ಪುಸ್ತಕ ಓದುವುದರಿಂದ ಹೊಸ ಬದುಕು ಹುಟ್ಟುವುದು -ಡಾ. ನಾಗತಿಹಳ್ಳಿ ಚಂದ್ರಶೇಖರ್

ಕ್ರಿಯೇಟಿವ್ ಪುಸ್ತಕ ಧಾರೆ ಪ್ರಕಟಣೆಗಳ ಬಿಡುಗಡೆ
ಕಾರ್ಕಳ : ಕೆಲವು ಉತ್ಸಾಹಿಗಳು ಸೇರಿದರೆ ಯಾವ ರೀತಿಯ ಸಂಸ್ಥೆಯನ್ನು ನಿರ್ಮಿಸಬಹುದು ಎಂಬುದಕ್ಕೆ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ವಿದ್ಯಾ ಸಂಸ್ಥೆಯೆ ಒಂದು ಉತ್ತಮ ಉದಾಹರಣೆ ಎಂಬುದಾಗಿ ಖ್ಯಾತ ಸಾಹಿತಿ,ಸಿನೆಮಾ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕ್ರಿಯೇಟಿವ್ ಪ. ಪೂ. ಕಾಲೇಜಿನ ಕ್ರಿಯೇಟಿವ್ ಪುಸ್ತಕಧಾರೆ-2025 ರ 22 ಪ್ರಕಟಿತ 22ಪುಸ್ತಕಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.
ವಿದ್ಯಾ ಸಂಸ್ಥೆಯದೇ ಶಿಕ್ಷಕ ವೃಂದದವರು,ಅವರಲ್ಲಿರುವ ಸಾಹಿತಿಗಳು,ಸಾಹಿತ್ಯಾಸಕ್ತರು ಒಳಗೊಂಡು ಪುಸ್ತಕಮನೆ ಹೆಸರಿನಲ್ಲಿ ಪ್ರಕಾಶನ ಮಾಡುತ್ತಿರುವುದು ಅತಿದೊಡ್ಡ ಹೆಮ್ಮೆಯ ವಿಚಾರ ಎಂದು ಅಭಿನಂದಿಸಿದರು.
ಇಲ್ಲಿ ಎಲ್ಲವೂ ಸೇರಿಕೊಂಡಿರುವುದು ಅದು ಅಮೃತಧಾರೆಯ ಸಂಕೇತ. ಅಕ್ಷರ ಮಾಧ್ಯಮವು ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತದೆ. ತಾನೊಬ್ಬ ಸಾಹಿತಿ,ಚಲನಚಿತ್ರ ನಿರ್ದೇಶಕನಾಗಿರುವುದಾದರೆ ಸಾಹಿತ್ಯ ಪುಸ್ತಕ ಕಾರಣ. ಅದುವೇ ನನ್ನ ತವರುಮನೆ. ಒಂದು ಕಾಲದಲ್ಲಿ ಒಬ್ಬ ಓದುವುದು ಉಳಿದವರು ಕೇಳುವುದು. ಒಬ್ಬ ಹಾಡುವುದು ಉಳಿದವರು ಕೇಳುವುದಿತ್ತು. ಅದನ್ನೇ ಕೇಳು ಜನಮೇಜಯ ಅನ್ನಲಾಗುತ್ತಿತ್ತು. ಅದಾದ ಬಳಿಕ ದೃಶ್ಯ ಮಾಧ್ಯಮ ಪ್ರಸಾರಕ್ಕೆ ಬಂದು ನೋಡು ಮಾಧ್ಯವಾಗಿಬಿಟ್ಟಿದೆ. ಆದರೆ ಈಗ ಮತ್ತೆ ಪುನಃ ಓದು ಜನಮೇಜಯ ಕಾಲ ಆರಂಭವಾಗತೊಡಗಿದೆ. ಅದರಲ್ಲಿ ಕ್ರಿಯೇಟಿವ್ ಪುಸ್ತಕಧಾರೆಯ ಪಾತ್ರವೂ ಹಿರಿದಾಗಿದೆ. ಭಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಮಾನ್ಯತೆಯ ಬೂಕರ್ ಪ್ರಶಸ್ತಿ ದೊರಕಿತು. ಆ ನಂತರದಲ್ಲಿ ಆ ಕೃತಿಯ ಬಗ್ಯೆ ಅನೇಕ ವಿಮರ್ಶೆ ಚರ್ಚೆಗಳು ನಡೆಯಿತಾದರೂ ಅಂಥದ್ದೊಂದು ಸ್ವಂತಶಕ್ತಿ ಕನ್ನಡ ಸಾಹಿತ್ಯದಲ್ಲಿ ಇತ್ತಲ್ಲ ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಅಂಥ ಶಕ್ತಿ ಹಾಗೂ ಶಕ್ತಿವಂತೆಯರು ಇನ್ನೆಷ್ಟು ಮಂದಿ ಇರಲಿಕ್ಕಿಲ್ಲ? ಕನ್ನಡದ ಜಾಗತೀಕರಣವೆಂದರೆ ವಿಶ್ವದ ಎಲ್ಲ ಜ್ಞಾನಗಳು ನಮ್ಮ ಮಕ್ಕಳಿಗೆ ಕನ್ನಡದಲ್ಲಿ ದೊರೆಯುವಂತಾಗಬೇಕು.ಆಗ ಪುಸ್ತಕದ ಸಾರ್ಥಕತೆಯನ್ನು ಸಂಪೂರ್ಣವಾಗಿ ಉಪಯೋಗಿಸಿದಂತಾಗುವುದು. ಜ್ಞಾನಕ್ಕೂ ಮಾಹಿತಿಗೂ ತುಂಬಾ ವ್ಯತ್ಯಾಸವಿದೆ. ಒಬ್ಬ ಲೇಖಕನ ಅಂತರ್ಗತ ವಿಚಾರಗಳು, ಅನುಭವ, ಕಲ್ಪನೆಗಳು ಅದೆಲ್ಲವೂ ಜ್ಞಾನ ವಾಗುವುದು. ಒಂದು ಪುಸ್ತಕವನ್ನು ಸರಿಯಾಗಿ,ಸಂಪೂರ್ಣವಾಗಿ ಓದಿದ ನಂತರ ನಮಗೆ ಹೊಸಹುಟ್ಚು ಸಿಗುತ್ತದೆ . ಆ ಹೊಸಹುಟ್ಚು ನನಗೆ ಸಿಕ್ಕಿದೆ ಎನ್ನುವುದಕ್ಕೆ ನಾನು ಸಂತೋಷಪಡುತ್ತೇನೆ. ಪುಸ್ತಕದ ಓದುವಿಕೆಯಿಂದ ಹೊಸ ಬದುಕು,ವಿಕಾಸ,ಜ್ಞಾನಶಕ್ತಿ ದೊರಕುತ್ತದೆ.
ಜನರಿಗೆ ಆದ್ಯತೆಗಳನ್ನು ತಿಳಿಸಿ ಪುಸ್ತಕಗಳನ್ನು ಮನೆಗೆ ತಲುಪಿಸಬೇಕು ಎಂದು ನಾಗತಿಹಳ್ಳಿ ಸಲಹೆ ನೀಡಿದರು.
ಪುಸ್ತಕ ಪ್ರಕಟಣೆಗಳನ್ನು ವರ್ಷದಿಂದ ವರ್ಷಕ್ಕೆ ಸಂಖ್ಯೆಗಳಲ್ಲಿ ಹೆಚ್ಚಿಸುವುದು ವಿಶೇಷವೇನಲ್ಲ. ಪುಸ್ತಕ ತಲುಬೇಕಾದಲ್ಲಿಗೆ ತಲುಪಿದೆಯೋ ಅನ್ನುವುದು ಬಹಳ ಪ್ರಾಮುಖ್ಯ ವಿಚಾರ. ಪ್ರಕಾಶನದಲ್ಲಿ ಪ್ರಕಟಗೊಳ್ಳುವ ಎಲ್ಲ ಪುಸ್ತಕಗಳೂ ಓದುವುದಕ್ಕೆ ಯೋಗ್ಯವೆನ್ನುವುದಕ್ಕೂ ಆಗದು. ಯಾಕೆಂದರೆ, ಸರಕಾರ ಖರೀದಿ ಮಾಡುತ್ತದೆ ಎನ್ನುವ ಲೆಕ್ಕಾಚಾರಕ್ಕೆ ಬೇಕಾದಷ್ಟೆ ಮುದ್ರಿಸುವುದೂ ಒಂದು ಬದಿಯಲ್ಲಿ ನಡೆಯುತ್ತಿರುತ್ತದೆ. ಅದಕ್ಕೆಂದೇ ಬರೆಯುವ ಲೇಖಕರು, ಪ್ರಕಟಿಸುವ ಪ್ರಕಾಶಕರ ವರ್ಗವಿದೆ. ಪುಸ್ತಕ ಮನೆ ಎಂದು ಹೆಸರಿಟ್ಟಿರುವುದು ಬಹಳ ಅರ್ಥಪೂರ್ಣ, ಮನೆಯೊಂದರ ಆತ್ಮವೇ ಪುಸ್ತಕ. ಹಾಗಿರುವಾಗ ಮನೆಯಲ್ಲಿ ಪುಸ್ತಕವಿಲ್ಲವೆಂದರೆ ಆತ್ಮವಿಲ್ಲದ ಮನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರಕಾಶನದ ಸಾಧನೆಯೆಲ್ಲವೂ ಸಾರ್ಥಕವಾಗುತ್ತ ಬೆಳೆಯಲಿ ಎಂದು ಹಾರೈಸಿದರು.


ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಮಾತನ್ನಾಡಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ನಡುವೆ ಯಾವುದೇ ಋಣಾತ್ಮಕ ಸಂವಾದ ನಡೆಯಕೂಡದು. ಯಾವನೇ ವಿದ್ಯಾರ್ಥಿ ಕೂಡಾ ಒಬ್ಬ ಶಿಕ್ಷಕನ ನಿಂದನೆಯಲ್ಲಿ ತನ್ನ ಭವಿಷ್ಯವನ್ನು ಸ್ಥಾಪಿಸಿಕೊಳ್ಳಲಾರ. ತಾತ್ಸಾರ ಮತ್ತು ನಿಂದನೆ ಅದು ಮನೆಯವರಲ್ಲೂ ಇರುತ್ತದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಧನಾತ್ಮಕವಾದ ಪ್ರವಾಚನ,ಬೋಧನೆ ಬಹಳ ಪ್ರಸ್ತುತವಾಗಿದೆ ಎಂದು ಹೇಳಿದರು.
ಕ್ರಿಯೇಟಿವ್ ಪ. ಪೂರ್ವ ವಿದ್ಯಾ ಸಂಸ್ಥೆಯು ಸಾಹಿತ್ಯ ಚಟುವಟಿಕೆ ಹಾಗೂ ಬೆಳವಣಿಗೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.




ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ, ಮಹಾಕಾವ್ಯಗಳ ರಚನೆಕಾರ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು , ಪುಸ್ತಕ ಕೃತಿಗಳನ್ನು ಓದುವುದು, ಅಧ್ಯಯನ ಮಾಡುವುದರ ಅಗತ್ಯತೆಗಳ ಬಗ್ಗೆ ಕೆಲವೇ ಮಾತುಗಳಲ್ಲಿ ವಿವರಿಸಿದರು.
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿಯವರು ಸಾಂದರ್ಭಿಕವಾಗಿ ಮಾತುಗಳನ್ನಾಡಿದರು.

ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್, ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಾರಂಭದಲ್ಲಿ ಸಾಹಿತಿ, ಪ್ರಾಧ್ಯಾಪಕ ಅಶ್ವತ್ ಅವರು ಸ್ವಾಗತಿಸಿದರು.
ಪ್ರಕಟಿತ ಪುಸ್ತಕಗಳ ಲೇಖಕ/ಲೇಖಕಿಯರನ್ನು ಶಾಲು ಹೊದಿಸಿ,ಸ್ಮರಣಿಕೆ ಹಾಗೂ ಇತರ ಗೌರವಗಳೊಂದಿಗೆ ಸಮ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಹಾಗೂ ಉಸ್ಥಿತಿತರಿದ್ದ ಸಾಹಿತಿಗಳು ನೆರವೇರಿಸಿಕೊಟ್ಟರು.

































