(
ಬದುಕು ಬದುಕೆಂದು! ಬಡಬಡಿಸದಿರು!
ಬದುಕೇ ಒಂದು! ನಂಟಿನಾ ಗಂಟು!
ತೆರೆದು ನೋಡಿದರೆ! ಅರಿವಾಗುವುದು ನಮಗೆ!
ಆ ಗಂಟೊಳಗೆ! ಏನೇನು ಉಂಟು!
ಬದುಕಿನ ಈ ಗಂಟೊಳಗೆ ಇನ್ನೇನು ಉಂಟು

ಇದು ನಾ ಬರೆದ ಪದ್ಯದ ಪಲ್ಲವಿಯ ಸಾಲುಗಳು ಇತ್ತೀಚಿನ ದಿನಗಳಲ್ಲಿ ಬದುಕು ನಡೆಸಲು ಹಲವರು ಹಲವಾರು ಕಸರತ್ತುಗಳನ್ನು ನಡೆಸುತ್ತಿರುವ ಜಂಜಾಟದ ಚಿತ್ರಣವನ್ನು ಕಂಡಾಗ ನನ್ನ ಮನಸ್ಸಿನಲ್ಲಿ ಉಧ್ಬವಿಸಿದ ಕವನದ ಪ್ರಶ್ನಾವಳಿ ಇದು ಉತ್ತರವನ್ನು ಹುಡುಕುತ್ತಾ ಹೋದಾಗ ಖಂಡಿತವಾಗಿಯೂ ಉತ್ತರದೊಂದಿಗೆ ಜ್ಞಾನವು ಕೂಡಾ ಲಭಿಸುವುದು.
ಈ ಗಂಟೊಳಗೆ ಏನು ಇರಬಹುದು ಬನ್ನಿ ಹುಡುಕೋಣ,ಅದಕ್ಕಿಂತ ಮೊದಲು ನನ್ನ ಮನಸ್ಸೊಳು ಉದ್ಭವಿಸಿದ ಒಂದು ಮಾತು.
ಇದು ಕೇವಲ ಗಂಟು ಮಾತ್ರವಲ್ಲ, ಅದಕ್ಕಿಂತ ಮಿಗಿಲಾದ ಎಂಟರ ಗಂಟು ಎಂದರೆ ತಪ್ಪಾಗಲಾರದು
ಎಂಟು ಹೇಗೆ ಉಂಟು ಸ್ವಲ್ಪ ಗಮನಿಸಿರಿ, ಎಂಟು ಎರಡು ಶೂನ್ಯಗಳ ಗಂಟು ಅರ್ಥಾತ್ ಎರಡು ಶೂನ್ಯಗಳನ್ನು ಬೆಸೆದ ಗಂಟು ಅದುವೇ ಈ ಎಂಟು. ಅದಕ್ಕೆ ನಾನು ಇಲ್ಲಿ ಎಂಟರ ಗಂಟು ಅಂದದ್ದು.
ದೊಡ್ಡದಾದ ಎರಡು ಶೂನ್ಯಗಳ ನಡುವೆ ಚಿಕ್ಕದಾದ ಈ ಒಂದು ಗಂಟು
ಅದುವೇ ಅಲ್ಲವೆ ಈ ನಮ್ಮಬದುಕು. ಹಾಗಾದರೆ ಆ ಎರಡು ಶೂನ್ಯಗಳು ಏನೆಂದು ಸ್ವಲ್ಪ ಯೋಚಿಸುವಿರಾ
ಒಂದು ಶೂನ್ಯ ಜನನವಾದರೆ ಮತ್ತೊಂದು ಮರಣದ ಸಂಕೇತ ಇವೆರಡರ ನಡುವೆ ಇರುವ ಚಿಕ್ಕ ಗಂಟು, ಅದುವೇ ನಮ್ಮ ಬದುಕು. ಇದುವೇ ಉತ್ತರ. ಆದರೆ ಪಲ್ಲವಿಯಲ್ಲಿ ಬದುಕು ಒಂದು ನಂಟಿನಾ ಗಂಟು ಎಂಬ ಉಲ್ಲೇಖ ಇದೆಯಲ್ಲ ಅದು ಏನು ಎಂಬ ಪ್ರಶ್ನೆಯು ಸಹಜವಾಗಿ ಮೂಡುವುದಲ್ಲವೆ
ಬನ್ನಿ ಆ ಗಂಟು ಬಿಚ್ಚಿ ನೋಡೋಣ
ತಂದೆ ತಾಯಿ ,ಗಂಡ ಹೆಂಡತಿ ಮಕ್ಕಳು , ಮರಿಮಕ್ಕಳು ಮತ್ತು ಬಂಧುಬಳಗ ಎಂಬ ನಮ್ಮನ್ನು ನಂಬಿ ಬಂದವರ ಪ್ರೀತಿಯನ್ನೆಲ್ಲಾ ಕೂಡಿ ಹಾಕಿ ದೊಡ್ಡದಾದ ಗಂಟು ಮೂಟೆ ಮಾಡಿ ತಲೆ ಮೇಲೆ ಹೆಗಲಮೇಲೆ ಹೊತ್ತು ಜೀವಿಸುವೆವಲ್ಲಾ ಅದುವೇ ಸ್ವಾಮಿ ಬದುಕು.
ಯಾರಾದರೂ ಒಬ್ಬರು ಈ ಗಂಟು ಭಾರವಾಗಿದೆ ಎಂದು ಹೇಳಿದ್ದನ್ನು ನೀವು ಕೇಳಿರುವಿರಾ.
ಕೇವಲ ನನಗೊಬ್ಬನಿಗಾಗಿ ಜೀವಿಸುವದಾದರೆ ಇಷ್ಟೆಲ್ಲಾ ಜಂಜಾಟದ ಅಗತ್ಯ ಇದೆಯೆ ಎಂಬುದನ್ನು ಅರಿತರೂ ಕೂಡಾ ನಾವು ಈ ಜಂಜಾಟದೊಂದಿಗೆ ಜೀವನ ನಡೆಸುವೆವಲ್ಲಾ, ಅದುವೆ ಸ್ವಾಮಿ ಬದುಕು. ಮಾತ್ರವಲ್ಲ ಅದು ಒಂದು ಸುಂದರ ಬದುಕು. ಇಲ್ಲಿ ನಮ್ಮ ಈ ಬದುಕು ನಾವು ಎಣಿಸಿದಂತೆ ನಡೆವುದು ಎಂದೆಣಿಸುವುದು ಅದು ತಪ್ಪು ಎಲ್ಲಾ ದೈವ ನಿರ್ಣಯದಂತೆ ನಡೆಯುವುದು. ಅದರ ಮಾಪನವೆಂದರೆ ಪೂರ್ವ ಜನ್ಮದಲ್ಲಿ ನಾವು ಮಾಡಿದ ಕರ್ಮಗಳು.
ಅನಾವಶ್ಯಕ ಜಂಜಾಟಕ್ಕೆ ಸಿಲುಕದೆ ನಾವು ನಡೆಸುವ ಕರ್ಮಾಂಗಗಳೆಂಬ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ನಿಜವಾಗಿಯೂ ಇದು ಒಂದು ಸುಂದರ ಬದುಕಾಗಲು ಸಾಧ್ಯ.

ಬರೆಯಲು ಇನ್ನೂ ಇದೆ ಸಮಯದೊರೆತಾಗ ಬರವಣಿಗೆ ಎಂಬ ಭೇಟಿ ನಡೆಸೋಣ. ಕವನದ ಪಲ್ಲವಿಯ ಉಲ್ಲೇಖವನ್ನಷ್ಟೆ ಇಂದು ತಿಳಿಸಿರುವೆನು ಉಳಿದ ಭಾಗವನ್ನು ಮಂದಿನ ದಿನದಲ್ಲಿ ವಿವರ ಸಹಿತ ನೀಡಲು ಪ್ರಯತ್ನಿಸುವೆನು.
ಅರ್ಥವಿಲ್ಲದೆ ಕವನ ಮೂಡದು! ವ್ಯರ್ಥವಾಗದು ಈ ಸಂದೇಶ! ಕವನಕರ್ತನ ಚಿತ್ತದೊಳು ಮಂತನವಾದಾಗ ಅದು! ಜನಮೆಚ್ಚುವ ಸಾಹಿತ್ಯವಾಗಿ ಮೂಡಿ ಬರುವುದು!
ಸಾಹಿತ್ಯ ಮತ್ತು ಅನಿಸಿಕೆಗಳ ಬರಹದ ಬಗ್ಗೆ ತಮ್ಮ ಅನಿಸಿಕೆ ಯಾ ವಿರೋಧಗಳನ್ನು ತಿಳಿಸಿರಿ ಸಂತೋಷದಿಂದ ಸ್ವಿಕರಿಸುವೆನು
ಧನ್ಯವಾದಗಳು
ಸರ್ವೆ ಜನಾಃ ಸುಖಿನೋ ಭವಂತು
-ಕಾಂತಾವರ ಶಿವಾನಂದ ಶೆಣೈ ಕಾರ್ಕಳ





































