


ಪ್ರಕೃತಿಗೆ ಮರಳಿ ನೀಡದೆ ಪ್ರತಿಕ್ಷಣ ಬಳಸುತ್ತಿದ್ದೇವೆ: ಆರ್.ಕೆ. ನಾಯರ್
ಮೂಡುಬಿದಿರೆ: ಪ್ರಕೃತಿಯ ಸಂಪನ್ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿರುವ ಮಾನವ, ಅವುಗಳನ್ನು ನಿರಂತರವಾಗಿ ಬಳಸುತ್ತಿದ್ದರೂ ಪ್ರಕೃತಿಗೆ ತನ್ನ ಋಣವನ್ನು ತೀರಿಸುವ ಕಿಂಚಿತ್ತು ಪ್ರಯತ್ನ ಮಾಡುತ್ತಿಲ್ಲ ಎಂದು ‘ಗ್ರೀನ್ ಹೀರೋ ಆಫ್ ಇಂಡಿಯಾ’ ಖ್ಯಾತಿಯ ಆರ್.ಕೆ. ನಾಯರ್ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ “ಮೈ ಪ್ಲಾನೆಟ್, ಮೈ ಪ್ರೈಡ್” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಭಾಷಾ ವೈವಿಧ್ಯತೆ ಮತ್ತು ಜೀವ ವೈವಿಧ್ಯತೆಯನ್ನು ಹೋಲಿಕೆ ಮಾಡಿದ ನಾಯರ್, ವಿವಿಧ ಭಾಷೆಗಳು ಹೇಗೆ ಪರಸ್ಪರ ಸಹಬಾಳ್ವೆಯಿಂದ ಬೆಳೆಯುತ್ತವೆಯೋ, ಅದೇ ರೀತಿ ಪರಿಸರ ವ್ಯವಸ್ಥೆಯೂ ವೈವಿಧ್ಯತೆ ಮತ್ತು ಪರಸ್ಪರ ಅವಲಂಬನೆಯ ಮೇಲೆ ನಿಂತಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಟ್ಟಗಳು, ನದಿಗಳು, ಕಾಡುಗಳು ಹಾಗೂ ಜೀವಜಗತ್ತು ಯಾವುದನ್ನೂ ಮಾನವ ಸೃಷ್ಟಿಸಿಲ್ಲ. ಇವೆಲ್ಲವೂ ಪ್ರಕೃತಿಯ ಕೊಡುಗೆಗಳು.
ತಮ್ಮ ಪರಿಸರ ಯೋಜನೆಗಳ ಅನುಭವ ಹಂಚಿಕೊಂಡ ಅವರು, ತಮ್ಮ ಪರಿಸರ ಯೋಜನೆಗಳ ಯಶಸ್ಸಿನಿಂದ ಜನರು ತಮ್ಮನ್ನು ‘ಬಾಬಾ’ ಅಥವಾ ಪವಾಡಪುರುಷನಂತೆ ಕಾಣುವುದುಂಟು. ಆದರೆ ಯಾವುದೇ ಪವಾಡವಿಲ್ಲ; ಪ್ರಕೃತಿಯ ಶಕ್ತಿಯನ್ನು ಅರ್ಥಮಾಡಿಕೊಂಡು ಅದರೊಂದಿಗೆ ಕೆಲಸ ಮಾಡಿದಾಗ ಇಂತಹ ಫಲಿತಾಂಶಗಳು ಸಾಧ್ಯವಾಗುತ್ತವೆ ಎಂದರು.
ಸಮುದ್ರ ತೀರದ ಉಪ್ಪುಮಣ್ಣಿನ ಪ್ರದೇಶಗಳಂತಹ ಅತ್ಯಂತ ಸವಾಲಿನ ಪರಿಸರದಲ್ಲಿಯೂ ಮಿಯಾವಾಕಿ ಮಾದರಿಯ ಅರಣ್ಯಗಳನ್ನು ಯಶಸ್ವಿಯಾಗಿ ನಿರ್ಮಿಸಿರುವ ಅನುಭವವನ್ನು ಹಂಚಿಕೊAಡ ಅವರು, ಆರಂಭದಲ್ಲಿ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಅನೇಕ ಯೋಜನೆಗಳು ಇಂದು ಪರಿಸರ ಪುನಶ್ಚೇತನದ ಯಶಸ್ವಿ ಮಾದರಿಗಳಾಗಿವೆ. ಗುಜರಾತಿನ ಸ್ಮೃತಿವನ ಯೋಜನೆಯನ್ನು ಉದಾಹರಿಸಿದ ಅವರು, ದೃಢಸಂಕಲ್ಪ, ಜನಸಹಭಾಗಿತ್ವ ಹಾಗೂ ದೂರದೃಷ್ಟಿಯ ಯೋಜನೆಯೊಂದಿಗೆ ಹಾಳಾಗಿರುವ ಭೂಭಾಗಗಳನ್ನೂ ಹಸಿರು ಸಂಪತ್ತಾಗಿ ಪರಿವರ್ತಿಸಬಹುದು ಎಂಬುದನ್ನು ಈ ಯೋಜನೆ ಸಾಬೀತುಪಡಿಸಿದೆ ಎಂದರು.
ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ, ಅಧಿಕಾರಿಗಳು ಅಥವಾ ರಾಜಕಾರಣಿಗಳ ಜವಾಬ್ದಾರಿ ಮಾತ್ರವಲ್ಲ. ನಾಗರಿಕ ಪ್ರಜ್ಞೆ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಬಟ್ಟೆ ಕೊಳೆಯಾದರೆ ಬದಲಾಯಿಸಬಹುದು. ಆದರೆ ಭೂಮಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ವಚ್ಛತೆ, ನಾಗರಿಕ ಪ್ರಜ್ಞೆ ಮತ್ತು ಪರಿಸರದ ಬಗ್ಗೆ ಗೌರವ ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು ಎಂದು ಅವರು ಹೇಳಿದರು.
ಆಳ್ವಾಸ್ ಆವರಣದಲ್ಲಿ ಕಾಪಾಡಿಕೊಂಡಿರುವ ಹಸಿರು ಮತ್ತು ಸ್ವಚ್ಛ ವಾತಾವರಣವನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಬೇಕು, ನೀರು ಸಂರಕ್ಷಿಸಬೇಕು, ತ್ಯಾಜ್ಯವನ್ನು ಕಡಿಮೆ ಮಾಡಬೇಕು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.





































