ನಿಟ್ಟೆ ವಿವಿಯ 16ನೇ ಘಟಿಕೋತ್ಸವದ 2ನೇ ಅಧಿವೇಶನ: 1,148 ವಿದ್ಯಾರ್ಥಿಗಳಿಗೆ ಬಿಟೆಕ್ ಪದವಿ ಪ್ರದಾನ

Picture of RB NEWS

RB NEWS

Bureau Report


ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಎರಡನೇ ಅಧಿವೇಶನವು ಶನಿವಾರ ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿಯ ವಿವಿಧ ವಿಭಾಗಗಳ 1,148 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳ ಸಾಧಕ ವಿದ್ಯಾರ್ಥಿಗಳನ್ನು ಸುವರ್ಣ ಪದಕ ನೀಡಿ ಗೌರವಿಸಲಾಯಿತು.
ಘಟಿಕೋತ್ಸವ ನುಡಿಗಳನ್ನಾಡಿದ ಪದ್ಮಶ್ರೀ ಪುರಸ್ಕೃತ, ಡಿಆರ್‌ಡಿಎಲ್- ಡಿಆರ್‌ಡಿಒದ ಮಾಜಿ ನಿರ್ದೇಶಕ, ಬೆಂಗಳೂರಿನ ಎಸ್-ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಪುಣೆಯ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿಯ ಮಾಜಿ ಕುಲಪತಿ ಡಾ. ಪ್ರಹ್ಲಾದ ರಾಮ ರಾವ್, ಘಟಿಕೋತ್ಸವವು ಕೇವಲ ಪದವಿ ಪ್ರದಾನ ಸಮಾರಂಭವಲ್ಲ. ಹಲವು ವರ್ಷಗಳ ಪರಿಶ್ರಮ, ಕಲಿಕೆ, ಪ್ರಯೋಗಾಲಯದ ಅನುಭವ, ಪರೀಕ್ಷೆ ಹಾಗೂ ಸವಾಲುಗಳನ್ನು ಎದುರಿಸಿ ಸಾಧಿಸಿದ ಮೈಲಿಗಲ್ಲು ಮತ್ತು ಮುಂದಿನ ಬದುಕಿಗೆ ಹೊಸ ಅವಕಾಶದ ಮೆಟ್ಟಿಲಾಗಿದೆ. ಪದವೀಧರರು ತಮ್ಮ ಜ್ಞಾನ, ಸಾಮರ್ಥ್ಯವನ್ನು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ವ್ಯಕ್ತಿ ನಿರ್ಮಾಣದ ಬಳಿಕ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.

ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪೋಷಕರು ಮತ್ತು ಕುಟುಂಬದವರ ತ್ಯಾಗ, ನಿರೀಕ್ಷೆ, ಪ್ರೋತ್ಸಾಹ ಹಾಗೂ ತಾಳ್ಮೆಯ ಕೊಡುಗೆ ಅಪಾರವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಅವರು ಮಾಡಿದ ಪರಿಶ್ರಮ ಮತ್ತು ತ್ಯಾಗವನ್ನು ಗೌರವಿಸಬೇಕು ಎಂದು ಹೇಳಿದರು. ನಿಟ್ಟೆ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪದವಿಯೊಂದಿಗೆ ಪಡೆದಿರುವ ಜ್ಞಾನ ಮತ್ತು ಕೌಶಲವನ್ನು ಜೀವನದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು. ವೃತ್ತಿಪರ ಸಾಧನೆಯ ಜತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಶುಭಹಾರೈಸಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಜ್ಞಾನ, ಮೌಲ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು. ಸಂಸ್ಥೆಯಲ್ಲಿ ಪಡೆದ ಶಿಕ್ಷಣವನ್ನು ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತರಾಗಬೇಕು ಎಂದು ಆಶಿಸಿದರು.

ನಿಟ್ಟೆ ವಿವಿಯ ಐಎಸ್‌ಆರ್-ಸಿ ಆರ್ ಎಲ್ ವಿಭಾಗದ ಉಪಾಧ್ಯಕ್ಷ ಡಾ. ಸತೀಶ್ ಕುಮಾರ್ ಭಂಡಾರಿ, ಬೆಂಗಳೂರು ಕ್ಯಾಂಪಸ್‌ನ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಟ್ರಸ್ಟಿ ವಿರೇನ್ ಹೆಗ್ಡೆ, ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪ್ರೊ. ಡಾ. ಒಮೀದ್ ಅನ್ಸಾರಿ, ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಪ್ರೊ. ಸಂದೀಪ್ ಶಾಸ್ತ್ರಿ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ. ಶೆಟ್ಟಿ, ಬೆಂಗಳೂರು ಕ್ಯಾಂಪಸ್‌ನ ಪರೀಕ್ಷಾಂಗ ಮುಖ್ಯಸ್ಥ ಡಾ. ಪ್ರಶಾಂತ್ ವಿ. ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರು, ವಿಭಾಗಗಳ ನಿರ್ದೇಶಕರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ. ಘಟಿಕೋತ್ಸವ ಮೆರವಣಿಗೆಯನ್ನು ಮುನ್ನಡೆಸಿದರು ಹಾಗೂ ಪದವಿ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ನಿಟ್ಟೆ ವಿವಿ ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ ಸ್ವಾಗತಿಸಿದರು. ಸಹಪ್ರಾಧ್ಯಾಪಕರಾದ ಡಾ. ಗ್ರೈನಲ್ ಡಿಮೆಲ್ಲೊ ಹಾಗೂ ಡಾ. ಸ್ನೇಹಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top