ನಿಟ್ಟೆ : ನೂತನ ಪದಾಧಿಕಾರಿಗಳ ಆಯ್ಕೆ

Picture of RB NEWS

RB NEWS

Bureau Report

ಕಾರ್ಕಳ: ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು–ನಿಟ್ಟೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಿಟ್ಟೆ ಕೆಮ್ಮಣ್ಣು ಕಮಲಗುಡ್ಡ ಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈಭವವಾಗಿ ನಡೆಯಿತು.
“ಕಳೆದುಹೋದ ದಿನಗಳು ಮತ್ತೆ ಜೀವಂತವಾಗುವ, ಬಾಡಿದ ಸ್ನೇಹ ಮತ್ತೆ ಚಿಗುರುವ ಹಾಗೂ ಹಳೆಯ ದಿನಗಳನ್ನು ನೆನೆದು ಮತ್ತೆ ಕ್ರಿಯಾಶೀಲರಾಗುವ” ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸೌಮ್ಯ ಮತ್ತು ನಿಧಿಶ ಅವರು ಪ್ರಾರ್ಥನೆ ಸಲ್ಲಿಸಿದರು. ಕಳೆದ ಸಾಲಿನ ಅಧ್ಯಕ್ಷರಾದ ಡಾ. ಪ್ರಶಾಂತ್ ಕುಮಾರ್ ಕೆ. ಅವರು ಸ್ವಾಗತ ಭಾಷಣ ಮಾಡುತ್ತಾ ತಮ್ಮ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಪೂರ್ವಾಧ್ಯಕ್ಷರಾದ ಡಾ. ರಘುನಂದನ್ ಕೆ.ಆರ್ ಸಂಸ್ಥೆಯ ಸ್ಥಾಪನೆ ಹಾಗೂ ಬೆಳವಣಿಗೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀ ಕೃಷ್ಣಾನಂದ ರಾವ್ ಅವರು 2023–25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಪದಪ್ರಧಾನ ಅಧಿಕಾರಿಯಾಗಿ ಹೋಟೆಲ್ ರತ್ನಾ ಫಾರೆವರ್‌ನ ರೊ. ಕರುಣಾಕರ ಶೆಟ್ಟಿ ಅವರು ಉಪಸ್ಥಿತರಿದ್ದು, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಲಬ್‌ನ ಕಾರ್ಯಗಳನ್ನು ಪ್ರಶಂಸಿಸಿ, ನೂತನ ಸಮಿತಿಗೆ ಶುಭಾಶಯಗಳನ್ನು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳೀಯ ಪಂಚಾಯತ್ ಪ್ರತಿನಿಧಿ ಶ್ರೀ ಸಂತೋಷ್ ಶೆಟ್ಟಿ (ಪೊರ್ಕಳಗುತ್ತು) ಅವರು ತಮ್ಮ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಲ್ಲ ಸದಸ್ಯರ ಸಹಕಾರ ಅಗತ್ಯವೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಾದ ಡಾ. ದಿಲೀಪ್ ಕುಮಾರ್, ಪೂರ್ವಾಧ್ಯಕ್ಷರಾದ ಡಾ. ರಘುನಂದನ್ ಕೆ.ಆರ್, ಸುರೇಶ್ ಆಚಾರ್ಯ, ಡಾ. ಪ್ರಶಾಂತ್ ಕುಮಾರ್ ಹಾಗೂ ಹಿಂದಿನ ಕಾರ್ಯದರ್ಶಿಗಳಾದ ಸುಧಾಕರ್ ಮಡಿವಾಳ ಮತ್ತು ಕೃಷ್ಣಾನಂದ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸದಸ್ಯ ಸತೀಶ್ ಶೆಟ್ಟಿ ಅವರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ಸಾಹಿಲ್ ಎಸ್. ಪೂಜಾರಿ, ಕೋಶಾಧಿಕಾರಿ ಶ್ರೀ ವಿಠಲ್ ಆಚಾರ್ಯ ಸೇರಿದಂತೆ ಇತರ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top