ಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿಯಿದೆ- ಶಾಸಕ ಸುನಿಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ : ಸುದ್ದಿಯನ್ನು ಬರೆಯುವುದಷ್ಟೇ ಪಕ್ರಕರ್ತರ ಜವಾಬ್ದಾರಿಯಾಗುವುದಿಲ್ಲ. ಸಮಾಜದಲ್ಲಿ ಒಂದು ಸಾಮೂಹಿಕ ಜವಾಬ್ದಾರಿಯೂ ಪತ್ರಕ್ರತರಿಗೆ ಇದೆ,ಇರಬೇಕಾಗುತ್ತದೆ. ಸಾಮಾಜಿಕ ಅಭಿವೃದ್ಧಿಯ ಜಾಗೃತಿ ನಿರ್ಮಾಣ ಮಾಡುವ ಕೆಲಸವೂ ಪತ್ರಕರ್ತರಿಗಿದೆ.
ಸುದ್ದಿ ಮಾಡಬೇಕೆನ್ನುವ ಕಾರಣಕ್ಕೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತೆ ಸುದ್ದಿ ಮಾಡುವುದು, ವ್ಯಕ್ತಿಯ ತೇಜೋವಧೆ ಮಾಡುವುದಕ್ಕೆ ಪೈಪೋಟಿಯಲ್ಲಿ ಸುದ್ದಿಯನ್ನು ಮಾಡುವಂಥದ್ದು ಪತ್ರಿಕಾ ವೃತ್ತಿ ಧರ್ಮಕ್ಕೆ ಒಳ್ಳೆಯದಲ್ಲ ಎಂಬುದಾಗಿ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ರೇಕಿಂಗ್ ನ್ಯೂಸ್ ಕೊಡುವ ಭರಾಟೆಯು ವ್ಯಕ್ತಿಗಳ ತೇಜೋವಧೆ ಮಾಡುವುದು ಮತ್ತು ವ್ಯವಸ್ಥೆಯನ್ನು ಹಾಳು ಮಾಡುವುದೇ ಆಗುತ್ತದೆ. ಕ್ಷಣಿಕ ನೆಮ್ಮದಿಯನ್ನು , ಟಿ ಆರ್ ಪಿ ಹೆಚ್ಚಳವನ್ನು ಕೊಡುವ ಬ್ರೇಕಿಂಗ್ ನ್ಯೂಸ್ ಗಳು ಸಮಾಜ ವಿರೋಧಿಯಾಗುತ್ತದೆ ಎಂಬುದನ್ನು ಪತ್ರಕರ್ತನಾದವನು ತಿಳಿದುಕೊಂಡಿರಬೇಕು ಎಂದು ಹೇಳಿದ ಶಾಸಕ ಸುನಿಲ್ ಕುಮಾರ್,
ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯಿಂದ ಹೊರಗಿದ್ದಾರೆ ಅನ್ನುವಂತಿಲ್ಲ. ಸಾರ್ವಜನಿಕ ಸೇವೆಯಲ್ಲಿರುವ ಉಳಿದವರಷ್ಟೇ ಜವಾಬ್ದಾರಿ ಅವರಿಗೂ ಸಮಾಜದಲ್ಲಿದೆ. ಸಮಾಜವನ್ನು ಎತ್ತರಕ್ಕೇರಿಸುವ, ಚರ್ಚೆಗೆ ಗ್ರಾಸವಾಗುವಂಥ ಸುದ್ದಿ ನೀಡಬೇಕು. ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಪತ್ರಕರ್ತರ ಭವನನ್ನು ಉದ್ಘಾಟಿಸಿದ ದ. ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿರುವ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತುಗಳನ್ನಾಡಿ, ಕಾರ್ಕಳ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡದ ಅಗತ್ಯವನ್ನು ಒತ್ತಿ ಹೇಳಿದರು. ಸರಕಾರದಿಂದ ಜಾಗ ಒದಗಿಸಿಕೊಡುವ ಕೆಲಸವನ್ನು ಶಾಸಕ ಸುನಿಲ್ ಕುಮಾರ್ ಅವರಿಂದ ನಿರೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಸಂಘವು ಶಾಶ್ವತ ಕಟ್ಚಡ ನಿರ್ಮಾಣ ಮಾಡುವಾಗ ಧನ ಸಹಾಯ ಮಾಡುವ ಎಲ್ಲರ ಜೊತೆ ತಾನೂ ಇರುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಲ್ಲೊಬ್ಬರಾಗಿದ್ದ ಕಾರ್ಕಳದ ತಹಶಿಲ್ದಾರ್ ಪ್ರದೀಪ್ ಆರ್ ಅವರು ಸಾಂದರ್ಭಿಕವಾಗಿ ಮಾತುಗಳನ್ನಾಡುತ್ತಾ, ಕಾರ್ಕಳದ ಪತ್ರಕರ್ತರ ತಂಡವು ಸಮಾಜಮುಖಿ ಕೆಲಸ ಮಾಡುತ್ತಿರುವುದನ್ನು ತಾನು ಗಮನಿಸುತ್ತ ಬಂದಿರುತ್ತೇನೆ. ತಾಲೂಕು ಕಚೇರಿಗೆ ಸಂಬಂಧಪಟ್ಟಿರುವ ಹಳೆಯ ಕಟ್ಟಡವೊಂದನ್ನು ಪತ್ರಕರ್ತರ ಭವನಕ್ಕಾಗಿ ಕೊಡುವುದಕ್ಕೆ ಜಿಲ್ಲಾಧಿಕಾರಿಯವರ ಅನುಮತಿಯು ಕೂಡಾ ನಿರಾಯಾಸವಾಗಿ ದೊರಕಿದ್ದನ್ನು ಸಭೆಯಲ್ಲಿ ಪ್ರಕಟಿಸಿ, ಸಂಘದ ಚಚುವಚಿಕೆಗಳಿಗೆ ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಸಮಾಜ ಸೇವಕ, ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ್ ಮಾಲಕರ ಒಕ್ಕೂಟದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ,ಬಜಗೋಳಿ ಅವರು ತಮ್ಮ ಮಾತುಗಳಲ್ಲಿ, ಶಾಸಕಾಂಗ,ಕಾರ್ಯಾಂಗ ,ನ್ಯಾಯಾಂಗದ ನಂತರದ್ದು ಪತ್ರಿಕಾರಂಗ. ಆ ನಾಲ್ಕೂ ಅಂಗಗಳು ಆರೋಗ್ಯಕರ ದೃಷ್ಠಿಯಿಂದ ಕಾರ್ಯನಿರ್ವಹಿಸಿದಾಗಲೇ ಸಮಾಜ ,ದೇಶ ಆರೋಗ್ಯಕರವಾಗಿ ಬೆಳೆಯುತ್ತದೆ. ಪತ್ರಿಕೆ ಅಥವಾ ಸುದ್ದಿ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯದ ಮಟ್ಟವನ್ನು ಸರಿಯಾಗಿ ಬಳಸಿಕೊಂಡಾಗಲೇ ಪತ್ರಕರ್ತರಿಗೂ ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆ ನಿಟ್ಟಿನಲ್ಲಿ ಕಾರ್ಕಳದ ಪತ್ರಕರ್ತರ ಸಂಘಟನೆಯು ಬಹಳ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರಲ್ಲದೆ , ಶಾಸಕ ಸುನಿಲ್ ಕುಮಾರ್ ಆಸಕ್ತಿ ತೋರಿಸುವುದರೊಂದಿಗೆ ಸರಕಾರಿ ಜಾಗವನ್ನು ಒದಗಿಸಿಕೊಡಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದೂ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ತಾಲೂಕು ಪತ್ರಕ್ರತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕೃಷ್ಣ ಅಜೆಕಾರು,
ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಹರೀಶ್ ಸಚ್ಚೇರಿಪೇಟೆ ವಂದನಾರ್ಪಣೆಗೈದರು.

ಕೊಡುಗೆ

ಕಾರ್ಕಳದಲ್ಲಿನ ಅರುಣೋದಯ ವಿಕಲಚೇತನ ಶಾಲೆಗೆ ಪತ್ರಕರ್ತರ ಸಂಘದ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಮೊತ್ತದ ದೇಣಿಗೆಯನ್ನು ಶಾಲಾ ಶಿಕ್ಷಕರಿಗೆ ಶಾಸಕರು ವಿತರಿಸಿದರು.

ಕಾರ್ಕಳದಲ್ಲಿ ಅನೇಕ ವರ್ಷಗಳಿಂದ ಪತ್ರಿಕಾ ವರದಿಗಾರ/ ಪತ್ರಿಕಾ ಛಾಯಾಗ್ರಾಹಕರಾಗಿ ದುಡಿದಿದ್ದ ಹಿರಿಯ ಪತ್ರಕರ್ತರನ್ನು ಈ ಸಮಾರಂಭದಲ್ಲಿ ಶಾಲು ಹೊದಿಸಿ ಸಮ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ತಾಲೂಕು ಪಂಚಾಯತು ಸಭಾಭವನದಲ್ಲಿ ನೆರವೇರಿದ ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪತ್ರಕರ್ತರ ಸಂಘದ ರಾಜ್ಯಮಟ್ಟದ ಸದಸ್ಯ ಕಿರಣ್ ಮಂಜನಬೈಲ್,ಉದ್ಯಮಿಗಳಾದ ಬೋಳ ಪ್ರಶಾಂತ್ ಕಾಮತ್,ಮುಹಮ್ಮದ್ ಗೌಸ್, ಕೆ. ಎಂ. ಸಿ. ಮಣಿಪಾಲ ಅದರ ಮಾರ್ಕೇಟಿಂಗ್ ಮೆನೇಜರ್ ಮೋಹನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top