ಪ್ರಕೃತಿ ಮಾತೆಗೆ ಪೂಜನ ಶ್ರಾವಣಮಾಸದ ಆಗಮನ “ಚೂಡಿ ಪೂಜೆ”

Picture of RB NEWS

RB NEWS

Bureau Report


ಮಳೆಗಾಲದ ಸಮಯದಲ್ಲಿ ಹಬ್ಬಗಳ ಆಗಮನದ ಮುನ್ಸೂಚನೆ ಚೂಡಿ ಪೂಜೆ ಎಂಬ ವಿಶಿಷ್ಟ ಪೂಜೆ ಇದು ಪ್ರಥಮ ಹಬ್ಬ ಎಂದರೆ ತಪ್ಪಾಗಲಾರದು. ಈ ಭಕ್ತಿಯುತ ಕಾರ್ಯಕ್ರಮವು ನಮ್ಮ ಹೆಮ್ಮೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ತಲೆತಲಾಂತರದಿಂದಲಿ ನಡೆಸಿ ಬಂದ ರೂಢಿಯಾಗಿರುವುದು. ಇದರ ಮೂಲಾಂಶ ಹಲವರಿಗೆ ತಿಳಿದರೂ ಕೆಲವರಿಗೆ ತಿಳಿದಿಲ್ಲ.
ಪ್ರಕೃತಿಯಿಂದ ಬಂದ ಈ ನಮ್ಮ ಕಾಯದ ಬದುಕು ಮುಂದೆ ಈ ಪ್ರಕೃತಿಯಲ್ಲಿಯೇ ಲೀನವಾಗುವುದೆಂಬುದಂತು ಸತ್ಯ, ನಾವೆಲ್ಲರೂ ಈ ಪವಿತ್ರ ಪ್ರಕೃತಿಯ ಒಂದು ಭಾಗ, ಹಾಗೆಯೇ ದೇವ ನಿರ್ಮಿತ ಪ್ರಕೃತಿಯಲ್ಲಿ ನಮ್ಮಂತೆ ಹಲವಾರು ಪ್ರಾಣಿ ಪಕ್ಷಿ, ಕ್ರಿಮಿ ಕೀಟಗಳಲ್ಲದೆ ಉರಗ ಮತ್ತು ಜಲಚರಗಳು ಕೂಡಾ ಜೀವನವನ್ನು ನಡೆಸುತಿಹವು ಎಂಬುದನ್ನು ನಾವು ಮರೆಯಬಾರದು.
ಕೇವಲ ಜೀವಿಗಳಲ್ಲದೆ ಫಲ ನೀಡುವ ಮರಗಳು ಪುಷ್ಪಗಳನ್ನು ನೀಡುವ ಗಿಡಗಳೊಂದಿಗೆ ರೋಗ ಪರಿಹರಿಸುವ ಮದ್ದಿನ ಗಿಡಬಳ್ಳಿಗಳು ಅಲ್ಲದೆ ವಿಶೇಷವಾಗಿ ಅಸನ (ಅಸಣ) ನೀಡುವ ಬೆಳೆಗಳು ಮತ್ತು ಬದುಕಲು ಅಗತ್ಯವಾದ ಜಲಸಂಪನ್ಮೂಲ ಕೂಡಾ ಈ ಪ್ರಕೃತಿಯ ಕೊಡುಗೆಯಲ್ಲವೆ.
ಮಾನವರಾದ ನಾವು ಇವುಗಳನ್ನೆಲ್ಲಾ ಉಳಿಸಬೇಕಲ್ಲವೆ. ಇದು ಧರ್ಮದ ಕಾರ್ಯವಲ್ಲವೆ.
ಇಂದು ವಿಜ್ಞಾನ ಎಷ್ಟು ಮುಂದುವರಿದರೂ ಕೂಡಾ ಪ್ರಕೃತಿಯ ಎದುರು ಅದು ಶೂನ್ಯ. ಪ್ರಕೃತಿಯು ಮುನಿದರೆ ಜೀವನದ ಆಕೃತಿಯು ಬದಲಾಗಿ ವಿಕೃತಿ ಸನ್ನಿವೇಶಗಳು ಪ್ರಕಟವಾಗುವುದು.
ಸಣ್ಣ ಸಣ್ಣ ಕೆಲಸಗಳಿಗೆ ಧನ್ಯವಾದವನ್ನು ನೀಡುವ ನಾವು ನಮ್ಮೊಡನೆ ಇಷ್ಟೆಲ್ಲಾ ಅದ್ಭುತಗಳನ್ನು ಸೃಷ್ಟಿಸಿದ ಪ್ರಕೃತಿ ಎಂಬ ಮಾತೆಯನ್ನು ನೆನೆಸಬೇಕಲ್ಲವೆ, ಆಕೆಯನ್ನು ಪೂಜಿಸಬೇಕಲ್ಲವೆ.
ಪೂಜೆ ಎಂದ ಮೇಲೆ ಪ್ರಥಮವಾಗಿ ಬೇಕಾಗಿರುವುದು ಪ್ರಕೃತಿ ಮಾತೆಯ ಸ್ಥಾನ, ಆಚರಣಾ ವಿಧಾನ, ಅದರೊಂದಿಗೆ ಪೂಜೆಗೆ ಬೇಕಾಗುವ ಸಾಹಿತ್ಯ ಸಾಮಾಗ್ರಿಗಳು.
ಅದಕ್ಕಾಗಿಯೇ ಈ ಪೂಜೆಯನ್ನು ಮನೆಯಂಗಳದ ತುಳಸಿಕಟ್ಟೆಯಲ್ಲಿ ನಡೆಸುವರು. ಇಲ್ಲಿ ಮಾತಾ ಸ್ವರೂಪಿ ತುಳಸಿಯೇ ಪ್ರಧಾನ, ತುಳಸಿ ಗಿಡ ಅದು ಆಯುರ್ವೇದ ಔಷಧದ ಒಂದು ಭಾಗ ಅಲ್ಲದೆ ಧರ್ಮಗ್ರಂಥದ ಪ್ರಕಾರ ತುಳಸಿಯನ್ನು ಹರಿವಲ್ಲಭೆ, ಕೃಷ್ಣಪ್ರಿಯೆ ಎಂದು ಕರೆಯುತ್ತಾರೆ. ಹಾಗಾದರೆ ಯಾರು ಈ ಕೃಷ್ಣ ಪ್ರಿಯೆ, ಅವಳು ಬೇರೆ ಯಾರೂ ಅಲ್ಲ ಸಾಕ್ಷಾತ್ ಶ್ರೀ ಮಹಾಲಕ್ಷ್ಮೀಯೇ ಅವಳು. ಇವಳು ಕೂಡಾ ಪ್ರಕೃತಿಯಿಂದಲೇ ಪ್ರಕಟವಾದುದು. ಸಮುದ್ರ ಮಂಥನ ಸಮಯದಲ್ಲಿ ಪಾಲ್ಗಡಲಿನೊಳಗಿಂದ ಅಮೃತ ಕಲಶ ಸಹಿತ ಕಮಲಪುಷ್ಪದ ಮೇಲೆ ನಿಂತು ಭೂಗರ್ಭಕ್ಕೆ ಇಳಿದು ಬಂದವಳು. ಆದ್ದರಿಂದ ಈ ಪೂಜಾಸ್ಥಾನಕ್ಕೆ ಯಾವುದೇ ಗರ್ಭಗುಡಿ ಇಲ್ಲ ಭೂಮಿಯೇ ಗರ್ಭಗ್ರಹ ಮತ್ತು ಆಕಾಶವೇ ಸೂರು. ಈ ಮಹೋನ್ನತ ಪೂಜಾ ಕಾರ್ಯಕ್ರಮವು ತುಳಸಿಕಟ್ಟೆಯಲ್ಲಿಯೇ ನಡೆಸುವರು. ಇಲ್ಲಿ ಪೂಜೆಗೆ ಪುರೋಹಿತರ ಸಹಕಾರದ ಅಗತ್ಯ ಇಲ್ಲ, ಮನೆಯ ಸುಮಂಗಲೆಯರು ಎಲ್ಲಾ ಸೇರಿ ನಡೆಸುವ ವಿಶಿಷ್ಟವಾದ ಕಾರ್ಯಕ್ರಮವಿದು.
ವಿಶೇಷ ಎಂದರೆ ಮನೆಯ ಹತ್ತಿರ ಸಿಗುವ ಔಷಧಯುಕ್ತ ಗರಿಕೆ ಹುಲ್ಲು ಇಲ್ಲಿ ಪ್ರಧಾನ ಇದನ್ನು ಕೊಂಕಣಿ ಭಾಷೆಯಲ್ಲಿ ದಿಬ್ರಾಂಕೂರು (ದಿರ್ಬಾಂಕೂರು) ಎಂದು ಕರೆಯುತ್ತಾರೆ. ಇದು ವಿಘ್ನ ನಾಶಕ ವಿಘ್ನೇಶ್ವರನಿಗೆ ಅತೀ ಪ್ರಿಯವಾದ ಗರಿಕೆ.
ಈ ದಿಬ್ರಾಂಕೂರಿನೊಂದಿಗೆ ಕಾಡು ಮೇಡಿನ ಪುಷ್ಪಗಳು ಮತ್ತು ಹಲವು ರೀತಿಯ ಮಳೆಗಾಲದಲ್ಲಿ ದೊರೆಯುವ ಹುಲ್ಲು ಕಡ್ಡಿಗಳು ಅರ್ಥಾತ್ ಮಾಜ್ರಾನಂಕುಟ, ಆರತಿ, ಕಾಯ್ಳೇದೊಳೋ, ಗಾಂಟೆಮಾಡ್ಡಿ, ಲಾಯೆಮಾಡ್ಡಿ,ಆವಳೇಮಾಡ್ಡಿ,ಅನ್ವಾಳಿ,ಪಾಚ್ಚುಕಣಸ, ರಥಪೂಲ, ಚಿರ್ಡೋ,ಗೋರ್ಟಿ, ಶಂಖಪುಷ್ಪ, ಇತ್ಯಾದಿ ಇತ್ಯಾದಿ ( ಸಾಹಿತ್ಯದ ಹೆಸರುಗಳು ಕೊಂಕಣಿ ಭಾಷೆಯಲ್ಲಿ ಇದೆ) ಹಲವಾರು ಸಾಹಿತ್ಯಗಳನ್ನೆಲ್ಲಾ ಒಂದುಗೂಡಿಸಿ ಕಟ್ಟಿದ ಈ ಗೊಂಚಲನ್ನು ಕೊಂಕಣಿ ಭಾಷೆಯಲ್ಲಿ ಚೂಡಿ ಎಂದು ಕರೆಯುವರು.
ಪ್ರಕೃತಿಯ ಈ ಕೊಡುಗೆಗಳನ್ನು ಪ್ರಕೃತಿಮಾತೆಗೆ ಶೃದ್ಧಾ ಭಕ್ತಿಯಿಂದ ಅರ್ಪಿಸುವ ಈ ಪೂಜೆಗೆ ಚೂಡಿ ಪೂಜೆ ಎಂದು ಕರೆಯುತ್ತಾರೆ. ನೈಜವಾಗಿ ನೋಡಿದರೆ ಇದು ಕೇವಲ ಪೂಜೆ ಮಾತ್ರವಲ್ಲ ಪ್ರಕೃತಿ ಮಾತೆಗೆ ನೀಡುವ ಕೃತಜ್ಞತೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಹೆತ್ತ ತಾಯಿತಂದೆಗೆ ಮತ್ತು ದೇವರುಗಳಿಗೆ ಧನ್ಯವಾದವನ್ನು ನೀಡುವುದು ಅದು ಸರಿಯಲ್ಲ . ಅದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ಪೂಜೆಯನ್ನು ನಡೆಸಲಾಗುವುದು.
ಧೀರ್ಘ ಸುಮಂಗಲಿತ್ವವನ್ನು ಕಾಯಲು ಈ ಚೂಡಿ ಪೂಜೆಯನ್ನು ಅನಾದಿ ಕಾಲದಿಂದಲಿ ಆಚರಿಸಿ ಬಂದಿರುವರು. ಇಂದು ಕೂಡಾ ವೈಭವದಿಂದ ನಡೆಸುತ್ತಿರುವರು.
ಪೂಜಿಸಿದ ಚೂಡಿಯನ್ನು ಪ್ರಥಮವಾಗಿ ತುಳಸಿ ಮಾತೆಗೆ ಸಮರ್ಪಿಸಿ ತದನಂತರ ಹಳದಿ ಕುಂಕುಮ ವೀಳ್ಯ ಸಹಿತ ಹೊಸ್ತಿಲಲ್ಲಿ ಇಟ್ಟು, ಅಲ್ಲಿಂದ ಮನೆಯೊಳಗೆ ಮನೆದೇವರಿಗೆ ಸಮರ್ಪಿಸುವರು. ಇಲ್ಲಿಗೆ ಪೂಜೆ ಮುಗಿಯುವುದು.
ಮುಂದೆ ಜಲದೇವಿಯ ಸನ್ನಿಧಾನವಾದ ಹಿತ್ತಲಿನ ಬಾವಿ ಕಟ್ಟೆಗೆ, ಕಲ್ಪವೃಕ್ಷಕ್ಕೆ ಹಳದಿ ಕುಂಕುಮ ವೀಳ್ಯ ಸಹಿತ ಸಮರ್ಪಿಸಿ , ಗತಿಸಿದ ಮನೆಯ ಹಿರಿತಲೆಗಳಿಗೆ ಸಮರ್ಪಿಸಲು ಆಕಾಶದತ್ತ ಮುಖಮಾಡಿ ಮನೆಯ ಸೂರಿನತ್ತ ಎಸೆದು ಗೌರವಿಸುವರು. ಇದಾದ ಮೇಲೆ ಊರಿನಲ್ಲಿನ ದೇವತೆಗಳಿಗೆ ವೀಳ್ಯ ಸಹಿತ ಸಮರ್ಪಿಸಿ ಅಭಯವನ್ನು ಯಾಚಿಸುವರು.
ಮತ್ತು ಕುಟುಂಬದಲ್ಲಿ ಹಿರಿಯ ಕಿರಿಯ ಎನ್ನದೆ ಎಲ್ಲಾ ಸುಮಂಗಲೆಯರಿಗೆ ನೀಡಿ ಸಂಬಂಧವನ್ನು ಉಳಿಸಬಯಸುವರು. ಇಲ್ಲಿ ಹಿರಿಯರಿಗೆ ವೀಳ್ಯ ಸಹಿತ ಚೂಡಿಯನ್ನು ನೀಡಿ ಅವರಿಂದ ಆಶೀರ್ವಾದವನ್ನು ಪಡೆಯುವರು.

ಪೂರ್ತಿಮಹಿಳಾ ಕಾರ್ಯಕ್ರಮವಾದ ಈ ಚೂಡಿ ಪೂಜೆ ಎಷ್ಟೊಂದು ಸುಂದರ, ವರ್ಣನಾತೀತ

ಈ ಪೂಜೆಯನ್ನು ಶ್ರಾವಣ ಮಾಸದ ಎಲ್ಲಾ ಶುಕ್ರವಾರ ಮತ್ತು ಆದಿತ್ಯವಾರ ದಿನ ಬೆಳಿಗ್ಗಿನ ಜಾವ-ಮಧ್ಯಾಹ್ನ ಹನ್ನೆರಡರ ನಡುವಿನ ಸಮಯದಲ್ಲಿ ನಡೆಸುವುದು ರೂಡಿ

ಎಲ್ಲಾ ಸುಮಂಗಲೆಯರಿಗೆ ಚೂಡಿ ಪೂಜೆಯ ಶುಭಾಶಯಗಳು…

ಕಾಂತಾವರ ಶಿವಾನಂದ ಶೆಣೈ ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top