

ನವಮೈತ್ರಿ ಸಹಕಾರಿ ಸಂಘದ ಸ್ವಂತ ಕಟ್ಟಡ ‘ಮೈತ್ರಿ ಸೌಧ’ ಉದ್ಘಾಟನೆ
ಶಿರ್ತಾಡಿ: ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕೇಂದ್ರ ಕಚೇರಿ ಹಾಗೂ ವಾಣಿಜ್ಯ–ವಸತಿ ಸಂಕೀರ್ಣ ‘ಮೈತ್ರಿ ಸೌಧ’ದ ಉದ್ಘಾಟನಾ ಸಮಾರಂಭವು ಫೆಬ್ರವರಿ 8ರಂದು ಶಿರ್ತಾಡಿಯಲ್ಲಿ ಜರುಗಿತು.
ಶಿರ್ತಾಡಿ ಭುವನ ಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜಾ ಅವರು ಮೈತ್ರಿ ಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ತತ್ವದಡಿ ಸುಸಜ್ಜಿತ ಸಂಕೀರ್ಣ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಜನತೆ ಸಹಕಾರಿಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕು ಎಂದರು.
ನವಮೈತ್ರಿ ಸಹಕಾರಿಯ ಕೇಂದ್ರ ಕಚೇರಿ ಹಾಗೂ ಶಿರ್ತಾಡಿ ಶಾಖಾ ಕಚೇರಿಯನ್ನು ವಕೀಲರಾದ ಮಯೂರ ಕೀರ್ತಿ ಅವರು ಉದ್ಘಾಟಿಸಿ, ಸಹಕಾರಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಅಗತ್ಯದ ಸಂದರ್ಭದಲ್ಲಿ ಸಾಲ ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನವಮೈತ್ರಿ ಸಹಕಾರಿಯ ಪ್ರಾರಂಭದಿಂದಲೂ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ಮಾತೃಭೂಮಿ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು ಅವರನ್ನು ಶಾಲು, ಫಲಪೇಟ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ, ಶಿರ್ತಾಡಿ ಕಜೆ ಶ್ರೀಮತಿ ಹೆಲೆನ್ ಮರಿಯ ಲೋಬೋ ಹಾಗೂ ನಾರಾವಿ ಶ್ರೀಮತಿ ಆಶಾ ಸುರೇಶ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಕೆ. ಮಹಾವೀರ ಜೈನ್, ಎಸ್. ಪ್ರವೀಣ್ ಕುಮಾರ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸ, ಫ್ರಾಂಕಿ ಎಲ್. ಪಿಂಟೊ, ರಕ್ಷಿತ್ ಆರ್., ಅರುಣ್ ಶೆಟ್ಟಿ, ಸದಾನಂದ ಪೂಜಾರಿ, ಶ್ರೀಮತಿ ಬಬಿತ ಆರ್. ಶೆಟ್ಟಿ, ಶ್ರೀಮತಿ ಶಾರದಾ ಸುವರ್ಣ ಹಾಗೂ ರವೀಂದ್ರ ಬಿ. ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಶ್ಮಿತಾ ಹಾಗೂ ಬಳಗದವರು ಪ್ರಾರ್ಥನೆ ಸಲ್ಲಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ. ಸ್ವಾಗತಿಸಿದರು. ಸ್ವಸಹಾಯ ಸಂಘಗಳ ಮೇಲ್ವಿಚಾರಕರಾದ ಹೊನ್ನಪ್ಪ ಸಾಲ್ಯಾನ್ ಧನ್ಯವಾದ ಸಲ್ಲಿಸಿದರು. ಪತ್ರಕರ್ತ ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಸತೀಶ್ ಕೆ., ಪ್ರಜ್ವಲ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಅಮ್ಮು ಆಮುಂಡರಾ’ ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು.







































