ಕಾರ್ಕಳ,ಮೂಡುಬಿದಿರೆಯಲ್ಲಿ ಕಳೆದ ದಶಕಗಳಿಂದ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಆರ್ ಬಿ ಜಗದೀಶ ದಿಢೀರಾಗಿ ವಿಜಯವಾಣಿ ಪತ್ರಿಕೆಗೂ ಮೈಲಿಗೆಯಾಗಿಬಿಟ್ಟ!
ಇಂದಿನ ಪತ್ರಿಕಾ ಮಾಲೀಕರನ್ನು ನಂಬಿಕೊಂಡು ದಿಗ್ವಿಜಯ ಸಾಧಿಸುವುದು ಏನೂ ಇಲ್ಲ,ನಿನ್ನ ಕಾರಿನ ಹಿಂದಿನ ಗಾಜಿಗೆ ಅಂಟಿಸಿದ್ದ ದಿಗ್ವಿಜಯ ನ್ಯೂಸ್ ಸ್ಟಿಕ್ಕರನ್ನು ಹರಿದು ಕಿತ್ತು ಬಿಸಾಡು ಎಂದು ಪ್ರಾರಂಭದಲ್ಲೆ ನಾನು ಹೇಳಿದ್ದೆ. ಆದರೆ ಅವನಿಗೆ ಸ್ವಾಮಿ ನಿಷ್ಠೆ ಮತ್ತು ವೃತ್ತಿ ನಿಷ್ಠೆ ಮುಖ್ಯವೇ ಹೊರತು ನನ್ನ ಸಲಹೆ ಮುಖ್ಯವೂ ಅಲ್ಲ.
ಯಾವುದೋ ಸುದ್ದಿ,ಸಂದರ್ಶನಕ್ಕೆ ವಿವಾದ ಹುಟ್ಟಿಸಿ ಆತನನ್ನು ವಿಜಯವಾಣಿ/ದಿಗ್ವಿಜಯದಿಂದ ದೂರ ಮಾಡಲಾಯಿತು.
ನನ್ನ ಆಪ್ತ ಸ್ನೇಹಿತರೊಬ್ಬರ ಸೆಟಲೈಟ್ ನ್ಯೂಸ್ ಚಾನೆಲ್ ಪ್ರಾರಂಭವಾಗುವ ನಿರೀಕ್ಷೆಯುಂಟು,ಆದಾಗ ಜಿಲ್ಲಾ ವರದಿಗಾರ ಕೆಲಸ ಮಾಡುವಂತೆ ನೇಮಿಸುವ ಕೆಲಸ ಮಾಡುತ್ತೇನೆ ಎಂದ ಅಪಧೈರ್ಯ ಕೊಟ್ಟೆ, ನೀನೂಗ ವೆಬ್ ನ್ಯೂಸ್ ಮಾಡುವುದಾದರೆ ಸಂತೋಷ ಎಂದೂ ಸಲಹೆ ನೀಡಿದೆ.
ಸ್ವತಃ ನಾನು ಮತ್ತು ಆದಿರಾಜ ಅಜಿರಿಯವರೇ ಶಾಸಕ ವಿ. ಸುನಿಲ್ ಕುಮಾರ್ ಅವರಲ್ಲಿ ಈತನನ್ನು ಮುಂದಿಟ್ಟು ,ಈ ಮೈಲಿಗೆಯಲ್ಲಿ ನಿಮ್ಮ ಪಾತ್ರವಿದೆಯೇ ಎಂದು ಕೂಡಾ ಕೇಳಿ ತಮಾಷೆಯಾಗಿ ಘಂಟೆ ಕಾಲಹರಣ ಮಾಡಿಯೂ ಆಯಿತು! ನನ್ನದೇನು ಪಾತ್ರವಿಲ್ಲವೆಂದೂ ಕುಮಾರ್ ಹೇಳಿದರು.ಅದು ಈಗ ಮುಗಿದ ಅಧ್ಯಾಯ!
ಜಗದೀಶನದ್ದು ಸ್ಟೇಬಲ್ ಮೈಂಡ್ ಅಲ್ಲ ಎಂಬುದು ನನಗೆ ಗೊತ್ತೇ ಉಂಟು.ಎಷ್ಟು ಹೇಳಿ,ಅದನ್ನೇ ಅರೆದು ಕುಡಿಸಿದರೂ ಅವನಿಗೆ ಸಮಾಧಾನ ಕಡಿಮೆ !ಸರ್ ಸರ್ ಅದೂ ಇದೂ ಎಂದು ಕೇಳುವ ಪ್ರಶ್ನೆಯ ಮಾತು ತುಂಡಾಗುವುದಿಲ್ಲ.ನನ್ನಂಥ ತಾಳ್ಮೆಯವನಷ್ಟೆ ಅವನಲ್ಲಿ ಹೆಚ್ಚು ಹೊತ್ತು ಮಾತಾಡಬಹುದೇನೊ!
ಆರ್ ಬಿ ನ್ಯೂಸ್ ಎಂಬ ಶೀರ್ಷಿಕೆಯಲ್ಲಿ ವೆಬ್ ನ್ಯೂಸ್ ಚಾನೆಲ್ ಪ್ರಾರಂಭಿಸಿಯೇ ಬಿಟ್ಟ. ನನಗೆ ಹೇಳಿದ್ದು ಕೂಡಾ ಎಲ್ಲ ಮುಗಿದ ನಂತರವೆ.ಅವನ ಮನೋಸ್ಥೈರ್ಯ ಎಂಥದು ಎನ್ನುವುದಕ್ಕೆ ಸದ್ದು ಗದ್ದಲವಿಲ್ಲದೆ ಕಾರ್ಕಳದ ಕೋಟೆ ಮಾರಿಯಮ್ಮ ಸನ್ನಿಧಾನದಲ್ಲೆ ಉದ್ಘಾಟನೆ ಮಾಡಿಸಿದ!
ಒಬ್ಬ ಕುತೂಹಲ ತಣಿಯದ ಪತ್ರಕರ್ತ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೇಳಿದನ್ನು ಕೇಳಿಸಿಕೊಂಡು,ಬಡಿಸಿದ್ದನ್ನು ತಿಂದುಂಡು ಬರೆಯುವುದಕ್ಕೆ ಅವನ ಛಾತಿ ಒಪ್ಪದ ಕಾರಣದಿಂದಲೇ ಆತ ಎಲ್ಲರಿಗೂ ಪರಿಚಯದವನಾಗುತ್ತಾನೆ ಅಷ್ಟೇ ಅಂತರ ಕಾಯ್ದುಕೊಳ್ಳಲು ಬಯಸುತ್ತಿರುತ್ತಾರೆ. ಅದನ್ನೇ ಹೋಲಿಸಿ ಮೇಲೆ ಶೀರ್ಷಿಕೆ ಬರೆದೆ ಏನೆಂದರೆ ತನ್ನ ನಿಷ್ಠೂರತೆಗೆ ಫ್ರೇಮ್ ಹಾಕಿದ್ದು ಹೊರತು ರಾಜಿ ಅಲ್ಲ ಎಂದು.
ಆರ್ ಬಿ ನ್ಯೂಸ್ ಪ್ರಾರಂಭಿಸಿದ ನಂತರವೂ ಅನೇಕ ವಿಚಾರಗಳನ್ನು ಖಡಕ್ಕಾಗಿ ಪ್ರಕಟಿಸುವುದಕ್ಕೆ ಸ್ವಾತಂತ್ರ್ಯವಿದ್ದರೂ ಜನ ಬದುಕಲು ಬಿಡುವುದಿಲ್ಲವೆಂದು ಲೈಟಾಗಿಯೇ ಬರೆಯತೊಡಗಿದ. ಹಾಗಂತ ನಾನೇ ಒಂದೆರಡು ಖಡಕ್ ಸುದ್ದಿ ಲೇಖನ ಕೊಟ್ಟು ಪ್ರಚೋದಿಸಿದೆ.
ಕಾರ್ಕಳದ ಮಟ್ಟಿಗೆ ಒಂದು ಯೋಗ್ಯ ವೆಬ್ ಚಾನೆಲ್ ಅನ್ನುತ್ತೇನೆ.ಬೇರೆ ಚಾನಲ್ ಗಳು ಕೂಡಾ ಅದರದ್ದೇ ಮಾನದಂಡದಲ್ಲಿ ಪ್ರಕಟವಾಗುತ್ತಿದ್ದು ಅಸಂಖ್ಯ ಓದುಗರ ಸಂಖ್ಯೆಯನ್ನು ಪಡೆದಿವೆ.
ಪತ್ರಿಕೆ ಅಥವಾ ಸುದ್ದಿ ಚಾನೆಲ್ ಎಂದಾಗ ತಾನಲ್ಲದಿದ್ದರೂ ಕನಿಷ್ಟ ಆ ಮಾಧ್ಯಮವಾದರೂ ಉಳಿಯಬೇಕಾದರೆ ಕೆಲವೊಂದು ರಾಜಿ,ಹೊಂದಾಣಿಕೆ ಬಹಳ ಅಗತ್ಯವಿದೆ. ಎಲ್ಲರನ್ನೂ,ಎಲ್ಲವನ್ನೂ ಎಲ್ಲ ವಿಚಾರಗಳಿಂದ ಪ್ರಶ್ನಿಸುವುದಾಗಲೀ,ವೈಭವೀಕರಿಸುವುದಾಗಲಿ ಪತ್ರಕರ್ತ ಹಾಗೂ ಪತ್ರಿಕೆಯ ಮಾಲೀಕ ಮಾಡುವುದು ಆರೋಗ್ಯಕರವೆನಿಸುವುದಿಲ್ಲ.
ಇದೀಗ ಆರ್ ಬಿ ನ್ಯೂಸ್ ಗೆ ಒಂದು ವರ್ಷದ ಸಂಭ್ರಮ, ಬೆಳೆದು ಬಂದ ಸಂತಸ,ಜನರು ಒಮ್ಮತದಿಂದ ಸ್ವೀಕರಿಸಿದ ಆನಂದ ಎಲ್ಲವನ್ನೂ ಆರ್ ಬಿ ಜಗದೀಶ ಕಣ್ತುಂಬಿಕೊಳ್ಳುತ್ತಿರುವ ಅಪೂರ್ವ ಕ್ಷಣಕ್ಕೆ ನಾನು ನನ್ನದೇ ಹಿತಾಕಾಂಕ್ಷೆಯ ಶುಭಾಶಯ ಹೇಳುತ್ತೇನೆ.
ಆತ ದಣಿವರಿಯದ ಪತ್ರಕರ್ತ ಹಾಗೂ ಸುದ್ದಿಗಾಗಿ ಮತ್ತಷ್ಟು ಕೆದಕುವ ,ಕೆದಕಲೇಬೇಕಾದ ಕರ್ತವ್ಯ ಶಕ್ತಿವಂತ.ಅದು ನನ್ನ ಹೊಗಳಿಕೆಯಲ್ಲ,ವಸ್ತು ಸ್ಥಿತಿಯನ್ನು ಬರೆದೆನಷ್ಟೆ.
-ವಿ. ಕೆ. ವಾಲ್ಪಾಡಿ

























