ಕಾರ್ಕಳ : ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ನಾವು ಪಾಲಿಸಿದಾಗ ನೆಮ್ಮದಿಯ ಜೀವನ ಪ್ರಾಪ್ತಿಯಾಗುತ್ತದೆ. ಹಾಗಾಗಿ ನಮ್ಮ ಜೀವನದಲ್ಲಿ ಯಾರನ್ನು, ಯಾವುದನ್ನು ಪ್ರೀತಿಸಬೇಕೋ, ಗೌರವಿಸಬೇಕೋ ಅದೇ ಸಂಸ್ಕೃತಿ ಎಂದು
ರೋಟರಿ ಕ್ಲಬ್ ಕಾರ್ಕಳದ
ಸಹಾಯಕ ಗವರ್ನರ್ , ಶೈಲೇಂದ್ರ ರಾವ್ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ನಡೆದ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಚಿಣ್ಣರ ಬದುಕಿನ ಬಣ್ಣದ ಲೋಕ ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಆಯೋಜಿಸಲಾದ “ಕಲಾ ಸಿಂಚನ – 2024” ಬೇಸಿಗೆ ಶಿಬಿರದಲ್ಲಿ “ಸಂಸ್ಕೃತಿ ಸಂಗಮ” ಎಂಬ ವಿಷಯದ ಬಗ್ಗೆ ಮಾತನಾಡಿದರು.
ನಾವು ವಿದ್ಯಾರ್ಥಿ ದೆಸೆಯಿಂದಲೇ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಮೊದಲ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅದರಿಂದ ಹಿಂದೆ ಸರಿಯದೆ ಧೈರ್ಯದಿಂದ ಎದುರಿಸಬೇಕು. ಆಚಾರ ವಿಚಾರಗಳನ್ನು ಗೌರವಿಸಬೇಕು. ನಮ್ಮ ಭಾಷೆ, ದೇಶವನ್ನು ಗೌರವಿಸಬೇಕು. ದೇಶಕ್ಕೆ ಒಳ್ಳೆಯ ಹೆಸರನ್ನು ತರುವ ಸಾಧನೆಯನ್ನು ಮಾಡಬೇಕು. ಅದಕ್ಕೆ ನಾವು ಕಲಿತ, ಮೈಗೂಡಿಸಿಕೊಂಡ ಸಂಸ್ಕೃತಿಯೇ ಮೂಲವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿ ಪರಿಚಯಿಸಿ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸಹ ಶಿಕ್ಷಕಿಯರಾದ ಮಧುಶ್ರೀ, ಅಶ್ವಿನಿ, ಪೂಜಾ ಉಪಸ್ಥಿತರಿದ್ದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ವಂದಿಸಿದರು.






































