ಸಿಸಿಬಿ ಕಾರ್ಯಚರಣೆ: ಅಕ್ರಮ ಪಿಸ್ತೂಲ್ ಸಹಿತ ಸಜೀವ ಗುಂಡುಗಳು ವಶಕ್ಕೆ; ಇಬ್ಬರ ಬಂಧನ
ಮಂಗಳೂರು: ಅಕ್ರಮ ಪಿಸ್ತೂಲ್ ಸಹಿತ ಸಜೀವ ಮದ್ದುಗುಂಡುಗಳನ್ನು ಹೊಂದಿದ್ದ ಆರೋಪದ ಮೇಲೆ ಇಬ್ಬರನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಗಳಾದ ಮೊಹಮ್ಮದ್ ಅಸ್ಲರ್ (26) ಮತ್ತು ಅಬ್ದುಲ್ ನಿಸಾರ್ ಕೆ (29) ಎಂದು ಗುರುತಿಸಲಾಗಿದೆ.
ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಕಪ್ಪು ಕಾರಿನಲ್ಲಿ ಪಿಸ್ತೂಲ್ ಹಿಡಿದುಕೊಂಡು ಆತಂಕ ಸೃಷ್ಟಿ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ದಾಳಿ ನಡೆಸಿದ ಸಿಸಿಬಿ ತಂಡವು ಒಂದು ಪಿಸ್ತೂಲ್, ಎರಡು ಜೀವಂತ ಗುಂಡುಗಳು, ಎರಡು ಮೊಬೈಲ್ ಫೋನ್ ಮತ್ತು ಕಪ್ಪು ಹುಂಡೈ ವೆರ್ನಾವನ್ನು ಜಪ್ತಿ ಮಾಡಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಒಟ್ಟು 7,15,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣಗಳು ಮತ್ತು ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ ಸಾಗಾಟದ ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳಲ್ಲಿ ಮೊಹಮ್ಮದ್ ಅಸ್ಗರ್ ಆರೋಪಿಯಾಗಿದ್ದ ಎಂದೂ ಅವರು ತಿಳಿಸಿದರು.
ಸಿಸಿಬಿಯ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ ಶ್ಯಾಮಸುಂದರ್ ಎಚ್.ಎಂ. ಹಾಗೂ ಪಿಎಸ್ಐ ಸುದೀಪ್ ಎಂ.ವಿ ಮತ್ತು ಸಿಸಿಬಿ ಸಿಬ್ಬಂದಿ ಈ ದಾಳಿಯನ್ನು ಸಂಘಟಿಸಿದ್ದರು.


























