




ನಂದಿಕೂರುನಿಂದ -ಕಾಸರಗೋಡಿಗೆ ವಿದ್ಯುತ್ ಸರಬರಾಜು ಸುನೀಲ್ ಕುಮಾರ್ ಕೊಡುಗೆ:ಉದಯ ಶೆಟ್ಟಿ ಮುನಿಯಾಲು
ತೀವ್ರ ಪ್ರತಿಭಟನೆಯಿಂದ ಕಾಮಗಾರಿ ಸ್ಥಗಿತ : ಇನ್ನಾ ಗ್ರಾಮದ ಜನರ ಬದುಕಿಗೆ ಕೊಳ್ಳಿ ಇಡುವ ಯೋಜನೆ

ಪಡುಬಿದ್ರಿ: ಉಡುಪಿ ಜಿಲ್ಲೆಯ ನಂದಿಕೂರು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಕಾರ್ಯಗತಗೊಂಡಿದೆ. ಅದಕ್ಕಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದ್ದು, ತೀವ್ರ ಅಕ್ಷೇಪದ ನಡುವೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇಂದು ಕಾಮಾರಿಯನ್ನು ಮತ್ತೆ ಆರಂಭಿಸಲು ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆ ವಿಷಯ ತಿಳಿದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲ್ಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು.
ಕೇಂದ್ರ ಬಿಜೆಪಿ ಸರ್ಕಾರದ ಯೋಜನೆ ಇದಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಸುನೀಲ್ ಕುಮಾರ್ ಅನುಮತಿಯಿಂದ ಯೋಜನೆಯು ಅನುಮೋದನೆಗೊಂಡಿದೆ. ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಇನ್ನಾ ಗ್ರಾಮದ ಫಲವತ್ತಾದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹಾದು ಹೋಗುವುದರಿಂದ ಇನ್ನಾ ಗ್ರಾಮದ ನೂರಾರು ಕೃಷಿಕರು ಸಂತ್ರಸ್ತರಾಗುವ ಅಪಾಯವಿದೆ.
ಹಲವು ಅವಧಿಗೆ ಶಾಸಕನಾಗಿ ತನ್ನನ್ನು ಗೆಲ್ಲಿಸಿದ ಕಾರ್ಕಳ ಕ್ಷೇತ್ರದ ಜನರ ಬದುಕಿಗೆ ಕೊಳ್ಳಿ ಇಡುವ ಯೋಜನೆಯನ್ನು ಸುನೀಲ್ ಕುಮಾರ್ ಉಡುಗೊರೆಯಾಗಿ ಕೊಟ್ಟ ಪರಿಣಾಮ ಇಂದು ಇನ್ನಾ ಗ್ರಾಮದ ಜನತೆ ತಮ್ಮ ಕೃಷಿ ಭೂಮಿ ಮನೆಮಠಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯಲುಮಾರ್ ಶೆಟ್ಟಿ ನೇರ ಆರೋಪಗೈದರು.
ಉಡುಪಿ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇನ್ನಾ ಗ್ರಾಮದ ಜನರ ಬದುಕಿಗೆ ಕೊಳ್ಳಿ ಇಡುವ ಯೋಜನೆಯನ್ನು ಅನುಮೋದನೆಗೊಳಿಸಿದ ಶಾಸಕ ಸುನೀಲ್ ಕುಮಾರ್ ಇನ್ನಾ ಗ್ರಾಮದ ಕಡೆಗೆ ತಲೆಯನ್ನೂ ಹಾಕದೆ ತನ್ನ ಹಿಂಬಾಲಕರ ಪಟಲಾಮನ್ನು ಸ್ಥಳಕ್ಕೆ ಕಳುಹಿಸಿ ಸಂತ್ರಸ್ತರ ಮುಂದೆ ವಿರೋಧದ ನಾಟಕವನ್ನಾಡುತ್ತಿರುವುದು ಖಂಡನೀಯವಾಗಿದೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಕೃಷಿ ಭೂಮಿಯನ್ನು, ಜನರ ಬದುಕನ್ನು ನುಂಗಿ ನೀರು ಕುಡಿಯುವ ಪ್ರಸ್ತುತ ಯೋಜನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಬಿಜೆಪಿ ನಾಯಕರಿಗೆ ಇಚ್ಛಾ ಶಕ್ತಿಯಿದ್ದರೆ ಕೇಂದ್ರ ಇಂಧನ ಸಚಿವರ ಮುಂದೆ ಕುಳಿತು ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಬೇಕಿದೆ, ಅದನ್ನು ಬಿಟ್ಟು ಸ್ಥಳೀಯ ಮುಗ್ದ ಜನರ ಮುಂದೆ ಬಿಜೆಪಿ ಪಟಲಾಮು ಮೊಸಳೆ ಕಣ್ಣೀರು ಸುರಿಸಿದರೆ ಯಾವ ಪ್ರಯೋಜನವೂ ಇಲ್ಲ ಎಂದು ತಿರುಗೇಟು ನೀಡಿದರು.


























