ನಾಯಕರಿಬ್ಬರ ಬಾಯಿ ಮುಚ್ಚಿಸಿ ಎರಡು ವರ್ಷ ಆಡಳಿತ ಮಾಡಿದ್ದೇ ಸಿದ್ಧರಾಮಯ್ಯ ಸಾಧನೆ!
ರಾಜ್ಯದಲ್ಲಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದುವು. ಜನತೆಗೆ ಕೊಡುವುದಾಗಿ ಭರವಸೆ ನೀಡಿದ್ದ ಐದು ಉಚಿತ ಭಾಗ್ಯ ಯೋಜನೆಗಳನ್ನು ತಪ್ಪದೇ ಅನುಷ್ಠಾನಕ್ಕೆ ತಂದಿದ್ದ ಸಿದ್ದರಾಮಯ್ಯ ಸರಕಾರದಿಂದ ಕ್ಷೇತ್ರಗಳಿಗೆ ಅನುದಾನ ಕೊಡುತ್ತ ಆಡಳಿತ ನಡೆಸುವಂತೆ ಒತ್ತಾಯಿಸುವುದಕ್ಕೆ ವಿರೋಧ ಪಕ್ಷದಲ್ಲಿರುವ ಬಿಜೆಪಿಗೆ ಈವರೆಗೂ ಸಾಧ್ಯವಾಗಲಿಲ್ಲ.
ಕಳೆದ ಎರಡು ವರ್ಷಗಳಿಂದ ನಯಪೈಸೆ ಅನುದಾನವನ್ನು ಯಾವುದೇ ಕ್ಷೇತ್ರಕ್ಕೂ ಕೊಡದೆ ಆಡಳಿತ ಮಾಡಿರುವುದೇ ಸಿದ್ಧರಾಮಯ್ಯನವರ ಬಹುದೊಡ್ಡ ಸಾಧನೆ ಎನ್ನುತ್ತಾರೆ ಶಾಸಕರುಗಳು. ವಿರೋಧ ಪಕ್ಷ ಅಲ್ಲ, ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೇ ಈ ಸತ್ಯ ಸಂಗತಿಯನ್ನು ಹೇಳುವುದಕ್ಕೆ ಧರ್ಮಸಂಕಟವಾಗಿದೆ. ಆದರೂ ಒಂದಿಬ್ಬರು ಕಾಂಗ್ರೆಸ್ ಶಾಸಕರು ಅನುದಾನವೇ ಇಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ. ಸಿದ್ಧರಾಮಯ್ಯನವರನ್ನು ಹೇಗಾದರೂ ಮಾಡಿ ಅಧೀರಗೊಳಿಸುವಲ್ಲಿ ತಂತ್ರಗಾರಿಕೆಯನ್ನು ಹೆಣೆಯಲು ವಿಧಾನಸಭಾ ವಿರೋಧ ಪಕ್ಷ ನಾಯಕ ಆರ್. ಅಶೋಕ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಇಬ್ಬರಿಂದಲೂ ಸಾಧ್ಯವಾಗಲಿಲ್ಲ. ಆದರೆ ಅವರಿಬ್ಬರನ್ನೂ ಸಮಾಧಾನಿಸಿಯೇ ಎರಡು ವರ್ಷ ಮುಗಿಸಿದ್ದಾರೆ ಎನ್ನುವುದು ವಿಶೇಷ!
ಮಾಹಿತಿ ಹಕ್ಕು ಕಾರ್ಯಕರ್ತ ಕೆ. ಜೆ. ಅಬ್ರಹಾಂ ಅವರು ಮೈಸೂರು ಮುಡಾದ ಸೈಟ್ ಪ್ರಕರಣವನ್ನು ಮುಂದಿಟ್ಟು ರಾಜ್ಯಪಾಲರಿಗೆ ದೂರು ಕೊಡುವುದಲ್ಲವಾಗಿದ್ದಿದ್ದರೆ ಸಿದ್ದರಾಮಯ್ಯನವರನ್ನು ಹೇಗೆ ಕಟ್ಟಿ ಹಾಕಲೂ ಆಗುತ್ತಿರಲಿಲ್ಲ. ರಾಜ್ಯಪಾಲರ ಅನುಮತಿಯಲ್ಲಿ ಕೇಂದ್ರ ಸರಕಾರದ ಪಾತ್ರ ಇರುವುದೇ ಆದರೂ ಅಬ್ರಹಾಂ ಅವರ ಕಾರ್ಯಕೆಲಸದ ನಂತರವಷ್ಟೇ ಸಿದ್ದು ವಿರೋಧಿಗಳು ಮುಂದೆ ಬಂದು ಸಮಯ ಸಂದರ್ಭ ಬಳಸಿಕೊಂಡರು ಎನ್ನುವುದು ಬೇರೆ ವಿಚಾರ. ಅನಂತ ಕುಮಾರ್, ಬಿ. ಎಲ್. ಸಂತೋಷ್ ಮತ್ತು ಬಿ. ಎಸ್. ಯೆಡಿಯೂರಪ್ಪ ಮೂವರದ್ದು ಬಿಜೆಪಿಯೊಳಗಿನ ಮೂರೆಲೆ ಆಟದ ಹಾಗೆಯೇ ಗುದ್ದಾಟವಿತ್ತು. ಅನಂತ ಕುಮಾರ್ ನಿಧನದ ನಂತರ ಆ ಸ್ಥಾನಕ್ಕೆ ಯಾರೂ ಬಂದಿಲ್ಲವಾದ್ದರಿಂದ ಬಿ ಎಲ್ ಸಂತೋಷ್ ಅವರೇ ದ್ವಿಪಾತ್ರ ವಹಿಸಿಕೊಂಡು ಯೆಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಪಕ್ಷೀಯರನ್ನು ಎತ್ತಿಕಟ್ಟಲು ಶುರುಮಾಡಿದರು. ಅದಕ್ಕೆ ಒಳ್ಳೆಯ ಉದಾಹರಣೆ ಬಸನ ಗೌಡ ಪಾಟೀಲ್ ಯತ್ನಾಳ್ ಅವರು. ಇದೀಗ ರಮೇಶ್ ಜಾರಕಿಹೊಳಿಯವರನ್ನೂ ಮುಂದಿಟ್ಟುಕೊಳ್ಳಲಾಗಿದೆ.
ವಿಜಯೇಂದ್ರ ಅವರನ್ನು ಡಿ. ಕೆ. ಶಿವಕುಮಾರ್ ಬುಕ್ ಮಾಡಿಟ್ಟುಕೊಂಡಿದ್ದಾರೆ ಎಂದು ಯತ್ನಾಳ್ ಆರೋಪಿಸುತ್ತಾರೆ. ಆರ್. ಅಶೋಕ್ ಅವರು ಸಿದ್ಧರಾಮಯ್ಯನವರದ್ದೇ ಜನ ಎಂದು ವಿರೋಧಪಕ್ಷ ನಾಯಕನಾಗಿ ಆಯ್ಕೆಯಾದಂದಿನಿಂದಲೇ ಆರೋಪಿಸಲಾಗುತ್ತಿದೆ.
ಆ ಆರೋಪಗಳು ಮೇಲ್ನೋಟಕ್ಕೆ ಯಾಕೆ ಸರಿ ಎಂದಾಗುವುದೆಂದರೆ ಆ ಇಬ್ಬರು ನಾಯಕರು ಕೂಡಾ ಬುಡ ಕತ್ತರಿಸಿಕೊಂಡ ಬಳ್ಳಿಯ ತರಹನೇ ವರ್ತಿಸುತ್ತಿರುವುದು. ಅಶೋಕ್ ಅವರಿಗಂತೂ ಗಟ್ಟಿಯಾದ ಧ್ವನಿಯಲ್ಲಿ ಮಾತಾಡುವುದಕ್ಕೂ ಆಗದು ಇನ್ನು, ಸಿದ್ದರಾಮಯ್ಯ ತಪ್ಪುಗಳನ್ನೆಲ್ಲ ಹುಡುಕಿ ಜೇಬಲ್ಲಿಟ್ಟುಕೊಂಡು ಮಾತಾಡುವುದಕ್ಕೂ ಆಗುತ್ತಿಲ್ಲ,ಮಾತಾಡುತ್ತಿಲ್ಲ. ಕ್ಷೇತ್ರಗಳಿಗೆ ಕೊಡಮಾಡಿದ ಅನುದಾನ ಮೊತ್ತಗಳ ಬಗ್ಗೆ ಸರಿಯಾದ ಚರ್ಚೆ ಮಾಡಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ಅಶೋಕ್ ನಿಂದ ಸಾಧ್ಯವಾಗಲಿಲ್ಲ. ತಾನೇನಾದರೂ ಮಾತಾಡಿದರೆ ಅತ್ತಿಂದ ಬಿ. ಎಲ್. ಸಂತೋಷ್ ಬಣದ ಯತ್ನಾಳ್ ಅವರು ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡಿಯೇ ಮಾಡಿ ಪಕ್ಷವನ್ನೂ ಮುಜುಗರಕ್ಕೆ ಸಿಲುಕಿಸುತ್ತಾರೆ ಎನ್ನುವ ಭಯದಿಂದ ಅಶೋಕ್ ಏನೂ ಮಾತಾಡಲಾಗದೆ ಹೌದಾ ಬಸವ, ಅಲ್ಲ ಬಸವ ರೀತಿಯಲ್ಲಿ ವಿರೋಧಪಕ್ಷ ನಾಯಕನ ಹುದ್ದೆ ನಿರ್ವಹಿಸುತ್ತಿದ್ದಾರೆ.
ಕೆಲವೊಂದು ಅಸಹ್ಯ ಪ್ರಕರಣದಿಂದಾಗಿ ಬಿ. ಎಸ್. ಯೆಡಿಯೂರಪ್ಪನವರ ಪ್ರಭಾವ ಧರೆಯಲ್ಲಿ ಮಲಗಿರುವುದರಿಂದ, ಬಿ. ಎಲ್. ಸಂತೋಷ್ ಅವರ ಕಡೆಯವರು ಜೊತೆಗೆ ಬರುತ್ತಿಲ್ಲವಾದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೂಡಾ ಪಕ್ಷವನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯಲಾಗದ ಅಶಕ್ತ ಸಾರಥಿಯಂತಾಗಿದ್ದಾರೆ. ಆ ಎಲ್ಲ ದೌರ್ಬಲ್ಯಗಳನ್ನು ಲೆಕ್ಕ ಹಾಕಿಕೊಂಡಿರುವ ಜೆಡಿಎಸ್ ಅಧ್ಯಕ್ಷ ಹೆಚ್ ಡಿ. ಕುಮಾರಸ್ವಾಮಿಯವರು ಮುಂದಿನ ಡಿಸೆಂಬರ ತಿಂಗಳ ನಂತರ ನಾನೇ ಮುಖ್ಯಮಂತ್ರಿ ಎನ್ನುವ ಘೋಷಣೆ ಶುರುಮಾಡಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್ ಎರಡು ಪ್ರಬಲ ಬಣವಿರುವಾಗ ಕುಮಾರಸ್ವಾಮಿ ಇನ್ನು ಮುಂದೆ ಬಿಜೆಪಿ ಮೈತ್ರಿಯಲ್ಲಿ ಮುಖ್ಯಮಂತ್ರಿಯಾಗುವುದು ಕನಸು ಅಷ್ಟೆ. ಅದನ್ನು ಹೈಕಮಾಂಡ್ ಕೂಡ ವಿರೋಧಿಸುತ್ತದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗುವುದಕ್ಕೆ ಕೆಲವು ಸಲ ಮುಂದೆ ಬಂದು ಹಿಂದೆ ನಿಲ್ಲಬೇಕಾದ ಪರಿಸ್ಥಿತಿ ಎದುರಿಸಿದ್ದರು ಬಿ. ಎಲ್. ಸಂತೋಷ್.
ಯಾರೇನೆ ಅಂದರೂ,ಗುಂಪುಗಾರಿಕೆ ನಡೆಯುತ್ತಿದ್ದರೂ ಆಡಳಿತ ಪಕ್ಷದ ಆರ್ಥಿಕ ಧೋರಣೆ ಮತ್ತು ಅನುದಾನಗಳ ಕೊರತೆಯನ್ನೆ ಮುಂದಿಟ್ಟು ಧರಣಿ ಮಾಡಿದ್ದರೂ ಸಾಕಾಗುತ್ತಿತ್ತು. ಹಾಗೆ ಮಾಡುವುದಕ್ಕೆ ಆಗಲಿಲ್ಲ ಎನ್ನುವುದಕ್ಕೆ ಮುಖ್ಯ ಕಾರಣ ಯೆಡ್ಯೂರಪ್ಪನವರಿಗೆ ಸಿದ್ದರಾಮಯ್ಯ ಮೇಲಿನ ಪ್ರೀತಿ, ಅಭಿಮಾನ,ಮೃದು ಧೋರಣೆ ಅಡ್ಡಿ ಬಂದಿರುತ್ತದೆ. ಬಿಜೆಪಿ ನಾಯಕರ ಈ ಎಲ್ಲ ಅಸ್ತವ್ಯಸ್ತಗಳನ್ನು ಕಾಂಗ್ರೆಸ್ ಸರಿಯಾಗಿಯೇ ನಗದೀಕರಿಸುತ್ತದೆ ಅನ್ನುವುದಕ್ಕೆ ಚೆನ್ನಪಟ್ಟಣದ ಸಿ. ಪಿ. ಯೋಗೀಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು. ಯೋಗೀಶ್ವರ್ ಕಾಂಗ್ರೆಸ್ಸಿಗೆ ನಂಬಿಕೆಯ ಗಿರಾಕಿ ಅಲ್ಲದಿದ್ದರೂ ಕುಮಾರಸ್ವಾಮಿಯ ದಂಡನ್ನು ಮುರಿಯುವದಕ್ಕಾಗಿಯೇ ಕಾಂಗ್ರೆಸ್ ಸಂದರ್ಭ ಬಳಸಿಕೊಂಡಿದೆ. ಈ ಕೆಲಸದಲ್ಲಿ ಬಿ. ಎಲ್. ಸಂತೋಷ್ ಪಾತ್ರವೂ ಇದೆ ಹೇಗೆಂದರೆ ಸಂತೋಷ್ ಶಿಷ್ಯ ಯೋಗೀಶ್ವರ್ ಟಿಕೇಟ್ ತಪ್ಪಿಸಿದ್ದೇ ಯೆಡಿಯೂರಪ್ಪ! ಅದಕ್ಕಾಗಿ ತನ್ನ ವಿರೋಧಿ ಕುಮಾರ ಸ್ವಾಮಿಯೊಂದಿಗೆ ಯೆಡಿಯೂರಪ್ಪ ಕೈಜೋಡಿಸಿದ್ದು! ಆ ಎಲ್ಲ ಬೆಳವಣಿಗೆ ಮತ್ತು ಕಿತ್ತಾಟಗಳನ್ನು ಗಮನಿಸುವಾಗ ಉಪಚುನಾವಣೆಯ ಮೂರೂ ಸ್ಥಾನವನ್ನು ಕಾಂಗ್ರೆಸ್ ಪಡೆಯಬಹುದೆನ್ನುವ ಮಾತಿಗೆ ಬಲ ಸಿಗುತ್ತದೆ.
–ವಿ. ಕೆ. ವಾಲ್ಪಾಡಿ





































