ಪರೋಪಕಾರ , ದಾನ ಮತ್ತು ಸೇವೆಯೇ ನಿಜವಾದ ಧರ್ಮ : ಕಾರ್ಕಳ ಕಮಲಾಕ್ಷ ಕಾಮತ್
ಕಾರ್ಕಳ : ಮನುಷ್ಯ ನಡೆದುಕೊಳ್ಳುವ ರೀತಿ ಮತ್ತು ಮಾಡುವ ಕೆಲಸಗಳನ್ನು ಸಮಾಜ ಗಮನಿಸುತ್ತದೆ .ನಯ ವಿನಯ ಮತ್ತು ಪ್ರೀತಿಸುವ ಗುಣದಿಂದ ನಾವು ಸಮಾಜದ ಮನವನ್ನು ಗೆಲ್ಲಬೇಕು .ನಮ್ಮ ಸಾಮರ್ಥ್ಯ ಮತ್ತು ಸತ್ಯದ ಹರಹಿನಲ್ಲಿ ಸಾಧ್ಯವಾದಷ್ಟು ಪರೋಪಕಾರ ಮತ್ತು ಸೇವೆ ಮಾಡಬೇಕು ಎಂದು ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದ್ದಾರೆ .
ಕಾರ್ಕಳ ಪೆರ್ವಾಜೆಯ ಅಮಿತ್ ಎಸ್ . ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಧ್ಯಾನ ಮಂದಿರದಲ್ಲಿ ಕಾರ್ಕಳ ತಾಲೂಕಿನ ಎಸ್ ಎಸ್ ಎಲ್ ಸಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ – ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತಾಡಿದರು.ತಾಯಿ ಅಂದರೆ ಬರೇ ವ್ಯಕ್ತಿಯಲ್ಲ ; ತಾಯಿ ಅಂದರೆ ಮಹಾನ್ ಶಕ್ತಿ .ತಾಯಿಯನ್ನು ಸದಾ ಪ್ರೀತಿಸಿ ಗೌರವಿಸಿ .ಮಾನವೀಯತೆ , ಸಾತ್ವಿಕ ಗುಣಗಳಿದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಎಂದು ಅವರು ಹಿತವಚನ ನುಡಿದರು.
ಭವಿಷ್ಯ ನಿರ್ಧರಿಸುವ ಸೂಕ್ತ ವಿಷಯಗಳ ಆಯ್ಕೆಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ನಮ್ರತೆ , ಕರುಣೆ, ಅನುಕಂಪ, ಉತ್ತಮ ಗುಣ ನಡತೆಗಳೇ ಜ್ಞಾನದ ಬುನಾದಿ ಎಂದು ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.
ನಿವೃತ್ತ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ , ಉದ್ಯಮಿ ರೆಂಜಾಳ ಅನಂತಕೃಷ್ಣ ಶೆಣೈ , ಗೀತಾ ಆರ್ . ಶೆಣೈ , ಡಾ . ರವಿರಾಜ ಶೆಟ್ಟಿ , ಹಿತಾ ಆರ್ . ಶೆಟ್ಟಿ , ಲೇಖಕ ವಿಶ್ವಕುಮಾರ್ ಭಟ್ ಮುಂಡ್ಕೂರು , ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು , ಮಂದಿರದ ಪ್ರವರ್ತಕರಾದ ಶ್ರೀನಿವಾಸ ಪೈ , ನಿರ್ಮಲಾ ಪೈ ಉಪಸ್ಥಿತರಿದ್ದರು.
ಲೆಕ್ಕ ಪರಿಶೋಧಕ ಸರ್ವೋತ್ತಮ ಭಟ್ ಅಧ್ಯಕ್ಷತೆ ವಹಿಸಿದರು.
ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯ ಮಟ್ಟದ 3 ನೇ , 4 ನೇ ಮತ್ತು 5 ನೇ ರ‍್ಯಾಂಕ್ ಗಳಿಸಿದ ಸಹನಾ ಎನ್ , ಶೋಧನ್ ಹೆಗ್ಡೆ , ಪ್ರತೀಕ್ ಜೈನ್ ಸಾಣೂರು , ರಿಯಾನ್ ಸಲ್ಡಾನ್ಹಾ ಅವರನ್ನು ಸನ್ಮಾನಿಸಲಾಯಿತು .
ಆದ್ಯಾ ನಾಯಕ್ ಸ್ವಾಗತಿ ಸಿದರು .ಸೌಮ್ಯಾ ಎನ್ ನಾಯಕ್ ಕಾರ್ಯಕ್ರಮ ನಿರ್ವಹಿಸಿ ದರು .ಆರ್ಯಾ ನಾಯಕ್ ವಂದಿಸಿದರು .






































