ಕಾರ್ಕಳ : ನಿಟ್ಟೆ ಸಮೀಪದ ಬಜೆಕಳದ ತೋಟವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ವೃದ್ಧನೊಬ್ಬರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಬಜೆಕಳ ನಿವಾಸಿ ಜಯಕರ ಶೆಟ್ಟಿ (80) ಅವರು ಈ ಅವಘಡದಲ್ಲಿ ದೇಹಪೂರ್ತಿ ಸುಟ್ಟು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಇಂದು ಬೆಳಿಗ್ಗೆ ಸುಮಾರು 11.30ರ ವೇಳೆಗೆ ಜಯಕರ ಶೆಟ್ಟಿ ಅವರ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ ತೋಟದಾದ್ಯಂತ ವ್ಯಾಪಿಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ಅಡಚಣೆ ಉಂಟಾಗಿದೆ. ಘಟನೆ ವೇಳೆ ತೋಟದೊಳಗಿದ್ದ ಜಯಕರ ಶೆಟ್ಟಿ ಅವರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ದೇಹಪೂರ್ತಿ ಸುಟ್ಟುಕೊಂಡು ಜೀವಮರಣ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರು ಅಂಗವೈಕಲ್ಯ ಹೊಂದಿದ್ದ ವ್ಯಕ್ತಿಯಾಗಿದ್ದರಿಂದ ತಕ್ಷಣ ಸ್ಥಳದಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ದಿವಾಕರ ಶೆಟ್ಟಿ ಹಾಗೂ ಅವರ ಪತ್ನಿ ಮಾತ್ರ ಇದ್ದು, ಕುಟುಂಬದ ಇತರ ಸದಸ್ಯರು ಉದ್ಯೋಗ ನಿಮಿತ್ತ ಹೊರ ಊರುಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಸಮಯದಲ್ಲಿ ಮನೆಯವರಿಂದ ಬೆಂಕಿ ಆರಿಸುವ ಪ್ರಯತ್ನ ನಡೆದಿದ್ದರೂ ಗಾಳಿಯ ರಭಸದಿಂದ ಬೆಂಕಿ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ಅವರ ನೇತೃತ್ವದಲ್ಲಿ ಸಹ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಅಚ್ಚತ ಕರ್ಕೇರಾ, ಹರಿಪ್ರಸಾದ್, ಭೀಮಪ್ಪ ಮತ್ತು ಚಾಲಕ ಲೋಕೇಶ್ ಅವರು ಸ್ಥಳಕ್ಕೆ ಧಾವಿಸಿ ಶ್ರಮಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅವರ ತಕ್ಷಣದ ಕ್ರಮದಿಂದ ಇನ್ನಷ್ಟು ಆಸ್ತಿಪಾಸ್ತಿ ಹಾನಿ ಸಂಭವಿಸುವುದನ್ನು ತಪ್ಪಿಸಲಾಗಿದೆ. ಈ ಅವಘಡದಿಂದ ತೋಟದ ಭಾಗಶಃ ಹಾನಿಯಾಗಿದ್ದು, ನಷ್ಟದ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ. ಬೆಂಕಿ ತಗುಲಲು ನಿಖರ ಕಾರಣ ಏನು ಎಂಬುದರ ಕುರಿತು ಪರಿಶೀಲನೆ ಮುಂದುವರಿದಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.