ನೂರು ದೀಪ
ನೂರು ದೀಪ ಹಚ್ಚಿ ಉರಿಸೆ
ತನುವು ಬೆಳಗ್ವುದಲ್ಲದೆ
ಮನವು ಬೆಳಗ್ವುದೆಂತು ನಿನ್ನ
ಒಳಗ ಹಣತೆ ಉರಿಯದೆ
ಉರಿವ ದೀಪ ಜ್ವಲಿಪ ಜ್ಯೋತಿ
ನಿನ್ನ ಹೃದಯ ತಲುಪದೆ
ಜಗವ ಬೆಳಗ್ವುದೆಂತು ಮನ
ದಜ್ಞಾನ ತಿಮಿರವಡಗದೆ !!
ತನುವ ಸು:ಖದ ಬತ್ತಿ ಹೊಸೆದು
ಮನದ ಭಾವದೆಣ್ಣೆ ಸುರಿದು
ನಿನ್ನ ಹಣತೆ ನೀನೆ ಉರಿಸು
ಹರಿಸು ಜಗದ ಕತ್ತಲೆ
ಸೂರ್ಯನಂತೆ ಚಂದ್ರನಂತೆ
ಕಡೆಗೆ ಮಿಂಚು ಹುಳುವಿನಂತೆ
ಕ್ಷಿತಿಯ ಬೆಳಗಿ ಮೆರೆದು ನೀನು
ಆಗು ಜಗಕೆ ದೀವಿಗೆ!!
ಎಣ್ಣೆಯಾರಿ ಬತ್ತಿ ಜಾರಿ
ಹಣತೆಯೊಳಗೆ ಬಿದ್ದು ಜಾರಿ
ಹಣತೆ ಬಿರಿದು ಜರಡಿ ಹರಿದು
ಜಗತಿಗಾಯ್ತು ಕತ್ತಲೆ
ಸಾಲು ದೀಪ ಉರಿಯಲಿಲ್ಲ
ಉರಿಸಲಿಲ್ಲಿ ದೀಪವಿಲ್ಲ
ದೀಪದಿಂದ ದೀಪವುರಿವ
ಸತ್ಯವಾಯ್ತು ಬೆತ್ತಲೆ!!
ಮನುಜನಹಮ ಸ್ವಾರ್ಥದುರಿಯು
ತಿರೆಯ ತೇಜ ನುಂಗುತಿರಲು
ಸತ್ಯವಳಿದು ಮಿಥ್ಯೆ ಮೆರೆಯೆ
ಬೆಳಕ ಕತ್ತಲೆಂದು ಭ್ರಮಿಸಿ
ಹಗಲ ನಿಶೆಯೊಳಲೆಯು
ಕಣ್ಣಿನೊಳಗ ಹಣತೆಯಾಗು
ದೀಪವಾಗಿ ಬೆಳಕ ತೋರು
ನಡೆಯ ಗುರಿಯ ತಲಪಲು!!
ಹಣತೆಯಾಗು ಬತ್ತಿಯಾಗು
ಬತ್ತಿಯೊಳಗ ತೈಲವಾಗು
ತೈಲದೊಳಗ ದೀಪವಾಗು
ದೀಪದೊಳಗ ತೇಜವಾಗು
ಬೆಳಕ ಕಿಂಡಿಯೊಳಗಿನಿಂದ
ಜ್ಞಾನ ಜ್ಯೋತಿ ಹರಿಸಿ ಜಗದ
ಅಂಧಕಾರ ಸರಿಸಿ ಹೊಸತು
ದೀಪವನ್ನು ಬೆಳಗಿಸು !!
– ಬಿಪಿನಚಂದ್ರ





































