ನವರಾತ್ರಿ ಆಚರಣೆಯ ಮಹತ್ವ
ಆಶ್ವಯುಜ ಶುಕ್ಲಪಕ್ಷ ಶರದೃತು ಪಾಡ್ಯದಿಂದ ನವಮಿಯವರೆಗೆ 9 ದಿನಗಳ ಕಾಲ ದೇವಿಗೆ ವಿಶೇಷ ರೀತಿಯಲ್ಲಿ ಪೂಜೆಯನ್ನು ಸಲ್ಲಿಸುವ ,ಅನಾದಿಕಾಲದಿಂದ ನಡೆದುಕೊಂಡುಬಂದಿರುವ ಸಂಪ್ರದಾಯವೇ ನವರಾತ್ರಿ ಆಚರಣೆ .
ಪ್ರಥಮಂ ಶೈಲಪುತ್ರೀತಿ ದ್ವಿತೀಯಮ್ ಬ್ರಹ್ಮಚಾರಿಣೀ !
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಂ!
ಪಂಚಮಮ್ ಸ್ಕಂದಮಾತೇತಿ ಶಷ್ಟಂ ಕಾತ್ಯಾಯಿನೀತಿ ಚ!
ಸಪ್ತಮಮ್ ಕಾಲರಾತ್ರೀ ಚ ಮಹಾಗೌರೀತಿ ಚಾಷ್ಟಮಂ !
ನವಮಾಮ್ ದೇವದೂತೀ ಚ ನವಾದುರ್ಗಾ: ಪ್ರಕೀರ್ತಿತಾ : !

ಒಂಬತ್ತು ದಿನಗಳಲ್ಲಿ ಒಂಬತ್ತು ರೀತಿಯ ದೇವಿಯರಿಗೆ ಒಂಬತ್ತು ರೀತಿಯಲ್ಲಿ ಒಂಬತ್ತು ಧ್ಯಾನ ,ಮಂತ್ರಗಳಲ್ಲಿ ಒಂಬತ್ತು ರೀತಿಯ ಭಕ್ಷ್ಯಗಳನ್ನು ಅರ್ಪಿಸಿ ಒಂಬತ್ತು ರೀತಿಯ ಅಲಂಕಾರ ಮಾಡುತ್ತಾ ಪೂಜಿಸುವ ಕ್ರಮ ಇಲ್ಲಿದೆ .ಪರಂಪರೆಯಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ರೀತಿಯನ್ನು ಮುಂದುವರಿಸುವುದು ಅತಿ ಶ್ರೇಷ್ಟವಾಗಿದೆ .ಕಲೌ ದುರ್ಗಾ ವಿನಾಯಕೌ ಅಂದರೆ ಕಲಿಯುಗದಲ್ಲಿ ನಮ್ಮ ಅಭೀಷ್ಟಗಳನ್ನು ಶೀಘ್ರವಾಗಿ ಕರುಣಿಸುವ ದೇವರು ದುರ್ಗೆ ಮತ್ತು ಗಣಪತಿಯಾಗಿದ್ದಾರೆ .ಸಪ್ತಶತೀ ಅಂದರೆ ಏಳು ನೂರು ಶ್ಲೋಕಗಳನ್ನು ಪ್ರತಿನಿತ್ಯ ಮೊದಲಿಗೆ ಪಾರಾಯಣ ಮಾಡಿ ನಂತರ ಪೂಜೆಯನ್ನು ಮಾಡುವುದು ವಾಡಿಕೆಯಾಗಿದೆ .ಈ ಶ್ಲೋಕಗಳಲ್ಲಿ ದೇವಿಯ ಪುರಾಣವಿದೆ .ಪ್ರತಿಯೊಂದು ಶ್ಲೋಕಕ್ಕೂ ತನ್ನದೇ ಆದ ಮಹಿಮೆಯನ್ನು ಹೊಂದಿದೆ ,ತನ್ನ ಹಿರಿಯರ ,ಅಥವಾ ಗುರುಗಳ ಮೂಲಕ ಉಪದೇಶವನ್ನು ತೆಗೆದುಕೊಂಡು ಮಾಡಬೇಕು .ಚಂಡಿಕಾ ಹೋಮ ನವರಾತ್ರಿ ಸಮಯದಲ್ಲಿ ಮಾಡುವುದು ಅತೀ ವಿಶೇಷವಾಗಿದೆ .”ಹುತಮ್ ಚ ದತ್ತಮ್ ಚ ತತೈವ ತಿಷ್ಟತಿ “ ಹೋಮದಲ್ಲಿ ದೇವಿಯ ಏಳು ನೂರು ಶ್ಲೋಕಗಳನ್ನು ಹೇಳುತ್ತಾ ಆಹುತಿಗಳನ್ನು ,ತರ್ಪಣವನ್ನು ,ನಮಸ್ಕಾರವನ್ನುಜೊತೆಗೆ ದೇವಿಗೆ ಸೀರೆ ಮಾಂಗಲ್ಯ ಕುಂಕುಮ ಅರಶಿನ ತೆಂಗಿನಕಾಯಿ ಬಾಳೆಹಣ್ಣು ಸೀಯಾಳ ,ಸುಗಂಧ ದ್ರವ್ಯಗಳನ್ನು ಅರ್ಪಿಸಿ ಪೂರ್ಣಾಹುತಿಯನ್ನು ಅರ್ಪಿಸಿ ಮಹಾಕಾಳಿ ,ಮಹಾಲಕ್ಷ್ಮೀ ,ಮಹಾ ಸರಸ್ವತಿ ದೇವಿಯರ ರೂಪದಲ್ಲಿ ಇರುವ ಮುತ್ತೈದೆಯರಿಗೆ ವಾಯನ ದಾನ ಹಾಗೆಯೇ ಕನ್ನಿಕೆಯರಿಗೆ ವಾಯನ ದಾನವನ್ನು ಅರ್ಪಿಸಲಾಗುತ್ತದೆ .
ನಮ್ಮಲ್ಲಿರುವ ಮಹಿಷಾಸುರ ,ಚಂಡಾ ಮುಂಡಾಸುರ ,ಇರ್ತ್ಯಾದಿ ರಾಕ್ಷಸೀಯ ಗುಣಗಳನ್ನು ನಾಶ ಮಾಡಿಕೊಳ್ಳುವುದೇ ಈ ಆಚರಣೆಯ ಉದ್ದೇಶವಾಗಿದೆ .ಈ ಜಗತ್ತಿನಲ್ಲಿರುವ ಪ್ರತಿಯೊಂದು ಹೆಣ್ಣೂ ದೇವಿಯ ಅವತಾರವಾಗಿದೆ .
ಮದುವೆಯಾಗದ ಹೆಣ್ಣು /ಗಂಡುವಿಗೆ ಶೀಘ್ರ ಕಂಕಣ ಭಾಗ್ಯವನ್ನು ದೇವಿ ತನ್ನ ಆರಾಧನೆಯಿಂದ ಒಲಿಯುವಂತೆ ಮಾಡುತ್ತಾಳೆ .ನಮ್ಮ ಜೀವನದಲ್ಲಿ ಬರುವ ಯಾವುದೇ ರೀತಿಯ ಭಯದ ನಿವಾರಣೆಯನ್ನು ದೇವಿ ಮಾಡುತ್ತಾಳೆ .ನಾವು ಪ್ರತಿನಿತ್ಯವೂ ಮನೆಯಲ್ಲಿ ಸಂಧ್ಯಾ ಕಾಲದಲ್ಲಿ ದೇವಿಗೆ ದೀಪವನ್ನು ಬೆಳಗಿಸಿ ಕನಕದಾರ ಸ್ತೋತ್ರ ,ಲಲಿತಾ ಸಹಸ್ರನಾಮ ಸ್ತೋತ್ರವನ್ನು ಅಥವಾ ಯಾವುದೇ ದೇವಿಯ ಸ್ತೋತ್ರವನ್ನು ಹೇಳುವುದು ಮನೆಯ ಬೆಳಗುವಿಕೆಗೆ ಕಾರಣವಾಗುತ್ತದೆ .ಈ ಒಂಬತ್ತು ದಿನಗಳಲ್ಲಿ ಸ್ತ್ರೀಯರಿಗೆ /ಕನ್ನಿಕೆಯರಿಗೆ ಬಾಗಿನವನ್ನು ಅರ್ಪಿಸುವುದು ಶ್ರೇಷ್ಟವಾಗಿದೆ.






































