ಕಾರ್ಕಳ: ತಾಲೂಕು ಕಚೇರಿ ಸಮೀಪದಲ್ಲಿರುವ ಮಕ್ಕಳ ಉದ್ಯಾನವನದ ಅಸುಪಾಸಿನಲ್ಲಿ ಸುಮಾರು ಎರಡು ವರ್ಷದ ಗಂಡು ಕಡವೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದವರು ಕಡವೆಯ ಮೃತದೇಹವನ್ನು ಗಮನಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕುಕ್ಕುಂದೂರು ಗ್ರಾಮ ಪಂಚಾಯತ್ ಸರಹದ್ದಿನೊಳಗೆ ಇರುವ ಅರಣ್ಯದಿಂದ ಕಡವೆ ದಾರಿ ತಪ್ಪಿ ಈ ಪ್ರದೇಶಕ್ಕೆ ಬಂದಿರಬಹುದು. ಓಡಿಬಂದ ವೇಗಕ್ಕೆ ಯಾವುದೋ ಘನ ವಸ್ತುವಿಗೆ ಆಯತಪ್ಪಿ ಬಡಿದು ಮೃತಪಟ್ಟಿರಬೇಕೆಂದು ಅರಣ್ಯ ಸಿಬ್ಬಂದಿ ಶಂಕಿಸಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಡವೆಯ ತಲೆ ಹಾಗೂ ಕೊಂಬುಗಳ ಭಾಗದಲ್ಲಿ ಸಣ್ಣಪುಟ್ಟ ಗಾಯಗಳು ಕಂಡುಬಂದಿವೆ. ಪಶುವೈದ್ಯರ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಆತಂಕದಿAದ ಹೃದಯಾಘಾತಪಟ್ಟು ಕಡವೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಅರುಣ್ “ಆರ್ ಬಿ ನ್ಯೂಸ್” ಗೆ ಮಾಹಿತಿ ನೀಡಿದ್ದಾರೆ.