ಕಾರ್ಕಳ : ರೋಟರಿ ಬಾಲಭವನದಲ್ಲಿ ತಾಲೂಕು ಕಾನೂನು ನೆರವು ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಮತ್ತು ರೋಟರಿ ಕ್ಲಬ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಜರಗಿತು.
ಹೆಚ್ಚುವರಿ ಸಿವಿಲ್ ಮತ್ತು ಜೆ.ಯಂ.ಎಫ್.ಸಿ. ನ್ಯಾಯಾಧೀಶ ಅಬುತಾಹೀರ್ ಕಾರ್ಯಕ್ರಮ ಉದ್ಘಾಟಿಸಿ, ಭೂಮಿಯಲ್ಲಿ ಕೇವಲ ಶೇ. 43 ಭಾಗ ಮಾತ್ರ ಭೂ ಪ್ರದೇಶವಾಗಿದ್ದು, ಉಳಿದ ಕಡೆ ನೀರು ಇದೆ. ಮನುಷ್ಯನನ್ನು ಹೊರತು ಪಡಿಸಿ ಉಳಿದ ಯಾವ ಜೀವಿಗಳಿಂದಲೂ ಭೂಮಿಗೆ ತೊಂದರೆ ಆಗುವುದಿಲ್ಲ. ಆದುದರಿಂದ ಮನುಷ್ಯರು ಭೂಮಿಯನ್ನು ಮತ್ತು ಪರಿಸರವನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಂಡು ಹೋಗಬೇಕೆಂದು ತಿಳಿಸಿದರು.
ಮುಖ್ಯ ಅತಿಥಿ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿಗಿಂತ ಈಗ ಸ್ವಲ್ಪ ಮನುಷ್ಯನಿಗೆ ಪರಿಸರ ಮತ್ತು ಭೂಮಿಯ ಮೇಲೆ ಕಾಳಜಿ ಉಂಟಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಯಂ. ಕೆ. ವಿಪುಲ್ತೇಜ್ರವರು ಭೂಮಿ ಮತ್ತು ಪರಿಸರವನ್ನು ರಕ್ಷಿಸಲು ಸಂವಿಧಾನ ಮತ್ತು ಸರ್ವೋಚ್ಛ ನ್ಯಾಯಾಲಯ ನೀಡಿದ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಸಂಘದ ಅಧ್ಯಕ್ಷ ಜೋನ್ ಆರ್. ಡಿಸಿಲ್ವ ಮಾತನಾಡಿ ರೋಟರಿ ಕ್ಲಬ್ ಕಾರ್ಕಳ ಪುರಸಭೆಯಿಂದ ನಡೆಯುವ ಎಲ್ಲ ಸ್ವಚ್ಛತೆ ಕಾರ್ಯಗಳಿಗೆ ಉತ್ತೇಜನ ನೀಡುತ್ತಿದ್ದು, ಭೂಮಿ ಮತ್ತು ಪರಿಸರ ಸ್ವಚ್ಛತೆಗೆ ತೆಗೆದುಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಶ್ರೀ ಪದ್ಮ ಪ್ರಸಾದ್ ಜೈನ್ (ನಿಕಟ ಪೂರ್ವ ಪಧಾನ ಕಾರ್ಯದರ್ಶಿಗಳು, ವಕೀಲರ ಸಂಘ ಕಾರ್ಕಳ) ವಂದನಾರ್ಪಣೆಗೈದರು.



































