ನೆಲ್ಲಿಕಾರು ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳೆಯರಿಗೆ ಗ್ರಾಹಕ ಮಾಹಿತಿ
ಮೂಡಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ನ ಹಳೆ ಕಟ್ಟಡದಲ್ಲಿ ಜನವರಿ 28 ರಂದು ಮಹಿಳಾ ಗ್ರಾಮ ಸಭೆ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಅತ್ಯುಪಯುಕ್ತ ಗ್ರಾಹಕ ಮಾಹಿತಿಗಳನ್ನು ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ನೀಡಿದರು.
ವಸ್ತುಗಳನ್ನು ಖರೀದಿಸುವ ಮುನ್ನದಲ್ಲಿ ಅದರಲ್ಲಿರುವ ಉಲ್ಲೇಖಿಸಿರುವ ಮುಖ್ಯ ಅಂಶಗಳನ್ನು ಗಮನ ಹರಿಸಬೇಕು. ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಮುನ್ನ ಮುನ್ನೆಚ್ಚರಿಕೆ ವಹಿಸುವ ಕ್ರಮದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಜನಪಯೋಗಕ್ಕಾಗಿ ಸರಕಾರದ ಹಲವಾರು ಯೋಜನೆಗಳ ಅನುಷ್ಠಾನಗೊಳಿಸಿದೆ. ಅವುಗಳನ್ನು ಅರ್ಹ ಫಲಾನುಭವಿಗಳಿಗೂ ಸಿಗುವಂತಾಗಬೇಕೆಂದರು.
ಗ್ರಾಮ ಪಂಚಾಯತ್ ದೂರ ದೃಷ್ಟಿ ಯೋಜನೆ ಹಾಗೂ ಮಹಿಳಾ ಗ್ರಾಮ ಸಭೆಯನ್ನು ಉದ್ದೇಶಿಸಿ ಆರೋಗ್ಯ ಕೇಂದ್ರದ ಉಷಾ ಆಯುಷ್ಮಾನ್ ಕಾರ್ಡ್ ಪಡೆದು ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು.
ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರ ನೋಂದಣಿ, ಪೋಶಣ್ ಅಭಿಯಾನ, 25 ವರ್ಷಗಳಿಂದ ನಡೆಯುತ್ತಿರುವ ಸ್ತ್ರೀಶಕ್ತಿ ಗುಂಪುಗಳ ಕಾರ್ಯ, ಉದ್ಯೋಗಿನಿ ಯೋಜನೆ, ಮಹಿಳಾ ಅಭಿವೃದ್ಧಿ ನಿಗಮದಿಂದ ಸಿಗುವ ವಿವಿಧ ಸೌಲಭ್ಯಗಳು, ಮಹಿಳಾ ಕಿರುಕುಳ ತಡೆಗಾಗಿ ಇರುವ ಸಖಿ ಒನ್ ಸ್ಟಾಪ್ ಯೋಜನೆ, ಇತ್ಯಾದಿಗಳ ವಿವರವನ್ನು ತಿಳಿಸಿ ರಾಜಕೀಯವಾಗಿ ಮಹಿಳೆಯರು ಅಭಿವೃದ್ಧಿ ಹೊಂದಿ ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸಬೇಕೆಂದು ಕೇಳಿಕೊಂಡರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತ್ ಸದಸ್ಯ ಶಶಿಧರ್ ಸಂಜೀವಿನಿ, ಸ್ತ್ರೀಶಕ್ತಿ ಗುಂಪುಗಳು ಬಲಗೊಂಡು ಗ್ರಾಮದಲ್ಲಿ ತಪ್ಪುಗಳಾದಾಗ ದನಿಯತ್ತಿ ಸರಿಪಡಿಸಲು ನಮ್ಮನ್ನು ಉಪಯೋಗಿಸಿಕೊಳ್ಳಬೇಕೆಂದು ಆಶಿಸಿದರು. ಮಹಿಳಾ ಆರೋಗ್ಯ ತಪಾಸಣೆಗಾಗಿ ಸರಕಾರದಿಂದ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ದೇವಕಿ, ಉಪಾಧ್ಯಕ್ಷೆ ಸುಶೀಲ, ಆಶಾಲತಾ, ಸಂತೋಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿಯೂ ಉಪಾಧ್ಯಕ್ಷನಾಗಿ ಆಯ್ಕೆಗೊಂಡ ಸಂತಸವನ್ನು ಹಂಚಿಕೊಂಡು ಯಾವುದೇ ಕೆಲಸಕ್ಕೂ ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದೆಂದು ಸಭೆಗೆ ಭರವಸೆ ನೀಡಿದರು. ಆದಷ್ಟು ಬೇಗ ರಸ್ತೆ ಸಮರ್ಪಕಗೊಳಿಸುವಂತಹ ಪ್ರಯತ್ನ ಮಾಡುವುದಾಗಿಯೂ ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.




































