ದ್ವೇಷ, ಅಸೂಯೆ ಮತ್ತು ಅಹಂಕಾರಗಳೇ ಸಂಘರ್ಷಕ್ಕೆ ಮೂಲ

Picture of RB NEWS

RB NEWS

Bureau Report


ಕಾಂತಾವರ : ದ್ವೇಷ, ಅಸೂಯೆ ಮತ್ತು ಅಹಂಕಾರಗಳೇ ಸಮಾಜದಲ್ಲಿ ಹಾಗೂ ಕುಟುಂಬಗಳಲ್ಲಿ ಸಂಘರ್ಷಕ್ಕೆ ಮೂಲ ಕಾರಣಗಳಾಗುತ್ತವೆ ಎಂದು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿ ಮನೆ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ “ಮಹಾಭಾರತ ಭಾವದೀಪ” ಉಪನ್ಯಾಸ ಮಾಲೆಯ ಪಂಚಮ ಸೋಪಾನದಲ್ಲಿ ಮೇ ೨೩ರಂದು ನಡೆದ “ಕುಲವೊಂದು ಕವಲೆರಡು” ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೌರವರು ಧೃತರಾಷ್ಟ್ರನ ಅರಮನೆಯಲ್ಲಿ ಬೆಳೆಯುತ್ತಿರುವಾಗಲೇ ಋಷಿ-ಮುನಿಗಳ ಆಶೀರ್ವಾದ ಪಡೆದ ಪಾಂಡವರನ್ನು ಧೃತರಾಷ್ಟ್ರನು ತನ್ನ ಮಕ್ಕಳೊಂದಿಗೆ ಸೇರಿಸಿಕೊಂಡರೂ, ದುರ್ಯೋಧನನಲ್ಲಿ ಬಾಲ್ಯದಿಂದಲೇ ಹುಟ್ಟಿದ ಅಸೂಯೆ ಮತ್ತು ದ್ವೇಷ ನಾನಾ ಸಂದರ್ಭಗಳಲ್ಲಿ ವಿಕಾಸಗೊಂಡು ಮಹಾ ಸಂಘರ್ಷಕ್ಕೆ ಕಾರಣವಾಯಿತು ಎಂದು ಅವರು ವಿವರಿಸಿದರು. ಭೀಮನನ್ನು ವಿಷಪ್ರಾಶನದ ಮೂಲಕ ಸಂಹರಿಸಲು ನಡೆದ ಪ್ರಯತ್ನವೂ ವಿಫಲವಾಗಿ, ಆತ ಇನ್ನಷ್ಟು ಬಲಶಾಲಿಯಾಗಿ ಮರಳಿ ಬಂದ ಘಟನೆ ಮಹಾಭಾರತದ ಪ್ರಮುಖ ತಿರುವಾಗಿತ್ತು ಎಂದರು. ಮಹಾಭಾರತದ ಭಾವದೀಪ ಆರದಂತೆ ಕಾಪಾಡಿದ ಭೀಷ್ಮ ಮಹಾತ್ಮರಿಗೂ ಕೌರವರ ವೈಷಮ್ಯವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಮುಂದೆ ದ್ರೋಣ ಮತ್ತು ದ್ರುಪದರ ಸಂಬಂಧವನ್ನು ಉದಾಹರಿಸಿದ ಅವರು, ಋಷಿ ಪರಂಪರೆಯ ದ್ರೋಣರು ಹಾಗೂ ರಾಜ ಪರಂಪರೆಯ ದ್ರುಪದರು ಗುರುಕುಲದಲ್ಲಿ ಸ್ನೇಹಿತರಾಗಿದ್ದರೂ, ದ್ರುಪದ ರಾಜನಾದ ಬಳಿಕ ಅಹಂಕಾರದಿಂದ ದ್ರೋಣರನ್ನು ಅವಮಾನಿಸಿದ ಘಟನೆ ಆತ್ಮಾಭಿಮಾನಕ್ಕೆ ಧಕ್ಕೆ ತಂದು ಸೇಡಿನ ರೂಪದಲ್ಲಿ ಬೆಳೆಯಿತು. ಇದೇ ಮುಂದಿನ ಸಂಘರ್ಷಗಳಿಗೆ ಕಾರಣವಾಗಿ ದ್ರುಪದನ ಗರ್ವಭಂಗಕ್ಕೆ ದಾರಿ ಮಾಡಿಕೊಟ್ಟಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ರಮೇಶ್ ಕಾರ್ಣಿಕ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ಪಲ್ಲವಿ ಕೀರ್ತನ್ ಕುಮಾರ್ ಉಪಸ್ಥಿತರಿದ್ದರು.
ಜಯಶ್ರೀ ಆದಿರಾಜ ಅಜ್ರಿ ಪ್ರಾರ್ಥಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಸುಲೋಚನ ಬಿ.ವಿ. ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top