ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಸಂತ್ರಸ್ತೆಯ ಮಾನಹಾನಿ ಮಾಡಿದರೆ ಕಠಿಣ ಕ್ರಮ – ಎಸ್ಪಿ ಎಚ್ಚರಿಕೆ

Picture of RB NEWS

RB NEWS

Bureau Report

  1. ↩︎


ಉಡುಪಿ, ನ.2: ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಾನಹಾನಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಇಂತಹ ಕೃತ್ಯಗಳಲ್ಲಿ ತೊಡಗಿರುವ ಸುಮಾರು 150 ಸಾಮಾಜಿಕ ಜಾಲತಾಣ ಖಾತೆಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ, ಆಡಿಯೋ ದಾಖಲೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಮಾಹಿತಿ ನೀಡಿದ ಎಸ್ಪಿ, ಘಟನೆಗಳ ಸಂಪೂರ್ಣ ಸತ್ಯಾಂಶ ತಿಳಿಯದೆ ಕಳೆದ ಎರಡು ದಿನಗಳಿಂದ ಸಂತ್ರಸ್ತ ಮಹಿಳೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಲಾಗುತ್ತಿದೆ. ಆಕೆ ಮತ್ತು ಪ್ರದೀಪ್ ಪೂಜಾರಿಗೆ ಸಂಬಂಧಿಸಿದ ಖಾಸಗಿ ಫೋಟೋಗಳನ್ನು ಹಂಚಿಕೊಂಡು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.
ಸಂತ್ರಸ್ತೆಯನ್ನೇ ಗುರಿಯಾಗಿಸಿ ಅಪಪ್ರಚಾರ ನಡೆಸಿದರೆ ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ಒಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ. ಆದರೆ ಆತನಿಗೆ ನ್ಯಾಯ ಕೊಡಿಸುವ ಹೆಸರಿನಲ್ಲಿ ಸಂತ್ರಸ್ತೆಗೆ ಅನ್ಯಾಯ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೂರು ಪ್ರತ್ಯೇಕ ಘಟನೆಗಳ ಬಗ್ಗೆ ಮಾಹಿತಿ1
2020ರ ನವೆಂಬರ್ 10ರಂದು ಸಂತ್ರಸ್ತ ಯುವತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪ್ರದೀಪ್ ಪೂಜಾರಿ ಕಾರಿನಲ್ಲಿ ಬಂದು ಅಡ್ಡಗಟ್ಟಿ, ತನ್ನನ್ನು ಮದುವೆಯಾಗಬೇಕು; ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರು ನೀಡಲಾಗಿತ್ತು. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರದೀಪ್‌ನನ್ನು ಬಂಧಿಸಲಾಗಿತ್ತು.
ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರದೀಪ್, 2025ರ ನವೆಂಬರ್ 29ರಂದು ಯುವತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ, ತಲೆಯ ಮೇಲೆ ಕಲ್ಲು ಹಾಕುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ದೂರಿನ ಜೊತೆಗೆ ವೈದ್ಯಕೀಯ ಹೇಳಿಕೆ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರದೀಪ್, 2026ರ ಅಕ್ಟೋಬರ್ 28ರಂದು ರಾತ್ರಿ ಯುವತಿ ಮನೆಯಲ್ಲಿ ಸ್ನಾನ ಮುಗಿಸಿ ಹೊರಬಂದ ಸಂದರ್ಭದಲ್ಲಿ ಖಾರದ ಪುಡಿ ಹಾಗೂ ಬಟ್ಟೆ ಹಿಡಿದುಕೊಂಡು ಆಕೆಯ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ತಡೆಯಲು ಬಂದ ಯುವತಿಯ ತಾಯಿಯ ಕಣ್ಣಿಗೂ ಖಾರದ ಪುಡಿ ಎರಚಿದ್ದಾನೆ ಎಂದು ಎಸ್ಪಿ ವಿವರಿಸಿದರು.
ಅಪಹರಣ ಮಾಡಿ ಹಲ್ಲೆ ನಡೆಸಿದ ಆರೋಪ ಸುಳ್ಳು
ಪ್ರದೀಪ್‌ನನ್ನು ಅಪಹರಿಸಿ ಮನೆಗೆ ಕರೆತಂದು ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಎಸ್ಪಿ ಹೇಳಿದರು. ಘಟನೆಯ ಸಂದರ್ಭದಲ್ಲಿ ಸಂತ್ರಸ್ತೆ ದಾಖಲಿಸಿಕೊಂಡ ಆಡಿಯೋದಲ್ಲಿ ಪ್ರದೀಪ್ ತನ್ನನ್ನು ಕೊಲ್ಲಲು ಬಂದಿರುವುದಾಗಿ ತಿಳಿಸಿರುವುದು ದಾಖಲಾಗಿದೆ. ಪೊಲೀಸರ ವಿಡಿಯೋ ದಾಖಲೆಯಲ್ಲಿಯೂ ಪ್ರದೀಪ್ ಇದೇ ವಿಚಾರವನ್ನು ಹೇಳಿದ್ದಾನೆ. ಆತ ಸಂತ್ರಸ್ತೆಯ ಮನೆಗೆ ಬಂದಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ಆತ ತಂದಿದ್ದ ಬಟ್ಟೆ ಹಾಗೂ ಖಾರದ ಪುಡಿಯೂ ದೊರೆತಿವೆ ಎಂದು ತಿಳಿಸಿದರು.
ಹಿರಿಯಡ್ಕ ಎಸ್‌ಐ ವಿರುದ್ಧ ಶಿಸ್ತು ಕ್ರಮ
ಅಕ್ಟೋಬರ್ 28ರಂದು ನಡೆದ ಘಟನೆಯ ವೇಳೆ ಸಂತ್ರಸ್ತೆಯ ತಾಯಿ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಏಳೆಂಟು ಮಂದಿ ಪ್ರದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂಬಂಧ ಪ್ರದೀಪ್ ದೂರು ನೀಡಿದ್ದರೂ ಹಿರಿಯಡ್ಕ ಠಾಣೆಯ ಎಸ್‌ಐ ನೇರವಾಗಿ ಎಫ್‌ಐಆರ್ ದಾಖಲಿಸದೆ ದೂರು ಮಾತ್ರ ಸ್ವೀಕರಿಸಿದ್ದರು. ಇದು ಕರ್ತವ್ಯಲೋಪವಾಗಿದ್ದು, ಎಸ್‌ಐ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಎಸ್‌ಐ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಪಶ್ಚಿಮ ವಲಯ ಐಜಿಪಿ ಅವರಲ್ಲಿ ವರದಿ ಮಾಡುವಂತೆ ಸೂಚಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಕರ್ತವ್ಯಲೋಪ ಕಂಡುಬಂದರೆ ಹೆಚ್ಚುವರಿ ಕ್ರಮ ಕೈಗೊಳ್ಳಲಾಗುವುದು. ಅವರು ಇನ್ನು ಮುಂದೆ ಹಿರಿಯಡ್ಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸದಂತೆ ಕ್ರಮ ವಹಿಸಲಾಗಿದೆ ಎಂದರು.
ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ
ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಹಾಗೂ ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಯನ್ನು ಹಿರಿಯಡ್ಕ ಠಾಣೆಯ ಬದಲಾಗಿ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಆರೋಪಿಗಳ ಪತ್ತೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಸ್ಪಿ ಎಚ್ಚರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top