ದ. ಕ. ಜಿಲ್ಲೆಯಲ್ಲಿನ ದೈವ ಸಾನಿಧ್ಯ ಕ್ಷೇತ್ರಗಳಲ್ಲಿ ಪಡ್ಯರಬೆಟ್ಟದ ಕೊಡಮಣಿತ್ತಾಯ ದೈವ ಸಾನಿಧ್ಯ ಕ್ಷೇತ್ರವು ಬಹಳ ಕಾರಣಿಕ ಪ್ರಸಿದ್ಧವಾಗಿರುತ್ತದೆ. ಪಡ್ಯಾರಬೆಟ್ಟ ಕ್ಷೇತ್ರದಲ್ಲಿ ಇತ್ಯರ್ಥವಾಗುವ ದೂರನ್ನು ಮತ್ತೆ ಮೇಲ್ಮನವಿ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇದ್ದಿಲ್ಲವಾಗಿತ್ತು. ಅದೇ ಬಗೆಯ ನಂಬಿಕೆ ಶ್ರದ್ದೆಯಲ್ಲಿ ಭಕ್ತರ ಅಪೇಕ್ಷೆಯನ್ನು ಪ್ರಾರ್ಥಿಸಿಕೊಳ್ಳುವುದು, ದಾಯಾದಿ ಜಗಳವನ್ನು ತೀರ್ಮಾನಕ್ಕೆ ತಂದು ರಾಜಿ ಮಾಡಿಸುವುದನ್ನು ಈಗಲೂ ನೆರವೇರಿಸಲಾಗುತ್ತದೆ. ಒಟ್ನಲ್ಲಿ ಕೊಡಮಣಿತ್ತಾಯ ದೈವ ಸನ್ನಿಧಿಯ ಎದುರುಗಡೆ ನ್ಯಾಯ ತಾರ್ಮಾನಕ್ಕೆ ಒಪ್ಪಿಕೊಳ್ಳುವುದು. ಆ ಸಾನಿಧ್ಯದಲ್ಲಿ ದೈವದ ಮಧ್ಯಸ್ಥಿಕೆದಾರನಾಗಿ ನಿಲ್ಲುವ ಕಂಚಿ ಪೂವಣಿ ಕೂಡಾ ನ್ಯಾಯಾಪೇಕ್ಷಿಗಳ ಒಮ್ಮತವನ್ನೇ ಪುನರುಚ್ಚಿಸಬೇಕು ಹೊರತು ಬಲಾತ್ಕಾರದ ಮಾತು ,ಒಪ್ಪಂದಕ್ಕೆ ಅವಕಾಶವಿರುವುದಿಲ್ಲ. ಎಲ್ಲ ರೀತಿಯಲ್ಲೂ ಒಪ್ಪಿಗೆ,ರಾಜಿಯಾದುದಕ್ಕೆ ಸಾಕ್ಷಿಯಾಗಿ,ದೈವ ಪೀಠದ ಹೂವು,ಗಂಧ ಪ್ರಸಾದವನ್ನು ಪೂವಣಿಯವರು ನೀಡಿ ಹರಸುತ್ತಾರೆ. ನಡೆ,ರೂಪಗಳು ಏನೇ ಇರಲಿ ಕೊಡಮಣಿತ್ತಾಯ ದೈವದ ಕಾರಣಿಕ ಸತ್ಯವನ್ನು ಪ್ರತಿಯೊಬ್ಬನೂ ನಂಬಿರುತ್ತಾನೆ, ಏಳ್ಗೆಯ ಪ್ರತಿಫಲವನ್ನು ಪಡೆಯುತ್ತಾನೆ. ಪಡ್ಯಾರಬೆಟ್ಟ ದೈವಸ್ಥಾನದಲ್ಲಿ ಬಂದು ಸೇರುವ ಭಕ್ತಾದಿಗಳ ಸಂಖ್ಯೆ ಅಪಾರವಾದುದು. ಸ್ಥಳೀಯ ಭಕ್ತರು ಅಲ್ಲಿಗೆ ತಂದೊಪ್ಪಿಸುವ ಹರಕೆಯಲ್ಲಿ ಎಳನೀರು ಲೆಕ್ಕವಿಲ್ಲದಷ್ಟು ಸೇರುವುದು. ಬಹುಶಃ ಅದನ್ನು ಕುಡಿಯುವುದಕ್ಕೆ ಅತಿಥಿಗಳಿಗೆ ಮತ್ತು ಆಗಮಿಸಿದ ಭಕ್ತರಿಗೇ ಕೊಡಲಾಗುತ್ತದೆ.
ಅಲ್ಲಿನ ಕೊಡಮಣಿತ್ತಾಯ ದೈವಕ್ಕೆ ನರ್ತನ ಮಾಡುವುದಕ್ಕೆ ಒಂದೇ ಮನೆತನದವರೇ ಮುಂದುವರಿದುಕೊಂಡು ಬರುತ್ತಿದ್ದಾರೆ. ಅದೊಂದು ಪೀಳಿಗೆಗೆ ದೊರತೆ ವರವೆನ್ನಲಾಗುತ್ತಿದೆ. ಮೋಂಟ ಪರವ ಎಂಬವರ ಪೀಳಿಗೆಯಲ್ಲಿ ಈಗ ಅವರ ಮೊಮ್ಮಗನು ಕೋಲ ಕಟ್ಟುವುದು( ನರ್ತಕನಾಗಿರುವುದು). ಮೋಂಟ ಪರವನ ನಾಲಗೆ ಬಹಳ ಹರಿತವಾಗಿತ್ತು ಎನ್ನಲಾಗುತ್ತಿತ್ತು. ಹೇಗೆಂದರೆ, ಪಡ್ಯಾರಬೆಟ್ಟದ ದೈವ ಸಾನಿಧ್ಯದ ಅಂಗಳದಲ್ಲಿ ಆತ ಏನೇ ನುಡಿದರೂ ಅದು ಬದಲಾಗದೆ ಕಾರ್ಯಸಿದ್ಧಿಯಾಗುವುದು. ಆ ಭಯದಿಂದ ತಪ್ಪು ಮಾಡಿದವರು ಪ್ರತಿಯೊಬ್ಬರು ಕೂಡಾ ಸತ್ಯವನ್ನೇ ನುಡಿದು ದೈವದೊಡನೆ ಕ್ಷಮೆಯನ್ನು ದಯಪಾಲಿಸಿಕೊಳ್ಳುತ್ತಿದ್ದರು. ಮೋಂಟ ಪರವಗೆ ಊರೆಲ್ಲ ವಿಶೇಷ ಮರ್ಯಾದೆಯಿರುತ್ತಿತ್ತು, ವರ್ಗ ಭೇದವಿಲ್ಲದೆ ಪ್ರತಿಯೊಬ್ಬರೂ ವಂದಿಸುತ್ತಿದ್ದರು. ಅಂಥ ಗೌರವ,ಸ್ಥಾನಮಾನಗಳನ್ನು ಪಡೆದ ಅಪರೂಪದ ದೈವ ನರ್ತಕನಾಗಿದ್ದರು.
ಈ ಮಾರ್ಚ್ ತಿಂಗಳ ದಿನಾಂಕ 14ರಂದು ಪ್ರಾರಂಭಗೊಳ್ಳುವ ವರ್ಷಾವಧಿ ಜಾತ್ರೆಯು 19ರವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವುದು. ಉಜಿರೆ,ಬೆಳ್ತಂಗಡಿಯತ್ತಿಂದ ಆಗಮಿಸುವ ಭಕ್ತಾದಿಗಳು ವೇಣೂರು ಮೂಡುಬಿದಿರೆ ಮಾರ್ಗವಾಗಿ ಬರಬೇಕು.ವೇಣೂರಿನಿಂದ 8.5 ಕಿ ಮೀ . ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ಹೋಗುವಾಗ 12ಕಿ. ಮೀ. ದೂರ ಮಾರ್ಗ.
ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾಗಿ ಜೀವಂಧರ ಜೈನ್ ಅವರು ಸೇವೆ ಮಾಡುತ್ತಿದ್ದಾರೆ. ದೈವದ ಸಾನಿಧ್ಯದ ಎದುರು ಅವರನ್ನುಕಂಚಿ ಪೂವಣಿ ಎಂದು ಹೆಸರಿಸಿ ದೈವ ಕರೆಯುವುದು. ಅದು ತುಳುನಾಡಿನ ದೈವ ನುಡಿಯುವ ಸಂಪ್ರದಾಯ. ಆಯಾ ಗುತ್ತು ,ಬರ್ಕೆ ಮನೆಗಳ ಯಜಮಾನನನ್ನು ದೈವ ಹಾಗೆ ಅಡ್ಡ ಹೆಸರಿಟ್ಟು ಕರೆಯುವುದು. ಆತನ ವ್ಯಾವಹಾರಿಕ ಹೆಸರನ್ನು ಕರೆಯುವುದಿಲ್ಲ. ನಾಳೆಯ ದಿನದಲ್ಲಿ ಆಡಳಿತ ಮುಂದುವರಿಸು ಮತ್ತೊಬ್ಬನಿಗೆ ದೈವದ ಅನುಮತಿ ದೊರೆತಾಗಲೂ ಆತನೂ ಕಂಚಿ ಪೂವಣಿ ಎಂದೇ ಕರೆಯಲ್ಪಡುತ್ತಾನೆ . ತುಳುನಾಡಿನ ದೈವಾರಾಧನೆಯ ಎಲ್ಲ ಕಡೆಯಲ್ಲೂ ಚಾಲ್ತಿಯಲ್ಲಿರುವ ಸಂಪ್ರದಾಯ ಪದ್ಧತಿ ಅದು. ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್ ಅವರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಿಂದ ಬಹಳ ಪ್ರಸಿದ್ದರಾಗಿರುತ್ತಾರೆ. ಯಾವುದೇ ಧಾರ್ಮಿಕ ಸಮಾರಂಭಗಳಲ್ಲೂ ಅವರಿಗೆ ಮೊದಲ ಪ್ರಾಶಸ್ತ್ಯ ದೊರಕುವುದು. ಬಹಳ ಸಮಾಧಾನಿ,ನಿಗರ್ವಿಯಾಗಿರು ಅವರೀಗ ವಯೋಸಹಜ ಆಯಾಸದಿಂದಾಗಿ ಪ್ರಯಾಣ,ಪ್ರವಾವನನ್ನು ಕಡಿತಗೊಳಿಸಿತೊಂಡಿದ್ದಾರೆ.