ನಾಯಕತ್ವ, ಗುಣ-ಧರ್ಮ, ಸ್ಥಾನದ ನಿರ್ವಹಣೆಯನ್ನು ಕಲಿಸುವುದರೊಂದಿಗೆ ವ್ಯಸನದ ಹಾನಿಯನ್ನು ಯಕ್ಷಗಾನ ತಿಳಿಸುತ್ತಿದೆ -ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ಅವರ 22ನೇ ವರ್ಷದ ಯಕ್ಷದೇವ ಪ್ರಶಸ್ತಿ ಪ್ರದಾನ

ಸಮಾರಂಭದಲ್ಲಿ ಆಶೀರ್ವಚನವನ್ನು ಮಾಡುತ್ತಾ ಮೂಡುಬಿದಿರೆ ಜೈನಮಠದ ಸ್ವಾಮೀಜಿಯವರು-ಗೀತೆ, ರಾಮಾಯಣದ ವಿಚಾರಗಳು ಗಂಡುಕಲೆ ಯಕ್ಷಗಾನದಿಂದ ಸಾಮಾನ್ಯ ಜನರಿಗೂ ತಿಳಿಯಲ್ಪಟ್ಟಿದೆ. ಅಂತಹ ಕಲೆಯನ್ನು ಬೆಳೆಸಿ ವಿದೇಶಕ್ಕೆ ಪಸರಿಸುತ್ತಿರುವ ಈ ಮಂಡಳಿ ಉತ್ತರೋತ್ತರ ಬೆಳಗಲಿ. ಯಕ್ಷಗಾನದಿಂದ ಮಕ್ಕಳಲ್ಲಿ ನಾಯಕತ್ವ ಗುಣ, ಧರ್ಮ-ಕರ್ಮಗಳ ಸ್ಥಾನದ ನಿರ್ವಹಣೆ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಹಾಗೂ ವ್ಯಸನದ ಹಾನಿಯನ್ನು ಕೂಡ ತಪ್ಪಿಸುತ್ತದೆ ಎಂದರು. ಶಾಂತಿ, ಅಧ್ಯಾತ್ಮವೇ ಜೀವನದ ಉದ್ದೇಶವಾಗಿದ್ದು ಅದನ್ನು ದೇಶವಿದೇಶಗಳಲ್ಲಿ ಪಸರಿಸುತ್ತಿರುವ ಮಂಡಳಿ ದೈವ ದೇವರ ಆರಾಧನೆಯನ್ನು, ಆಧ್ಯಾತ್ಮಿಕ ಪ್ರಚಾರವನ್ನು ಮಾಡುತ್ತಿರುವುದು ಸಂತಸಕರ ಎಂದು ವೇ.ಮೂ. ವಿದ್ವಾನ್ ಪ್ರಸನ್ನ ತಂತ್ರಿ ಅವರು ಹೇಳಿದರು. ಪದ್ಯ ಗದ್ಯದಿಂದ ಶ್ರೀಮಂತವಾಗಿರುವ ಯಕ್ಷಗಾನ ಸಾಮಾನ್ಯ ಜನರಲ್ಲಿ ಸಾರ್ಥಕ್ಯವನ್ನು ಕಂಡಿದೆ ಎಂದು ಭಾ.ಜ.ಪ.ಮಾಜಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಯಕ್ಷದೇವ ಪ್ರಶಸ್ತಿಯನ್ನು ಹಿರಿಯ ಹಿಮ್ಮೇಳ ವಾದಕರಾದ ಪೆರುವಾಯಿ ನಾರಾಯಣ ಭಟ್ ಅವರಿಗೂ, ಹಿರಿಯ ವೇಷಧಾರಿ ರಾಮ ಕುಲಾಲ್ ದಾಸನಡ್ಕ ಅವರಿಗೂ ನೀಡಿ ಸನ್ಮಾನಿಸಲಾಯಿತು. ದಿ.ಶ್ರೀಮತಿ ವನಜಾಕ್ಷಿ ಅಮ್ಮ ಸಂಸ್ಮರಣ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕಿ, ಕಲಾವಿದೆ ಸುರತ್ಕಲ್ನ ಕೆ. ಕಲಾವತಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಕೆ. ಶ್ರೀಪತಿ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್ ನಿವೃತ್ತ ಜಿ.ಎಂ. ಚಂದ್ರಶೇಖರ್ ರಾವ್ ಬೊಕ್ಕಸ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ, ಉದ್ಯಮಿ ನಂದಿಕೂರು ಜನಾರ್ಧನ್ ಎಸ್ ರಾವ್, ಪಡುಬಿದ್ರೆ ದಿವಾಕರ್ ರಾವ್ ಹಾಜರಿದ್ದರು.
ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಸ್ವಾಗತಿಸಿದರು.ಡಾ. ಶ್ರುತಕೀರ್ತಿರಾಜ್, ದೀಪ್ತಿ ಬಾಲಕೃಷ್ಣ, ಸುಬ್ರಹ್ಮಣ್ಯ ಬೈಪಾಡಿತ್ತಾಯರವರು ಸನ್ಮಾನಿತರ ಪರಿಚಯಗೈದರು. ಜನಾರ್ದನ ಅಮುಂಜೆ ಕಾರ್ಯಕ್ರಮ ನಿರೂಪಿಸಿದರು. ರವಿ ಪ್ರಸಾದ್ ಕೆ ಶೆಟ್ಟಿ ವಂದಿಸಿದರು.
ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ






































