ನವರಾತ್ರಿಗಳಲ್ಲಿ ಒಂಬತ್ತು ದಿನಗಳಲ್ಲಿ ದುರ್ಗಾ ಪೂಜೆ ಮಾಡುವ ವಿಧಾನ
* ಕೆ.ಸುಬ್ರಹ್ಮಣ್ಯ ಆಚಾರ್ಯ
ಭಗವಂತನ ಶಕ್ತಿ ರೂಪದ ಆರಾಧನೆಯ ಪರ್ವ ಕಾಲವೇ ನವರಾತ್ರಿ. ಒಂಬತ್ತು ದಿನಗಳ ಕಾಲ ನಮ್ಮ ದೇಹ, ಮನಸ್ಸು ಮತ್ತು ಆತ್ಮಗಳಿಗೆ ವಿಶ್ರಾಂತಿ ಕೊಟ್ಟು ಹೊಸ ಉತ್ಸಾಹ, ಚೈತನ್ಯದೊಂದಿಗೆ ಹೊರ ಬರುವುದೇ ಆಚರಣೆಯ ಉದ್ದೇಶವಾಗಿದೆ. ಆದಿ ಭೌತಿಕ, ಆದಿ ದೈವಿಕ, ಆಧ್ಯಾತ್ಮಿಕ, ಈ ತಾಪ “ತ್ರಯ”ಗಳಿಂದ ಯಾವಾಗ ವಿಶ್ರಾಂತಿ ಸಿಗುತ್ತದೆಯೋ ಅದಕ್ಕೆ ರಾತ್ರಿ ಎನ್ನುತ್ತಾರೆ. ನಮ್ಮಲ್ಲಿರುವ ಪೈಶಾಚಿಕ ಪ್ರವೃತ್ತಿಗಳಾದ ರಾಗದ್ವೇಷಗಳ ಮೇಲೆ ವಿಜಯ ಸಾಧಿಸುವುದು, ರಕ್ತ ಬೀ ಜಾಸುರ, ಧೂಮ್ರ ಲೋಚನ, ಮತ್ತು ಮಹಿಷಾಸುರ ಮುಂತಾದ ರಾಕ್ಷಸೀ ಪ್ರವೃತ್ತಿಯ ಮೇಲೆ ವಿಜಯ ಪಡೆಯುವುದೇ ನವರಾತ್ರಿಯ ಮಹತ್ವವಾಗಿದೆ. ಮಹಿಷಾಸುರನೆಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿದ ಮಹಾ ದೇವೀ ಹತ್ತನೇ ದಿನ ಆತನನ್ನು ಸಂಹರಿಸಿದಳು. ಆ ದಿನವೇ ನವರಾತ್ರಿಯ ಬಳಿಕದ ವಿಜಯ ದಶಮಿ..
”ಪ್ರಥಮಂ ಶೈಲಪುತ್ರೀತಿ “ “ದ್ವಿತೀಯಂ ಬ್ರಹ್ಮಚಾರಿಣೀ ” “ತೃತೀಯಂ ಚಂದ್ರಘಂಟೇತಿ” “ಕೂಷ್ಮಾಂಡೇತಿ ಚತುರ್ಥಕಂ ” ” ಪಂಚಮಮ್ ಸ್ಕಂದಮಾತೇತಿ” “ಷಷ್ಟಂ ಕಾತ್ಯಾಯನೀತಿ ಚ “” ಸಪ್ತಮಂ ಕಾಲ ರಾತ್ರೀ ಚ “
”ಮಹಾ ಗೌರೀತಿ ಚಾಷ್ಟಮಂ” “ನವಮಂ ದೇವದೂತೀ” ಚ ನವ ದುರ್ಗಾ: ಪ್ರಕೀರ್ತಿತಾ: ಇದು ಸಪ್ತ ಶತೀ ಪುಸ್ತಕದಲ್ಲಿ ಬರುವ ದೇವೀ ಕವಚ ಸ್ತೋತ್ರದಲ್ಲಿ ಬರುವ ಶ್ಲೋಕವಾಗಿದೆ. “ನಿರ್ಣಯ ಸಿಂಧು ” ಗ್ರಂಥದಲ್ಲಿ ತಿಳಿಸಿರುವಂತೆ ಅಮಾವಾಸ್ಯೆಯ ಸಂಬಂಧ ವಿಲ್ಲದ ಶುಕ್ಲ ಪಕ್ಷದ ಪಾಡ್ಯದಂದು ನವರಾತ್ರಿ ಪೂಜೆ ಆರಂಭಗೊಳ್ಳಬೇಕು ಆರಂಭದಲ್ಲಿ ಗುರುಪೂಜೆ ಗಣಪತಿ ಪ್ರಾರ್ಥನೆ, ಕಲಶ ಪ್ರತಿಷ್ಠೆ, ದ್ವಾರ ಪಾಲ ಪೂಜೆ ಪೀಠ ಪೂಜೆ, ನವ ಶಕ್ತಿ ಪೂಜೆ, ದೇವ ಪ್ರತಿಷ್ಠೆ, ಕಲೋಕ್ತ ಶೋಢಶೋಪಚಾರ ಪೂಜೆ, ಧೂಪ, ದೀಪ, ನೈವೇಧ್ಯಂ ತಾಂಬೂಲಮ್ ನೀರಾಜನಂ ಮಂತ್ರ ಪುಷ್ಪಮ್, ಪ್ರದಕ್ಷಿಣಮ್,ನಮಸ್ಕಾರ: ಪ್ರಾರ್ಥನಾ, ಪ್ರಸನಾರ್ಥ್ಯಂ ಕೃಷ್ಣಾರ್ಪಣಮ್…. ಈ ಹಂತಗಳಲ್ಲಿ ಮೊದಲನೆಯ ದಿನ ಶೈಲಪುತ್ರಿ ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರ ಘಂಟಾ ದೇವೀ, ನಾಲ್ಕನೆಯ ದಿನ ಕೂಷ್ಮಾಂಡಾ ದೇವೀ, ಐದನೆಯ ದಿನ ಸ್ಕಂದ ಮಾತಾ ಆರನೆಯ ದಿನ ಕಾತ್ಯಾಯನೀ,ಏಳನೆಯ ದಿನ, ಕಾಲರಾತ್ರಿ ಎಂಟನೆಯ ದಿನ ಮಹಾ ಗೌರಿ ಒಂಬತ್ತನೆಯ ದಿನ ದೇವ ದೂತೀ ದೇವಿಯರ ಪೂಜೆ ನಡೆಯುತ್ತದೆ. ಪ್ರತಿಯೊಂದು ದಿನವೂ ದೇವಿಯರ ಮೂಲ ಮಂತ್ರ, ಧ್ಯಾನ, ಇತ್ಯಾದಿ ಎಲ್ಲಾ ಮಂತ್ರಗಳೂ ಪ್ರತ್ಯೇಕವಾಗಿರುತ್ತದೆ. ದೇವರ ನೈವೇದ್ಯ ಭಕ್ಷ್ಯ ಬೇರೆಯದೇ ಆಗಿರುತ್ತದೆ. ದೇವಿಗೆ ಉಡಿಸುವ ಸೀರೆಯ ಬಣ್ಣ ಅಲಂಕಾರ ಬೇರೆಯದೇ ಆಗಿರುತ್ತದೆ
ಭಗವಂತನ ಶಕ್ತಿ ರೂಪದ ಆರಾಧನೆಯ ಮೂರು ಶಕ್ತಿಗಳಾದ ಮಧುಕೈಟಭನನ್ನು ಕೊಂದವಳು ಮಹಾ ಕಾಳೀ, ಮಹಿಷಾಸುರನನ್ನು ಕೊಂದವಳು ಮಹಿಷಾಸುರ ಮರ್ಧಿನಿ ಮಹಾ ಲಕ್ಷ್ಮೀ, ಶುಂಭನಿಶುಂಭರನ್ನು ಕೊಂದಿರುವ ಸರಸ್ವತಿ ಶಕ್ತಿ ಯನ್ನು ವಿಶೇಷವಾಗಿ ಆಚರಿಸುತ್ತಾ ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ, ತಮೋಗುಣಗಳನ್ನು ಮಹಾಕಾಳೀ, ರಜೋಗುಣಗಳನ್ನು ಮಹಾ ಲಕ್ಷ್ಮೀ ಹಾಗೆಯೇ ಸತ್ವ ಗುಣಗಳನ್ನು ಮಹಾ ಸರಸ್ವತಿ ಪ್ರತಿನಿಧಿಸುತ್ತಾಳೆ.ಈ ನವರಾತ್ರಿಯ ಆಚರಣೆಯ ಮೂಲಕ ನಮ್ಮಲ್ಲಿರುವ ಎಲ್ಲಾ ರೀತಿಯ ಕೆಟ್ಟ
ಗುಣಗಳನ್ನು ಹೋಗಲಾಡಿಸಬೇಕು.
ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ ।ಭಯೇಭ್ಯಾಸ್ರಾಹಿನೋ ದೇವೀ ದುರ್ಗೇ ದೇವೀ ನಮೋಸ್ತುತೇ ||








