ಪುರಸಭೆ ನಿರ್ಲಕ್ಷ್ಯ ವಿರೋಧಿಸಿ ವಿನೂತನ ಪ್ರತಿಭಟನೆ: ಜಲಪಾತದ ನೀರಿನಲ್ಲಿ ಸ್ನಾನ ಮಾಡಿದ ಕೌನ್ಸಿಲರ್!
RB NEWS
Bureau Report
ಪುರಸಭೆ ನಿರ್ಲಕ್ಷ್ಯ ವಿರೋಧಿಸಿ ವಿನೂತನ ಪ್ರತಿಭಟನೆ: ಜಲಪಾತದ ನೀರಿನಲ್ಲಿ ಸ್ನಾನ ಮಾಡಿದ ಕೌನ್ಸಿಲರ್!
ಕಾರ್ಕಳ: ಪುರಸಭೆಯ ನಿರ್ಲಕ್ಷ್ಯವನ್ನು ಖಂಡಿಸಿ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಗಮನ ಸೆಳೆದಿದೆ. ಪುರಸಭೆ ಕಚೇರಿಯ ಕಟ್ಟಡದ ಮೇಲ್ಚಾವಣಿಯಿಂದ ಮಳೆನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಕಳೆದ ಎರಡು ವರ್ಷಗಳಿಂದ ಹಾನಿಗೀಡಾಗಿದ್ದು, ಮಳೆ ಬಂದಾಗ ನೀರು ಜಲಪಾತದಂತೆ ರಭಸವಾಗಿ ಕೆಳಗೆ ಬೀಳುತ್ತಿದೆ. ಈ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ತೊಂದರೆ ಅನುಭವಿಸುತ್ತಿದ್ದು, ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ಪ್ರಕಾಶ್ ರಾವ್ ಅವರು ಕೂಡ ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅವರು ಇಂದು ವಿನೂತನವಾಗಿ ಪ್ರತಿಭಟನೆಗೆ ಮುಂದಾದರು. ಕಟ್ಟಡದ ಮೇಲ್ಚಾವಣಿಯಿಂದ ಜಲಪಾತದಂತೆ ಬೀಳುತ್ತಿದ್ದ ಮಳೆನೀರಿನ ಕೆಳಗೆ ನಿಂತು ಸ್ನಾನ ಮಾಡುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅವರು ಸಾರ್ವಜನಿಕರ ಗಮನಕ್ಕೆ ತಂದರು. ಪ್ರತಿಭಟನೆಯ ವೇಳೆ ಮಾತನಾಡಿದ ಅವರು, “ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಎರಡು ವರ್ಷಗಳಿಂದ ಈ ಸಮಸ್ಯೆ ಮುಂದುವರಿದರೂ ಯಾವುದೇ ಶಾಶ್ವತ ಪರಿಹಾರ ಕಂಡುಹಿಡಿಯಲಾಗಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಸಮಸ್ಯೆ ಮುಂದುವರಿದರೆ ಮೇಲಧಿಕಾರಿಗಳು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಶೀಘ್ರದಲ್ಲೇ ಸಮರ್ಪಕ ಪರಿಹಾರ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.