ದುಃಖವೂ ಒಂದು ‘ಯೋಗ’ವೆನ್ನುತ್ತಾರೆ ನಿಜವೇ?

- ಡಾ. ಮಾಲತಿ ಪೈ
ಮನ ಬಿಚ್ಚಿ ಅಳುವುದು ಒಂದು ಯೋಗವೇ !
ಜಗತ್ತಿನ ಎಲ್ಲರಿಗೂ ಯಾವುದೋ ಒಂದು ಸಮಸ್ಯೆ ಇರುತ್ತದೆ. ಯಾವುದೋ ರೀತಿಯ ಕಷ್ಟದ ಕಾರ್ಮೋಡಗಳು ಎಲ್ಲರಿಗೂ ಬರುತ್ತವೆ .
ಅದರೆ ಎಲ್ಲರಿಗೂ ಬಿಕ್ಕಿಬಿಕ್ಕಿ ಅಳಲಿಕ್ಕೆ ಆಗುವುದಿಲ್ಲ .
ಕಷ್ಟಗಳು ಬಂದಾಗ ಮನದಣಿಯುವಂತೆ ಅಳುವುದೊಂದು ವರವೇ ನಿಜ!
ದೇವರು ಅಳುವ ಅವಕಾಶವನ್ನು ಕೇವಲ ಮನುಷ್ಯರಿಗೆ ಮಾತ್ರ ನೀಡಿದ್ದಾನೆ.
ಮೇಧಾ ಶಕ್ತಿಯ ಜೊತೆಗೆ ಕಷ್ಟಗಳನ್ನು ಕೊಟ್ಟಿದ್ದಾನೆ ದೇವರು ಬಹು ಜಾಣನಲ್ಲವೇ!
ಹೆಂಗಸರು ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸಿ ಅಳುತ್ತಾರೆ. ಈ ಕಾರಣದಿಂದಲೇ ಎಂತಹ ಜಟಿಲ ಪರಿಸ್ಥಿತಿಯನ್ನಾದರೂ ಸುಲಭವಾಗಿ ನಿಭಾಯಿಸುತ್ತಾರೆ .ಕೇವಲ ಅಳುವುದರಿಂದ ಸಮಸ್ಯೆಗಳು ಪರಿಹಾರವಾಗುತ ವೆಂದರ್ಥವಲ್ಲ !
ಆದರೆ ಮನಸ್ಸು ಮನೋ ಭಾರದಿಂದ ಮುಕ್ತವಾಗುತ್ತದೆ. ಪ್ರಶಾಂತತೆ ಸಿಗುತ್ತದೆ. ಇದು ಮಾತ್ರ ನಿಜ!
ಕಷ್ಟಗಳು ಯಾರಿಗೂ ಸಂತೋಷದಾಯಕವಲ್ಲ .ಕಷ್ಟಗಳಲ್ಲಿ ಎರಡು ರೀತಿಗಳಿವೆ. ಮೊದಲನೆಯದು ಶಾರೀರಿಕ ಕಷ್ಟ! ಎರಡನೆಯದು ಮಾನಸಿಕ ಕಷ್ಟ!
ಶಾರೀರಿಕ ಕಷ್ಟಕ್ಕೆ ಶರೀರವು ಬೆವರಿನ ರೂಪದಿಂದ ಅಳುತ್ತದೆ. ಮಾನಸಿಕ ಕಷ್ಟಕ್ಕೆ ಮನಸ್ಸು ಕಣ್ಣೀರಿನ ರೂಪದಿಂದ ಅಳುತ್ತದೆ.
ಕೊರಗುಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಮರುಗಿದರೇ ಮನುಷ್ಯನ ದೈಹಿಕ ಮಾನಸಿಕ ಕ್ರಿಯೆಗಳು ಸಕ್ರಮವಾಗಿರುವುದಿಲ್ಲ ಮತಿಭ್ರಮಣವಾಗುತ್ತದೆ!
ಆತ್ಮಹತ್ಯೆಗೆ ಶರಣಾಗುತ್ತಾರೆ. ಬಾಂಧವ್ಯಗಳನ್ನು ದೂ ರೀಕರಿಸುತ್ತಾರೆ!
ಯಾರನ್ನು ಪ್ರೀತಿಸುವುದಿಲ್ಲ .ಯಾರ ಪ್ರೀತಿಗೂ ಮನಸ್ಸು ಕೊಡುವುದಿಲ್ಲ. ಆಯುಷ್ಯ ಕಾಲವು ಸಹ ಕಡಿಮೆಯಾಗುತ್ತದೆ ಮುದಿತನ ಬರುತ್ತದೆ .ದೇಹ ಸೌಂದರ್ಯವು ಕೆಡುತ್ತದೆ. ಬದುಕೇ ಮಸಣವಾಗುತ್ತದೆ.
ಮಾನಸಿಕ ಸಮಸ್ಯೆಗಳನ್ನು ಬಹಿರ್ಗತ ಮಾಡುವವರು ನೂರಕ್ಕೆ ಒಬ್ಬರು ಸಹ ಆತ್ಮಹತ್ಯೆಗೆ ಕೈ ಹಾಕುವುದಿಲ್ಲ ಬದುಕಿನ ಸಮಸ್ಯೆಗಳನ್ನು ಒಬ್ಬಂಟಿಗರಾಗಿ ಹೋರಾಡುವವರೇ ಬದುಕಿನ ನಿವೃತ್ತಿಯನ್ನು ಬಯಸುತ್ತಾರೆ.
ಸಮಸ್ಯೆಗಳಿಗೆ ಒಂದೇ ಔಷಧವಿದೆ. ನೀವು ಒಬ್ಬರೇ ರೂಮಿನಲ್ಲಿ ಕುಳಿತು ಬಾಗಿಲು ಹಾಕಿಕೊಂಡು ಚೆನ್ನಾಗಿ ಅತ್ತುಬಿಡಿ .ತದನಂತರ ಹಾಯಾಗಿ ಸ್ನಾನ ಮಾಡಿರಿ. ನಿಮ್ಮ ಮನಸ್ಸು ಹಗುರವಾಗಿ ಬಿಡುತ್ತದೆ. ಮಾನಸಿಕ ಗೊಂದಲ ಮಾಯವಾಗುತ್ತದೆ. ಕೆಲವೊಂದು ಸಮಸ್ಯೆಗಳನ್ನು ನಾವು ಪರಿಷ್ಕಾರ ಮಾಡಲಿಕ್ಕೆ ಆಗುವುದಿಲ್ಲ ಯಾರೂ ಪರಿಷ್ಕಾರ ಮಾಡಲಾಗದ ಸಮಸ್ಯೆಗಳನ್ನು ಕಾಲವೇ ಪರಿಷ್ಕಾರ ಮಾಡುತ್ತದೆ .ಕಾಲಕ್ಕಿರುವ ಶಕ್ತಿ ದೊಡ್ಡದು .
ನಾವು ಚೆನ್ನಾಗಿ ಅತ್ತದ್ದರಿಂದ ಶರೀರದಲ್ಲಿರುವ “ಟಾಕ್ಸಿನ್ ” ಹೊರಗೆ ಬರುತ್ತದೆ .ಇದು ದೇಹಕ್ಕೆ ಒಳ್ಳೆಯದು. ಸಾಧಾರಣವಾಗಿ ಕಣ್ಣಲ್ಲಿ ಕಸ ಬಿದ್ದಾಗ ಅಥವಾ ಯಾವುದಾದರೂ ಹುಳ ಬಿದ್ದಾಗ, ಈರುಳ್ಳಿ ಕತ್ತರಿಸುವಾಗ, ಬರುವ ಕಣ್ಣೀರು “ಇರಿಟೇಶನ್ “ನಿಂದ ಬರುತ್ತದೆ ಮಾನಸಿಕ ತುಮಲದಿಂದ ಬರುವ ಕಣ್ಣೀರು “ಎಮೋಷನಲ್” ನಿಂದ ಬರುತ್ತದೆ .
“ಎಮೋಷನ್” ನಿಂದ ಬರುವ ಕಣ್ಣೀರಿನಿಂದ ಮನಶಾಂತಿ ಸಿಗುತ್ತದೆ .
“ವಿಷಾದವನ್ನು ನಾವು ಒಂದು ಯೋಗವೆಂದು ಭಾವಿಸುವುದಾದರೆ ಮನುಷ್ಯನೇ ಮಹಾತ್ಮನಾಗುತ್ತಾನೆ. ಮತ್ತೊಬ್ಬರ ಬದುಕಿಗೆ ಮಣಿದೀಪನಾಗುತ್ತಾನೆ. ಮಹರ್ಷಿಗಳು ಸನ್ಯಾಸಿಗಳು ಯೋಗಿಗಳು ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ದುಃಖಿಸುವುದಿಲ್ಲ. ವಿಧಿ ನಿಯಮಕ್ಕೇ ಬಿಟ್ಟುಬಿಡುತ್ತಾರೆ .
‘ಯೋಗ ‘ಎಂದರೆ ಅಕಲ್ಪಿತ ಅದೃಷ್ಟ!
‘ಯೋಗ’ ಎಂದರೆ ಸಾಧನೆ!
‘‘ಯೋಗಿಎಂದರೆ ಸಾಧಕನು
“ತಿನ್ನುತ್ತಾ ತಿನ್ನುತ್ತಾ ಬೇವು ಬೆಲ್ಲ ವಾಗುವುದು. ಹಾಡುತ್ತಾ ಹಾಡುತ್ತಾ ಧ್ವನಿ ವೃದ್ಧಿಯಾಗುವುದು” ಕಷ್ಟಗಳನ್ನು ಸಂತೋಷದಿಂದ ಆಹ್ವಾನಿಸಿ ನೋಡು! ಸಮಸ್ಯೆಗಳನ್ನು ಅಲಕ್ಷ್ಯದಿಂದ ತಳ್ಳಿ ನೋಡು ಸಮಸ್ಯೆಗಳು ನಿನ್ನನ್ನು ಕಾಡುವುದಿಲ್ಲ ಸಮಸ್ಯೆಗಳನ್ನು ಸ್ವಲ್ಪ ದಿನ ಬಿಟ್ಟರೆ ತನ್ನಷ್ಟಕ್ಕೆ ತಾನೇ ಪರಿಷ್ಕಾರವಾಗಿ ಬಿಡುತ್ತವೆ.
ದುಃಖವನ್ನು ಒಂದು ‘ಯೋಗ’ ವೆಂದು ನೋಡಿದಾಗ ನಾವು ದುಃಖದಲ್ಲಿ ಸುಖವನ್ನು ಕಾಣಬಹುದು.
ಸಣ್ಣ ಕಲ್ಲನ್ನು ಕೈಯಲ್ಲಿ ಹಿಡಿದು ಕಣ್ಣಿಗೆ ಹತ್ತಿರವಾಗಿಟ್ಟುಕೊಂಡು ನೋಡಿದರೆ ಗುಡ್ಡದಂತೆ ಕಾಣುವುದು ಸಹಜ!
ದೊಡ್ಡ ಗುಡ್ಡವನ್ನು ಕನ್ನಡಿಯಲ್ಲಿ ನೋಡು! ಅತಿ ಚಿಕ್ಕದಾಗಿ ಅಂಗೈಯಲ್ಲಿ ಹೊಂದಿಕೊಳ್ಳುತ್ತದೆ.
ಜಗತ್ತಿನ ಯಾವ ಪ್ರಾಣಿಗಳಿಗೂ ಇಲ್ಲದ ದುಃಖವೆಂಬ ಸಾಧನವನ್ನು ದೇವರು ನಮಗೆ ದಯಪಾಲಿಸಿದ್ದಾನೆ.
ಅತಿ ಸಮಸ್ಯೆ ಬಂದೊದಗಿದಾಗ ಮನಸ್ಸನ್ನು ಸ್ವಲ್ಪ ಸಮಯಕ್ಕಾಗಿ ನಿಯಂತ್ರಿಸಿಕೊಳ್ಳಬೇಕು.
ಮನಸ್ಸನ್ನು ಬಂಧಿಸಬೇಕು!
ಮನಸ್ಸು ಮಾಡುವ ಗೊಂದಲಕ್ಕೆ ಕಡಿವಾಣ ಹಾಕಬೇಕು. ನಾವು ಪ್ರಶಾಂತರಾಗಬೇಕು.
ದುಡುಕಬಾರದು ಮೌನಕ್ಕೆ ಶರಣಾಗಬೇಕು. ತದನಂತರವೇ ಪರಿಷ್ಕಾರಕ್ಕೆ ಮುಂದಾಗಬೇಕು.
ದುಃಖವಿಲ್ಲದಿದ್ದರೆ ಸಂತೋಷಕ್ಕೆ ಬೆಲೆ ಇರುವುದಿಲ್ಲ. ಬಿಸಿಲಿಲ್ಲದಿದ್ದರೇ ನೆರಳಿಗೆ ಬೆಲೆ ಇಲ್ಲ. ಅವಶ್ಯಕತೆಗಳಿರದಿದ್ದರೆ. ಹಣಕ್ಕೆ ಬೆಲೆ ಬೆಲೆ ಇಲ್ಲ. ನೀನಾಗಿ ದುಃಖವನ್ನು ಬಯಸಬೇಡ.
ತಾನಾಗಿ ದುಃಖವೂ ಹತ್ತಿರಕ್ಕೆ ಬಂದಾಗ ಅದನ್ನು “ಯೋಗಿಯಂತೆ” ಮೌನವಾಗಿ ಅನುಭವಿಸು.
ಎಂಥಾ ದುಃಖವು ನಿನ್ನನ್ನು ಏನು ಮಾಡಲಾರದು, ನಿನಗೆ ದುಃಖವೇ ಶರಣಾಗುತ್ತದೆ. ದುಃಖದಲ್ಲಿ ನಿನಗೆ ಎಷ್ಟೋ ಸತ್ಯಗಳು ಮನದರಿವಾಗುತ್ತವೆ. ಜೀವನ ಸಾಕ್ಷಾತ್ಕಾರವು ಸಿಗುತ್ತದೆ. ಮಹಾಭಾರತದ “ಭಗವದ್ಗೀತೆ” ಇದನ್ನೇ ಹೇಳುತ್ತದೆ.
ಶ್ಲೋ|| ದುಃಖ ಮಿತೇವ ಯತ್ ಕರ್ಮ , ಕಾಯಕ್ಲೇಶಭಯಾತ್ ತ್ಯಜೇತ್
ಸಕೃತ್ವ ರಾಜಸಂ ತ್ಯಾಗಂ ನೈವತ್ಯಾಗ ಫಲಂ ಲಭೇತ್














