ನಾಳೆ ಎಡಪದವು ಗೋಪಾಲಕೃಷ್ಣ ದೇವಾಲಯದ ಬಳಿ ಬೃಹತ್ ಪ್ರತಿಭಟನೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ರೈತರ ಸಾಂವಿಧಾನಿಕ ಹಕ್ಕನ್ನೆ ಬುಡಮೇಲು ಮಾಡುತ್ತಿರುವ 440 ಕೆ ವಿ ವಿದ್ಯುತ್ ಲೈನ್ ಯೋಜನೆ ವಿರುದ್ಧ ತೀವ್ರ ಪ್ರತಿಭಟನೆಯ ಎಚ್ಚರಿಕೆ
ಮೂಡುಬಿದಿರೆ: ಉಡುಪಿ ಜಿಲ್ಲೆಯಲ್ಲಿ ಸ್ಥಾಪಿತಗೊಂಡ ಯುಪಿಸಿಎಲ್ ಕಂಪನಿ ಇಂದ ಭೂಮಿಗೆ ಸೇರುತ್ತಿರುವ ವಿಷಯುಕ್ತ ನೀರು ನಮ್ಮ ಭೂಮಿಯ ಅಂತರ್ಜಲವನ್ನು ಕಲಿಷಿತಗೊಳಿಸುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಎಲ್ಲಾ ಯೋಜನಾ ಸಂತ್ರಸ್ತ ಗ್ರಾಮಸ್ಥರು ಜು.30ರಂದು ಎಡಪದವು ಗೋಪಾಲಕೃಷ್ಣ ದೇವಾಲಯದ ಬಳಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಯುಪಿಸಿಎಲ್ ಕಂಪನಿಯ ಹಾರು ಬೂದಿಯಿಂದ ಕೃಷಿ ಭೂಮಿ ಮತ್ತು ರೈತರ ಬೆಳೆಯ ಮೇಲೆ ನಿತ್ಯ ನಿರಂತರ ಸಮಸ್ಯೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಉಭಯ ಜಿಲ್ಲೆಗಳ ರೈತರು ತಮ್ಮ ಬೆಳೆ, ಭೂಮಿ, ದಾರಿ, ಊರಿನ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಉಳಿಸಿಕೊಳ್ಳಲು 440 ಕೆವಿ ವಿದ್ಯುತ್ ಮಾರ್ಗದ ಅಳವಡಿಕೆಯ ಸ್ಟರಿ ಲೈಟ್ ಕಂಪನಿಯ ವಿರುದ್ಧ ಹೋರಾಡುತ್ತಿದೆ.
ಈ ನಾಲ್ಕು ವರ್ಷಗಳಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರುಗಳು, ಶಾಸಕರು, ಸಂಸತ್ ಸದಸ್ಯರುಗಳಿಗೆ ಸಾಕಷ್ಟು ಬಾರಿ ಶಾಂತಿಯುತವಾಗಿ ಮನವಿಯನ್ನು ಕೊಟ್ಟು ಬದುಕನ್ನು ನಡೆಸಲು ಅನುವು ಮಾಡಿಕೊಡಬೇಕೆಂದು ಕೇಳಿರುತ್ತೇವೆ. ಇಷ್ಟಿದ್ದಾಗಿಯೂ ಯಾವುದೇ ಪ್ರಯೋಜನ ಇದು ತನಕ ಆಗದೇ ಇರುವ ಕಾರಣ ಶಾಂತಿ ಪ್ರಿಯರಾದಂತಹ ರೈತರು ಇದೀಗ ತಮ್ಮ ನ್ಯಾಯಯುತವಾದ ಹೋರಾಟಕ್ಕೆ ತೀವ್ರ ತರದ ಸ್ವರೂಪ ನೀಡಲು ಹೊರಟಿರುತ್ತಾರೆ.
ಇದರ ಹಿನ್ನಲ್ಲೆಯಲ್ಲಿ ಜುಲೈ 30ರಂದು ಮಂಗಳವಾರ ಬೆಳಿಗ್ಗೆ ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಬೈತರಿ ಬಳಿ ಸಭೆ ಸೇರಿ ರಸ್ತೆ ತಡೆ ಇತ್ಯಾದಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಎಲ್ಲಾ ಯೋಜನಾ ಸಂತ್ರಸ್ತ ಗ್ರಾಮಸ್ಥರು ನಿರ್ಧರಿಸಿರುತ್ತಾರೆ.
ಆ ಸಂದರ್ಭದಲ್ಲಿ ಸ್ವತಹ ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರುಗಳನ್ನು ಆಹ್ವಾನಿಸಿದ್ದು ಶಾಂತಿಯುತ ಕೊನೆಯ ಹೋರಾಟ ಹಾಗೂ ಸಭೆಯಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಅದೇ ರೀತಿ ಇನ್ನು ಮುಂದೆ ಸ್ಟೆರಿಲೈಟ್ ಕಂಪನಿಯ ಯಾವುದೇ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯಕ್ಕೆ ಮುಂದುವರಿದಲ್ಲಿ ಸಂಬಂಧಪಟ್ಟವರನ್ನು ರೈತರುಗಳೆ ಒಟ್ಟು ಸೇರಿ ಕಟ್ಟಿಹಾಕಿ ಮನಬಂದಂತೆ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೂ ತಿಳಿಸಲಾಗಿದೆ ಎಂದು ಮೂಡುಬಿದಿರೆಯ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಅವರು ತಿಳಿಸಿರುತ್ತಾರೆ.
ಒಂದು ವೇಳೆ ವಿದ್ಯುತ್ ಲೈನ್ ಅನ್ನು ಯಾವುದೇ ರೈತರ ಕೃಷಿ ಭೂಮಿ, ಬೆಳೆ, ತೋಟ ಇತ್ಯಾದಿಗಳಿಗೆ ತೊಂದರೆಯಾಗದಂತೆ ಎಳೆಯುವುದೇ ಆದಲ್ಲಿ ಪರ್ಯಾಯ ಮಾರ್ಗದಲ್ಲಿ ಹೋಗುವುದಕ್ಕೆ, ಯಾರಿಂದಲೂ ಅಭ್ಯಂತರವಿಲ್ಲ ಎಂದು ತಿಳಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತೃಭೂಮಿ ಹೋರಾಟ ಸಂರಕ್ಷಣಾ ಸಮಿತಿ ನಿಡೋಡಿಯ ಅಲ್ಲೋನ್ಸ್ ಡಿಸೋಜಾ, ದಯಾನಂದ ಶೆಟ್ಟಿ, ಗೋಪಾಲಕೃಷ್ಣ ದೇವಾಲಯದ ಜಿಕೆ ಭಟ್, ಕೃಷ್ಣಪ್ರಸಾದ ತಂತ್ರಿ ಬಡಗ ಎಡಪದವು, ಮಿಜಾರು ಗುತ್ತು ಶ್ರೀಧರ ಶೆಟ್ಟಿ, ಏಳಿಂಜೆ ಸುಕೇಶ ಚಂದ್ರ ಶೆಟ್ಟಿ ಅವರುಗಳು ಹಾಜರಿದ್ದರು.
ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ





































