

ಪರೀಕ್ಷಾ ಪೂರ್ವ ತಯಾರಿಯಲ್ಲಿ ಪೋಷಕರ ಜವಾಬ್ದಾರಿ ಮಹತ್ವದ್ದು
ಮಾಳ–ಪೇರಡ್ಕ: ಜಿಲ್ಲಾ ಮಲೆಕುಡಿ ಸಂಘ (ರಿ), ಉಡುಪಿ ಇದರ ಸಹ ಸಮಿತಿ ಮಲೆಕುಡಿಯ ಜಿಲ್ಲಾ ಶೈಕ್ಷಣಿಕ ಸಮಿತಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ, ಪರಿಣಾಮಕಾರಿ ಓದು ಹಾಗೂ ಪೋಷಕರು ವಹಿಸಬೇಕಾದ ಜವಾಬ್ದಾರಿಗಳು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವು ಮಾಳ–ಪೇರಡ್ಕದಲ್ಲಿರುವ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ನೋಣಯ್ಯ ರೆಂಜಾಳ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಾಗಬೇಕು, ಸಮಯ ನಿರ್ವಹಣೆ, ಓದಿನ ವಿಧಾನಗಳು ಹಾಗೂ ಪೋಷಕರು ಮಕ್ಕಳ ಮಾನಸಿಕ ಬೆಂಬಲಕ್ಕೆ ನೀಡಬೇಕಾದ ಪ್ರಾಮುಖ್ಯತೆ ಕುರಿತು ವಿವರವಾದ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಲೆಕುಡಿ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಅವರು, “ಶಿಕ್ಷಣವು ಹೃದಯದಿಂದ ಮೂಡಿ, ಹೃದಯವಂತಿಕೆಯಿಂದ ಕೂಡಿರಬೇಕು” ಎಂಬ ಅರಿಸ್ಟಾಟಲ್ನ ಮಾರ್ಮಿಕ ನುಡಿಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವೆಂದು ಹಿತನುಡಿ ಹೇಳಿದರು.
ಪ್ರಧಾನ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಲೆಕುಡಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಅವರು, ಮಲೆಕುಡಿಯ ಸಂಘವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಷ್ಪ ರೆಂಜಾಳ ಉಪಸ್ಥಿತರಿದ್ದರು. ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಹಲವು ಪೋಷಕರೊಂದಿಗೆ 78 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು.
ಈ ಸಂದರ್ಭದಲ್ಲಿ, ಬೆಂಗಳೂರು ಮೂಲದ ಉದ್ಯಮಿ ವಿಕಾಸ್ ಭಟ್ ಅವರ ನೆರವಿನಿಂದ ಹಾಗೂ ಶ್ರೀ ಸತ್ಯ ಸಾಯಿ ಭಕ್ತ ಮಂಡಳಿ, ಬೆಂಗಳೂರು ಇದರ ಆಶ್ರಯದಲ್ಲಿ, ಯಾದಳಂ ಗಂಗಾಧರ ಶೆಟ್ಟಿ ಅವರ ಸಹಕಾರದೊಂದಿಗೆ, 12 ವಿದ್ಯಾರ್ಥಿಗಳಿಗೆ ತಿಂಗಳಿಗೆ 42 ಸಾವಿರ ರೂ. ಮಾಸಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂಬುದನ್ನು ತಿಳಿಸಲಾಯಿತು. ಇದರ ಜೊತೆಗೆ, ಈ ಸಮಾರಂಭದಲ್ಲಿ 10 ವಿದ್ಯಾರ್ಥಿಗಳಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಉಡುಪುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ರೂವಾರಿಯಾಗಿದ್ದ ನವೀನ್ ಕುಮಾರ್ ತೆಳ್ಳಾರ್ ಅವರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಪುಷ್ಪ ಅವರು ನಡೆಸಿಕೊಟ್ಟರು.






































