಿ ಲಾಡ್ಜ್‌ವೊಂದರಲ್ಲಿ ಮಾರುತಿ ರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top