
ಬಿಪಿನಚಂದ್ರ ಪಾಲ್ ನಕ್ರೆ
ಮಹಾ ಮಾನವತಾವಾದಿ ಬ್ರಹ್ಮ ಶ್ರೀ ನಾರಾಯಾಣ ಗುರುಗಳ 170ನೇ ಜನ್ಮದಿನಾಚರಣೆಯ ಈ ಪವಿತ್ರ ಸಂದರ್ಭದಲ್ಲಿ, ಅವರು ತಾರತಮ್ಯ ರಹಿತ “ವಸುಧೈವಕುಟುಂಬ” ಚಿಂತನೆಯ ತಾರತಮ್ಯರಹಿತ ಸಮಾಜದ ನಿರ್ಮಾಣಕ್ಕಾಗಿ ಮಾಡಿದ ಕೆಲಸ, ಸವೆಸಿದ ದಾರಿಯ ಬಗ್ಗೆ ಪುನರಾವಲೋಕನ ಮಾಡಬೇಕಾದುದು ಇಂದಿನ ಆಧ್ಯತೆಯಾಗಿದೆ.
ಜಾತಿ ಧರ್ಮದ, ಸಿರಿತನ ಬಡತನದ ಅಮಾನವೀಯ ಕೀಳರಿಮೆಯ ಮಹಾಂಧಕಾರದಲ್ಲಿ ಮುಳುಗಿದ್ದ ಕೇರಳದಲ್ಲಿ ಪರಿವರ್ತನೆಯ ಮಹಾ ಚೈತನ್ಯವಾಗುದಿಸಿದ ಬ್ರಹ್ಮ ಶ್ರೀ ನಾರಾಯಣ ಗುರುಗಳು ಬೋಧಿಸಿದ್ದು ಒಂದೇ ಜಾತಿ, ಒಂದೇ ಮತ , ಒಂದೇ ದೇವರೆಂಬ ಮಹಾ ಮಂತ್ರವನ್ನು. ಬಹುಶ ಆ ಮಂತ್ರ ಮುಂದಿನ ದಿನಗಳಲ್ಲಿ ಕೇರಳವನ್ನು ಒಂದು ಅಭಿವೃದ್ಧಿಶೀಲ ರಾಜ್ಯವನ್ನಾಗಿಸಿತು.
ನಾರಾಯಣ ಗುರುಗಳು ಪ್ರತಿಪಾದಿಸಿದ ಈ ಜಾತ್ಯತೀತ – ಮತಾತೀತ ಚಿಂತನೆ ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅಂಭೇಡ್ಕರ್ ರವರಿಗೆ ಸ್ಪೂರ್ತಿ ಆಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.

ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂದ ಗುರುಗಳು ವಿದ್ಯೆ ಮತ್ತು ಸಂಘಟನೆಯಿಂದ ವ್ಯಕ್ತಿ ಆತ್ಮ ವಿಶ್ವಾಸವನ್ನು ಗಳಿಸುತ್ತಾನೆ. ಇದು ಅವನ ಸ್ವತಂತ್ರ ಬದುಕಿಗೆ ಕಾರಣವಾಗುತ್ತದೆ ಎನ್ನುತ್ತಾರೆ.
ಆ ನೆಲೆಯಲ್ಲಿ ಗುರುಗಳ ಎಲ್ಲ ಉಪನ್ಯಾಸಗಳಲ್ಲಿ ಶಿಕ್ಷಣ, ಸಂಘಟನೆ, ಭಕ್ತಿ, ದುಡಿಮೆ, ಆತ್ಮವಿಶ್ವಾಸದ ಪ್ರಸ್ತಾವನೆ ಇದ್ದೇ ಇರುತ್ತಿತ್ತು. ಅಂದರೆ ಅವರ ದೃಷ್ಠಿಯಲ್ಲಿ ಬದುಕೆಂಬುದು ಹೋರಾಟ. ಹಾಗೆಂದು ಅದು ಸುಯ್ ಗುಟ್ಟಿ ಹರಿದು ಕೊಚ್ಚಿ ಕೊಂಡೊಯ್ವ ಬ್ರಹ್ಮಪುತ್ರವಾಗ ಬಾರದು. ಬದುಕು ಕಟ್ಟಿಕೊಡುವ ವಯ್ಯಾರವಾಹಿನಿ ಗಂಗೆಯಾಗ ಬೇಕು. ನಾವು ಮಾಡುವ ಕೆಲಸಗಳು ನಮಗೆ ಹಿತಕಾರಿ ಆಗುವಂತೆ ಪರರಿಗೂ ಹಿತಕಾರಿಯಾಗಿರಬೇಕು. ಆದುದರಿಂದಲೇ ಅವರು ಆತ್ಮ ವಿಶ್ವಾಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಎಲ್ಲ ಜೀವರಾಶಿಗಳಲ್ಲಿ ತನ್ನ ಜೀವವನ್ನು ಕಾಣುವುದು ಬದಿಕಿನ ಗುರಿಯಾಗಬೇಕು. ಇದು ಅವರ ಸಾದನೆಯ ಗುರಿಯಾಗಿತ್ತು.

ಕೆಳಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧವನ್ನು ಕಂಡ ಅವರು ಶೂದ್ರರಿಗಾಗಿಯೇ ಅರವೀಪುರಂ ನಲ್ಲಿ ಪ್ರತ್ಯೇಕ ದೇವಸ್ಥಾನ ನಿರ್ಮಿಸಿ ಅಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಇದು ನಮ್ಮವರ ಶೂದ್ರ ಶಿವನೆಂದರು.
ಅವರ ಆತ್ಮ ಶಕ್ತಿಗೆ ಇದು ಸಾಕ್ಷಿರೂಪವಾಗಿತ್ತು. ದೇವರ ಸೃಷ್ಠಿಯಲ್ಲಿ ತಾರತಮ್ಯ ಸಲ್ಲದು. ದೇವನು ತಾರತಮ್ಮ ರಹಿತ. ನಾನು ಪ್ರತಿಷ್ಠಾಪಿಸಿದ ಶಿವ ನಿಮಗೆ (ಮೇಲ್ವರ್ಗದವರಿಗೆ) ಶೂದ್ರನಾಗಿ ಕಂಡು ಬಂದಲ್ಲಿ ನನಗೆ ಸಂತೋಷ. ಯಾಕೆಂದರೆ ಕಡೆಗಾದರೂ ನನ್ನವರ ಶೂದ್ರತ್ವದಲ್ಲಿ ಶಿವತ್ವವನ್ನು ಕಾಣುವ ಭಾಗ್ಯ ನಿಮ್ಮದಾಯಿತಲ್ಲ ಎನ್ನುವ ಹೆಮ್ಮೆ ನನಗಿದೆ ಎಂದು ಮೇಲ್ವರ್ಗದ ಮಂದಿಯನ್ನು ಛೇಡಿಸುವ ಅವರ ಮಾರ್ಮಿಕ ಧ್ವನಿ ನಿಜವಾಗಿಯೂ ಮನುಕುಲವನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿತ್ತು.
ಇವರ ಅಧ್ವೈತ ಪ್ರತಿಪಾಧನೆ ಶಂಕರಾಚಾರ್ಯರ ಅಧ್ವೈತಕ್ಕಿಂತ ಭಿನ್ನವಾಗಿತ್ತು. ಶಂಕರಾಚಾರ್ಯರ ಅಧ್ವೈತ ಸಿದ್ಧಾಂತ ಧರ್ಮಮುಖಿ ಆಗಿದ್ದರೆ ನಾರಾಯಣ ಗುರುಗಳದ್ದು ಸಮಾಜ ಮುಖಿಯಾಗಿತ್ತು. ಮನು ಕುಲದಲ್ಲಿ ದ್ವೈತ (ಎರಡು)ವಿಲ್ಲ. ಎಲ್ಲ ಜಾತಿ ಧರ್ಮದವರ ರಕ್ತವೂ ಒಂದೇ. ದಲಿತನೊಬ್ಬನ ರಕ್ತ ಅಗತ್ಯ ಪುರೋಹಿತನ ಜೀವವನ್ನು ರಕ್ಷಿಸ ಬಲ್ಲುದು ಎಂಬುದು ವಾಸ್ತವ. ವೈಜ್ಞಾನೀಕ ಸತ್ಯವೂ ಹೌದು. ಎಲ್ಲ ನದಿಗಳೂ ಹರಿದು ಸಾಗರವನ್ನು ಸೇರುವಂತೆ ಎಲ್ಲರ ಬದುಕು ದೇವರ ಸಾನ್ನಿದ್ಯದೆಡೆಗೆ. ಸಾನ್ನಿಧ್ಯಕ್ಕೆ ಮೇಲುಕೀಳೆಂಬ ಬೇದಭಾವವಿಲ್ಲ. ಇದು ಅವರ ವಾದವಾಗಿತ್ತು.
ಇಲ್ಲಿಗೆ ಬೇಟಿ ನೀಡಿದ ವಿಶ್ವಕವಿ ರವೀಂದ್ರ ನಾಥ ಠಾಗೂರರು ನಾರಾಯಣ ಗುರುಗಳಂತಹ ಅಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷನನ್ನು ವಿಶ್ವದಲ್ಲಿ ಬೇರೆಲ್ಲೂ ಕಂಡಿಲ್ಲವೆಂದಿದ್ದರು. ಅದೇ ರೀತಿ ಅಚಾರ್ಯ ವಿನೋಬಾ ಭಾವೆ, ಮಹಾತ್ಮಾ ಗಾಂಧಿ, ರಾಮಸ್ವಾಮಿ, ರಾಜಗೋಪಾಲಚಾರಿಯಂತಹ ಮಹಾಪುರುಷರು ಗುರುಗಳನ್ನು ಭೇಟಿಯಾಗಿ ಅವರ ಸಾಧನಾಶಕ್ತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪರಿವ್ರಾಜಕನಾಗಿ ಅಲೆದು ಮರುತ್ತ ಮಲೆಯಲ್ಲಿ ತಪಸ್ಸನ್ನಾಚರಿಸಿ ಆತ್ಮಜ್ಞಾನವನ್ನು ಪಡೆದು ಅರವಿಪುರದಲ್ಲಿ ಸಾಧನೆಯ ಕೈಂಕರ್ಯತೊಟ್ಟು ಶಿವಗಿರಿಯಲ್ಲಿ ಸಮಾಜೋದ್ಧಾರದಲ್ಲಿ ತೊಡಗಿದ ಬ್ರಹ್ಮ ಶ್ರೀ ನಾರಾಯಣ ಗುರುಗಳು ಮಾನವತೆಯ ಪ್ರತಿರೂಪವಾಗಿ ಜಗತ್ತಿಗೆ ವಿಶ್ವ ಕುಟುಂಬ ಚಿಂತನೆಯನ್ನು ಸಾರಿದ ನಿಜವಾದ ವಿಶ್ವಗುರು. ಅವರು ಹಾಕಿಹೋದ ಮಹಾಪಥದಲ್ಲಿ ನಡೆಯುವ ಮಹಾಭಾಗ್ಯ ನಮ್ಮದಾಗಲಿ.

.

































