








ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ : ಚಿಕ್ಕಮಗಳೂರು ಬದಲಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾಗತಿ

ಬೆಂಗಳೂರು : ಆರು ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ದಿಡೀರ್ ಬದಲಾವಣೆ ಆಗಿದ್ದು, ಇಡೀ ಕಾರ್ಯಕ್ರಮ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ. ಜಿಲ್ಲಾಡಳಿತ ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಆರು ಮಂದಿ ನಕ್ಸಲ್ ಹೋರಾಟಗಾರರು ಶರಣಾಗತರಾಗಲಿದ್ದಾರೆ.



ಈ ಮುಂಚೆ ನಿಗದಿಯಾದಂತೆ ಚಿಕ್ಕಮಗಳೂರಿನ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಬೇಕಿತ್ತು. ಬದಲಾದ ಕಾರ್ಯಕ್ರಮದಲ್ಲಿ ಸಿಎಂ ಸಮ್ಮುಖದಲ್ಲಿ ಇಂದು ಮಧ್ಯಾಹ್ನವೇ ಶರಣಾಗರಾಗಲಿದ್ದಾರೆ.
ಆರು ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಣಾಗತಿ ಆಗಬೇಕಿದ್ದ ಆರು ನಕ್ಸಲರನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿಗೆ ಕರೆತಂದು ಶರಣಾಗತಿ ಮಾಡಿಸಲಿದ್ದಾರೆ. ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ ಕುಟುಂಬದ ಸದಸ್ಯರ ಹಾಗೂ ಮಾಧ್ಯಮದವರು ಕಾಯುತ್ತಿದ್ದರು.
“ನನ್ನ ಸಮ್ಮುಖದಲ್ಲೇ ಶರಣಾಗತಿ ಆಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ತಾನೇ ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ, ಆರು ಜನ ನಕ್ಸಲ್ ಕಾರ್ಯಕರ್ತರನ್ನು ಪೊಲೀಸರ ಜೊತೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದೇವೆ” ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್.ಅಶೋಕ್ ಹೇಳಿದರು.
ಇವರ ಜೊತೆಗೆ ನಕ್ಸಲ್ ಕಾರ್ಯಕರ್ತರ ಕುಟುಂಬದ ಸದಸ್ಯರನ್ನು ಪೊಲೀಸರ ಜೊತೆಯಲ್ಲಿಯೇ ಕರೆದುಕೊಂಡು ಹೋಗಲಾಗುತ್ತಿದೆ. ಇಂದು ಸಂಜೆ 6 ಗಂಟೆಗೆ ಮುಂಡಗಾರು ಲತಾ ಸೇರಿದಂತೆ ಉಳಿದ 5 ನಕ್ಸಲರು ಬಂದೂಕುಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲಿದ್ದಾರೆ.





































