



ಪ್ರಜೆಗಳು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು -ನ್ಯಾಯಾಧೀಶೆ ಶರ್ಮಿಳಾ ಸಿ. ಎಸ್
ಕಾರ್ಕಳ : ಪ್ರಜೆಗಳು ತಮ್ಮ ಹಕ್ಕುಗಳನ್ನು ಅರಿತು ಪರಿಪಾಲನೆ ಮಾಡಿಕೊಂಡಾಗ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ರೀತಿಯಲ್ಲಿ ಅರ್ಥ ಬರುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶೆ ಶರ್ಮಿಳಾ ಸಿ. ಎಸ್ ಅಭಿಮತ ವ್ಯಕ್ತಪಡಿಸಿದರು.
ಎಸ್.ವಿ.ಟಿ. ಗರ್ಲ್ಸ್ ಪಿ.ಯು. ಕಾಲೇಜಿನಲ್ಲಿ ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಮತ್ತು ಎಸ್.ವಿ.ಟಿ. ಗರ್ಲ್ಸ್ ಪಿ.ಯು. ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಮಾನವ ಹಕ್ಕು ದಿನಾಚರಣೆ ಸಲುವಾಗಿ ಉಚಿತ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯವಾದಿಗಳ ಸಂಘ (ರಿ.) ಉಪಾಧ್ಯಕ್ಷ ಹರೀಶ್ ಅಧಿಕಾರಿ ಮಾತನಾಡಿ, ನಾವು ನಮ್ಮ ಹಕ್ಕುಗಳನ್ನು ಅನುಭವಿಸುತ್ತಾ ಇನ್ನೊಬ್ಬರ ಹಕ್ಕಿಗೆ ಧಕ್ಕೆ ತರಬಾರದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಶುಭರಾಜ್ ವಾಮನ್, ಸಂವಿಧಾನ ನಮಗೆ ನೀಡಿದ ಮಾನವ ಹಕ್ಕುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್. ವಿ. ಎಜುಕೇಶನ್ ಟ್ರಸ್ಟ್ (ರಿ.) ಕಾರ್ಯದರ್ಶಿ ಕೆ.ಪಿ. ಶೆಣೈ ನಮ್ಮ ಹಕ್ಕಿಗೆ ಧಕ್ಕೆ ಬಂದಾಗ ನಾವು ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಎಂದು ತಿಳಿಸಿದರು. ಪ್ರಬಲ ರಾಷ್ಟ್ರಗಳು ಮಾನವ ಹಕ್ಕಿಗೆ ಧಕ್ಕೆ ಬಂದಾಗ ಅದನ್ನು ಸರಿಪಡಿಸುವಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ನೇಮೀರಾಜ್ ಶೆಟ್ಟಿ ಕೆ. ಸ್ವಾಗತಿಸಿದರು. ಉಪನ್ಯಾಸಕ ಪ್ರಭಾತ್ ರಂಜಿತ್ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಯೋಗೇಂದ್ರ ನಾಯಕ್ ವಂದನಾರ್ಪಣೆಗೈದರು.




































