ಪರಿಸರ ಕಾಳಜಿವಹಿಸುವುದು ಅತ್ಯಗತ್ಯ : ನ್ಯಾಯಾಧೀಶೆ ಗೀತಾ ಡಿ.
ಕಾರ್ಕಳ : ತಾಲೂಕು ಕಾನೂನು ಸೇವೆಗಳಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಭೂಮಿ ದಿನಾಚರಣೆ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಕುಕ್ಕುಂದೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಗೌರವಾನ್ವಿತ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಗೀತಾ ಡಿ.ರವರು ಮಾತನಾಡಿ, ಸೌರಮಂಡಲದ ಒಂಭತ್ತು ಗ್ರಹಗಳಲ್ಲಿ ಭೂಮಿಯಲ್ಲಿ ಮಾತ್ರ ಮನುಷ್ಯರು ವಾಸಿಸುತ್ತಿದ್ದು, ಸದ್ರಿ ಭೂಮಿಯನ್ನು ಸ್ವಚ್ಛವಾಗಿಟ್ಟುಕೊಂಡು, ಹಸಿರಾಗಿಸಿಕೊಂಡು, ಮುಂದಿನ ಪೀಳಿಗೆಗೆ ಹಸಿರಾಗಿ ಕೊಂಡೊಯ್ಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಇದರ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಪರಿಸರದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಪರಿಸರವಾದಿಗಳು, ಆಡಳಿತ ವರ್ಗದವರು, ಪರಿಸರ ಪ್ರೇಮಿಗಳು, ರೈತರು ಎಲ್ಲರೂ ಸೇರಿಕೊಂಡು ತಾಯಿಗೆ ಸಮಾನವಾದ ಭೂಮಿಯನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಮಮ್ತಾಜ್ ಹಸನ್, ಭೂಮಿಯನ್ನು ನಾವು ಹೇಗೆ ರಕ್ಷಣೆ ಮಾಡಬೇಕು, ಕಾರ್ಕಳ ಮತ್ತು ಅಜೆಕಾರಿನಲ್ಲಿ ಲಯನ್ಸ್ ಕ್ಲಬ್‌ನ ಮೂಲಕ ಪ್ರಕೃತಿ ಸ್ವಚ್ಛತೆಯ ಬಗ್ಗೆ ಕೈಗೊಂಡ ಕೆಲವು ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷೆ ಸ್ಥಾನ ವಹಿಸಿ ಮಾತನಾಡಿದ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕೆ., ಭೂಮಿ ಬಗ್ಗೆ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವನ್ನು ಕುಕ್ಕುಂದೂರು ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಿರುವುದಕ್ಕೆ ಧನ್ಯವಾದ ತಿಳಿಸಿದರು.
ಗ್ರಾಮ ಪಂಚಾಯತ್ ಉಪಧ್ಯಕ್ಷೆ ಶಶಿಕಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ನಿರ್ಮಲ ಸ್ವಾಗತಿಸಿ, ನಿರೂಪಿಸಿ, ವಂದನಾರ್ಪಣೆಗೈದರು.































