ಪರಶುರಾಮ ಪ್ರತಿಮೆ ನಿರ್ಮಾಣದ ಅನಾಚಾರ ಕಾರ್ಕಳಕ್ಕೆ ಮಾಡಿದ ಅಪಚಾರ: ಉದಯ ಮುನಿಯಾಲು
RB NEWS
Bureau Report
ಪರಶುರಾಮ ಪ್ರತಿಮೆ ನಿರ್ಮಾಣದ ಅನಾಚಾರ ಕಾರ್ಕಳಕ್ಕೆ ಮಾಡಿದ ಅಪಚಾರ: ಉದಯ ಮುನಿಯಾಲು
ಜೋಳಿಗೆಯೊಂದಿಗೆ ಬಂದಾಗ ಝೀರೋ ಬ್ಯಾಲನ್ಸ್: ಪ್ರಸ್ತುತ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿ- ಶುಭದರಾವ್
ತುಳು ಭಾಷೆಗೆ ಅಧಿಕೃತ ಸ್ಥಾನಮಾನ, ಕರಾವಳಿ ಅಭಿವೃದ್ಧಿಗೆ ವಿಶೇಷ ಅನುದಾನ ಕಾಂಗ್ರೆಸ್ ಬದ್ಧತೆಯ ಸಾಕ್ಷಿ: ‘ಸತ್ಯಮೇವ ಜಯತೆ’ ಸಮಾವೇಶದಲ್ಲಿ ಆಕ್ರೋಶ
ಕಾರ್ಕಳ, ಅ.8: ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದಿರುವ ಅನಾಚಾರ ಕಾರ್ಕಳಕ್ಕೆ ಮಾಡಿದ ಅಪಚಾರವಾಗಿದೆ. ಬಿಜೆಪಿಯವರು ಕಾರ್ಕಳಕ್ಕೆ ಮಾಡಿರುವ ಶಾಶ್ವತ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಜನರ ಮುಂದೆ ತಿಳಿಸಲಿ ಎಂದು ಕಾಂಗ್ರೆಸ್ ಮುಖಂಡ, ಉದಯ ಕುಮಾರ್ ಶೆಟ್ಟಿ ಮುನಿಯಾಲು ಸವಾಲು ಹಾಕಿದರು.
ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ ಉತ್ತರವಾಗಿ ಆಯೋಜಿಸಿದ್ದ ‘ಸತ್ಯಮೇವ ಜಯತೆ’ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ತುಳು ಭಾಷೆಯನ್ನು ರಾಜ್ಯದ ಅಧಿಕೃತ ಎರಡನೇ ಆಡಳಿತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ, ಕರಾವಳಿ ಕರ್ನಾಟಕದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನುದಾನ ಘೋಷಿಸಿರುವುದು ಕಾಂಗ್ರೆಸ್ ಸರ್ಕಾರದ ಕರಾವಳಿ ಪರ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಉದಯ ಮುನಿಯಾಲು ಹೇಳಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾರ್ಕಳ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸುಮಾರು ₹600 ಕೋಟಿ ವೆಚ್ಚ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಜನಪರ ಆಡಳಿತ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ಬೆಲೆ ಏರಿಕೆ ಹಾಗೂ ತೆರಿಗೆ ನೀತಿಗಳ ಪರಿಣಾಮವಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆರೋಪಿಸಿದರು.
“ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದಿರುವ ಅನಾಚಾರ ಕಾರ್ಕಳಕ್ಕೆ ಮಾಡಿದ ಅಪಚಾರ. ಬಿಜೆಪಿ ಕಾರ್ಕಳಕ್ಕೆ ಏನಾದರೂ ಶಾಶ್ವತವಾದ ಹೆಜ್ಜೆ ಗುರುತು ಮೂಡಿಸಿದ್ದರೆ ಜನರಿಗೆ ತಿಳಿಸಲಿ” ಎಂದು ಉದಯ ಮುನಿಯಾಲು ಪ್ರಶ್ನಿಸಿದರು.
ನಿಟ್ಟೆ, ಹೆಬ್ರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ನಿಟ್ಟೆ ಜವಳಿ ಪಾರ್ಕ್ ಹಾಗೂ ನಿಟ್ಟೆ ಹಲಸು ಕ್ಲಸ್ಟರ್ಗಳ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಈ ಯೋಜನೆಗಳ ಸುತ್ತ ನಡೆದಿರುವ ಅಕ್ರಮ ವ್ಯವಹಾರಗಳ ಬಗ್ಗೆ ಜನರಿಗೆ ಉತ್ತರ ನೀಡಬೇಕಾಗಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಶ ಕಬ್ಬಲಡ್ಕ ಮಾತನಾಡಿ, “ಇದು ತುಳುನಾಡಿನ ಸತ್ಯದ ಮಣ್ಣು. ಈ ಮಣ್ಣಿನಲ್ಲಿ ಅಧರ್ಮಿಗಳು ಉದ್ಧಾರವಾಗಿಲ್ಲ. ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದಿರುವುದು ಅಧರ್ಮವೋ, ಧರ್ಮವೋ ಎಂಬುದನ್ನು ಜನರು ಯೋಚಿಸಬೇಕು” ಎಂದು ಹೇಳಿದರು. ಶಾಸಕ ವಿ.ಸುನಿಲ್ ಕುಮಾರ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿ ಸರ್ಕಾರದ ‘ಜೀರೋ ಬ್ಯಾಲೆನ್ಸ್’ ಹಾಗೂ ವಿದೇಶದಲ್ಲಿರುವ ಕಪ್ಪುಹಣದ ಭರವಸೆಗಳನ್ನು ಟೀಕಿಸಿದರು. ಜನರ ಖಾತೆಗೆ ₹15 ಲಕ್ಷ ಜಮೆಯಾಗಲಿದೆ ಎಂಬ ಭರವಸೆ ಜೀರೋ ಬ್ಯಾಲೆನ್ಸ್ನಲ್ಲೇ ಉಳಿದಿದೆ ಎಂದು ವ್ಯಂಗ್ಯವಾಡಿದರು.
ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಅವರು ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಸ್ತೂರಿರಂಗನ್ ವರದಿ ಸೇರಿದಂತೆ ಕರಾವಳಿಯ ಜನರ ಸಮಸ್ಯೆಗಳ ಕುರಿತು ಸಂಸತ್ನಲ್ಲಿ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರು ಬಿಜೆಪಿ ನಾಯಕರ ‘ಜೀರೋ ಬ್ಯಾಲೆನ್ಸ್ ಸರ್ಕಾರ’ ಆರೋಪಕ್ಕೆ ತಿರುಗೇಟು ನೀಡಿ ಮಾತನಾಡಿ, ಸುನೀಲ್ ಕುಮಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಪೂರ್ವ ತಯಾರಿಯಲ್ಲಿ ಜೋಳಿಗೆಯೊಂದಿಗೆ ಕಾರ್ಕಳಕ್ಕೆಬಂದಾಗ ಅವರಲ್ಲಿ ಇದ್ದದು ಬರೀ ಝೀರೋ ಬ್ಯಾಲನ್ಸ್ ಪ್ರಸ್ತುತ ಅವರು ಅತೀ ಶ್ರೀಮಂತರ ಪಟ್ಟಿಯ ಸಾಲಿನಲ್ಲಿ ಇದ್ದಾರೆ ಎಂದರು. 9/11 ಸಮಸ್ಯೆ, ವಿದ್ಯುತ್ ದರ ಏರಿಕೆ ಹಾಗೂ ನಾರಾಯಣ ಗುರು ನಿಗಮ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಬಿಜಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ, ಪ್ರವೀಣ್ ಶೆಟ್ಟಿ ರೆಂಜಾಳ, ನ್ಯಾಯವಾದಿ ಶೇಖರ್ ಮಡಿವಾಳ ಸೇರಿದಂತೆ ಹಲವು ಮುಖಂಡರು ಬಿಜೆಪಿ ನಾಯಕರು, ಜಿಲ್ಲೆಯ ಶಾಸಕರು ಹಾಗೂ ಸಂಸದರ ವೈಫಲ್ಯಗಳ ಕುರಿತು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಮಾಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಕ್ ಶಬ್ಬೀರ್, ಮಿಯ್ಯಾರು ಸುಧಾಕರ್ ಕೋಟ್ಯಾನ್, ಸದಾಶಿವ ದೇವಾಡಿಗ, ಸುಪ್ರೀತ್ ಶೆಟ್ಟಿ, ವಿವೇಕಾನಂದ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.