ನೇರ ನೇಮಕಾತಿ ಕೇವಲ ಸಿ ಮತ್ತು ಡಿ ಗ್ರೂಪ್‌ಗೆ ಸೀಮಿತಗೊಳಿಸಬಾರದು

Picture of RB NEWS

RB NEWS

Bureau Report

ಕಾರ್ಕಳ : ರಾಜ್ಯದ 13 ಅರಣ್ಯ ಬುಡಕಟ್ಟು ಸಮುದಾಯಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕೆಂಬ ಸದುದ್ದೇಶದಿಂದ 2025–26ರ ಬಜೆಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವ ನೇರ ನೇಮಕಾತಿ ಆದೇಶವನ್ನು, ಕೇವಲ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಿ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಮಾಹಿತಿಯನ್ನು ಸಂಗ್ರಹಿಸುತ್ತಿರುವುದು ನ್ಯಾಯಯುತವಲ್ಲ.

13 ಅರಣ್ಯ ಬುಡಕಟ್ಟು ಸಮುದಾಯಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ ಡಿ.ಎಡ್., ಬಿ.ಎಡ್., ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು, ಪಿಎಚ್.ಡಿ. ಹಾಗೂ ವಿವಿಧ ಸ್ನಾತಕೋತ್ತರ ಪದವಿಧರರು ಇದ್ದಾರೆ. ಇಂತಹ ವಿದ್ಯಾವಂತ ಯುವಜನರಿಗೆ ಸಮರ್ಪಕ ಅವಕಾಶ ನೀಡದೇ, ನೇಮಕಾತಿಯನ್ನು ಕೇವಲ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಿಗೆ ಸೀಮಿತಗೊಳಿಸಿದರೆ, ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳು ಅನ್ಯಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಇದರಿಂದಾಗಿ ಅನೇಕರು ವಯೋಮಿತಿಯನ್ನು ಮೀರಿ, ಭವಿಷ್ಯದಲ್ಲಿ ಇನ್ನಷ್ಟು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ, ಒಮ್ಮೆಗೇ ಎ ಗ್ರೂಪ್‌ನಿಂದ ಡಿ ಗ್ರೂಪ್‌ವರೆಗೆ ಎಲ್ಲಾ ಇಲಾಖೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೊಳಿಸುವುದು ಅತ್ಯಾವಶ್ಯಕವಾಗಿದೆ.

ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, 13 ಅರಣ್ಯ ಬುಡಕಟ್ಟು ಸಮುದಾಯಗಳ ವಿದ್ಯಾವಂತ ಯುವಜನರಿಗೆ ನ್ಯಾಯಯುತ ಹಾಗೂ ಸಮಗ್ರ ಅವಕಾಶ ಒದಗಿಸುವ ರೀತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top