ವಾರದ ಬೆಳಕು
ದುರಹಂಕಾರದಿಂದ ನಾಶ – ನಷ್ಟ
ದುರಹಂಕಾರ ಯಾವತ್ತೂ ಒಳ್ಳೆಯದಲ್ಲ. ದುಃಖ ಮತ್ತು ನಾಶ – ನಷ್ಟಗಳೇ ದುರಹಂಕಾರದ ಅಂತಿಮ ಫಲಿತಾಂಶ
ದುರಹಂಕಾರದಿಂದ ಯಾವುದೇ ಲಾಭವಿಲ್ಲ. ದುರಹಂಕಾರದಿಂದ ನಡೆದುಕೊಳ್ಳುವ ವ್ಯಕ್ತಿಗೆ ಆ ಕ್ಷಣಕ್ಕೆ, ತನ್ನ ಈ ವರ್ತನೆ ಸರಿಯಾದ ನಡೆ ಎಂದೇ ಅನ್ನಿಸಬಹುದು. ಜೊತೆಗೆ ತನ್ನ ಇಂಥ ನಡೆಯ ಕುರಿತು ಸ್ವಯಂ ಹೆಮ್ಮೆಯೂ, ಸಮಾಧಾನವೂ ಕೊಡಬಹುದು. ಅದೇನಿದ್ದರೂ, ಮುಂದಿನ ದಿನಗಳಲ್ಲಿ, ಭವಿಷ್ಯದಲ್ಲಿ ಕಹಿ ಫಲವನ್ನೇ ತಂದುಕೊಡುತ್ತದೆಯಷ್ಟೆ.
ಯಾವುದೇ ಸಂದರ್ಭ ಇರಲಿ, ಎಲ್ಲಿಯೇ ಆಗಲಿ ದುರಹಂಕಾರದಿಂದ ವರ್ತಿಸಿದ ವ್ಯಕ್ತಿಯನ್ನು ಎದುರಿದ್ದವರು ಅವರು ಯಾರೇ ಆದರೂ ನಕಾರಾತ್ಮಕವಾಗಿಯೇ ಗಮನಿಸುತ್ತಾರೆ, ಗುರುತಿಸುತ್ತಾರೆ. ದುರಹಂಕಾರದಿಂದ ವರ್ತಿಸಿದ ವ್ಯಕ್ತಿಯ ಬಗ್ಗೆ ಇತರರಲ್ಲಿ ಕೆಲವರು ತಕ್ಷಣವೇ ಜೊತೆಗಿದ್ದವರ ಬಳಿ ನಕಾರಾತ್ಮಕ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಹಲವರು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯವರ ಜೊತೆ ಮಾತನಾಡುವ ಸಮಯದಲ್ಲಿ ನಕಾರಾತ್ಮಕ ಅಭಿಪ್ರಾಯವನ್ನೇ ವಿನಿಮಯ ಮಾಡಿಕೊಳ್ಳುತ್ತಾರೆ.
ಹಿಂದೆ ದೊಡ್ಡಣ್ಣನ ಸ್ಥಾನದಲ್ಲಿದ್ದ ಬ್ರಿಟನ್ ದುರಹಂಕಾರದ ಕಾರಣಕ್ಕೇ ತನ್ನ ದೊಡ್ಡಣ್ಣತನವನ್ನು ಕಳೆದುಕೊಂಡಿತು. ಈಗ ಅಮೇರಿಕಾ ನಷ್ಟ ಅನುಭವಿಸುತ್ತಿದೆ. ಹಿಟ್ಲರ್ ಇಂದಿಗೂ ಖಳ ನಾಯಕನಾಗಿಯೇ ಗುರುತಿಸಲ್ಪಡುತ್ತಿರುವುದನ್ನು ಗಮನಿಸಬಹುದು.
ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಒಂದು ಅವಧಿಯಲ್ಲಿ, ಸಮಾನ ಕಾಲದಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ “ಟಾಪ್ ತ್ರಿ”ಯಾಗಿ ಮಿಂಚಿ ಮೆರೆಯುತ್ತಿದ್ದವರು. ಮೂವರೂ ನಾಯಕ ನಟರೂ ಅತ್ಯುತ್ತಮ ನಟರೆಂದೇ ಹೆಸರುಗಳಿಸಿದ್ದರು. ಮೂವರೂ ನೂರಾರು ಚಿತ್ರಗಳಲ್ಲಿ ನಟಿಸಿದ್ದವರೇ. ಡಾ. ರಾಜ್ ಇಂದು ಇಲ್ಲವಾದರೂ ಜನರ ಮನದಲ್ಲಿ ಸ್ಥಾನಪಡೆದಿದ್ದಾರೆ. ಅಜರಾಮರವಾಗಿ ಉಳಿದಿದ್ದಾರೆ. ಆದರೆ ಉಳಿದಿಬ್ಬರ ಹೆಸರೇ ಈಗ ಎಲ್ಲೂ ಕೇಳಿಬರುತ್ತಿಲ್ಲ !
ಸ್ವಾತಂತ್ರ್ಯಪೂರ್ವದಲ್ಲಿ ದುಂಡು ಮೇಜಿನ ಸಭೆಯ ಬಳಿಕ ಒಂದು ಸಂದರ್ಭದಲ್ಲಿ ಗಾಂಧೀಜಿಯವರೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೊತೆಗೆ ದುರಹಂಕಾರದಿಂದ ವರ್ತಿಸಿದ್ದು ದಾಖಲಾಗಿದೆ. ಈ ಕಾರಣಕ್ಕೇ ಈಗಲೂ ಡಾ. ಅಂಬೇಡ್ಕರ್ ಅವರನ್ನು ಪ್ರೀತಿಸುವವರು ಗಾಂಧೀಜಿಯವರನ್ನು ಪ್ರೀತಿಸದೆ, ಇಂದಿಗೂ ಅಸಮಾಧಾನ ಹೊಂದಿರುವುದನ್ನು ಗಮನಿಸಬಹುದು.
ಜನಪ್ರಿಯತೆ, ಹಣದ ಮತ್ತು ಅಧಿಕಾರದ ಮದ, ಸೌಂದರ್ಯ, ಪ್ರಖ್ಯಾತಿ ಇತ್ಯಾದಿಗಳು ದುರಹಂಕಾರಕ್ಕೆ ಕಾರಣಗಳು. ಮೇಲಿನದ್ದೆಲ್ಲವೂ ಇದ್ದಾಗಲೂ ಸರಳತೆಯಿಂದ ನಡೆದುಕೊಳ್ಳುವವರು, ಇತರರೊಂದಿಗೆ ಆತ್ಮೀಯವಾಗಿ ವರ್ತಿಸುವವರು, ನಡೆ ನುಡಿಗಳೆರಡರಲ್ಲೂ ಅತೀ ಆಗಿ ನಡೆದುಕೊಳ್ಳದೆ ಸಹಜವಾಗಿ ವರ್ತಿಸುವವನ್ನು ಜನರು ಮೆಚ್ಚುತ್ತಾರೆ, ಕೊಂಡಾಡುತ್ತಾರೆ. ಅತಿಯಾದರೆ ಅಮೃತವೂ ವಿಷವಾಗುವಂತೆ, ದುರಹಂಕಾರದ ನಡೆಯಿಂದ ವ್ಯಕ್ತಿ ಸಮಾಜದಲ್ಲಿ ಉಳಿಸಿಕೊಳ್ಳಬಹುದಾದುದನ್ನು ಕಳೆದುಕೊಳ್ಳುತ್ತಾನೆ.
ಶಾಸಕರು, ಸಂಸದರು, ಮಂತ್ರಿಗಳಾದವರಲ್ಲಿ, ಅಧಿಕಾರಿಗಳಲ್ಲಿ, ಸೆಲೆಬ್ರಿಟಿಗಳಲ್ಲಿ ದುರಹಂಕಾರದ ಅಂಶಗಳು ಹೆಚ್ಚಾಗಿ ಕಾಣಿಸುತ್ತದೆ. ಹಾಗಾಗಿಯೇ ಮಾಜಿಗಳಾದಾಗ, ವಯಸ್ಸಾದಾಗ ಹೆಚ್ಚಾಗಿ ಇಂತವರು ಜನರ ಗೌರವಾದರಗಳಿಗೆ, ಅಭಿಮಾನಕ್ಕೆ ಪಾತ್ರರಾಗಿ ಉಳಿಯುವುದೇ ಇಲ್ಲ.
ದುರಹಂಕಾರ ಗಣ್ಯರಿಗೆ ಮಾತ್ರ ಸೀಮಿತವಾದ ಗುಣವೇನೂ ಅಲ್ಲ. ಸಾಮಾನ್ಯ ಜನರಲ್ಲೂ ಕೆಲವರಿಗೆ ಈ ದುರಹಂಕಾರವೆಂಬ ಒಂದು ಮಾನಸಿಕ ಖಾಯಿಲೆ ಅಂಟಿಕೊಂಡಿರುವುದು ಇದ್ದೇ ಇದೆ.
ದುರಹಂಕಾರದಿಂದ ನಡೆದುಕೊಂಡವರಿಗೆ ಸೂಕ್ತ ಕಾಲದಲ್ಲಿ ಜನರು ಪಾಠ ಕಲಿಸಿದ ಉದಾಹರಣೆಗಳೂ ಇವೆ. ಇತರ ಜನರಿಂದ ನಕಾತಾತ್ಮಕವಾಗಿ ಗುರುತಿಸಿಕೊಳ್ಳುವಂತೆ ಆಗುವ ಮೊದಲು, ನಮ್ಮಲ್ಲಿರಬಹುದಾದ ದುರಹಂಕಾರದ ಅಂಶಗಳನ್ನು ನಾವುನಾವೇ ಪತ್ತೆಹಚ್ಚಿ ಸ್ವಲ್ಪಸ್ವಲ್ಪವೇ ನಾಶಪಡಿಸುತ್ತಾ ಹೋದರೆ ಭವಿಷ್ಯದಲ್ಲಿ ಜನಮೆಚ್ಚುಗೆಗೆ ಪಾತ್ರರಾಗುವುದು ಖಚಿತ.
ದುರಹಂಕಾರವಿಲ್ಲದವರಿಗೆ ಲಾಭವಿದೆ, ಪ್ರಯೋಜನವಿದೆ. ಪರೋಕ್ಷ ಲಾಭವಂತೂ ಖಂಡಿತಾ ಇದೆ. ದುರಹಂಕಾರವನ್ನು ದೂರಮಾಡೋಣ, ಜನರೊಂದಿಗೆ ಹತ್ತಿರವಾಗೋಣ.




































