ದಿ. ಕುಂಬ್ಳೆ, ಪುತ್ತೂರು ದ್ವಯರ ಸಂಸ್ಮರಣಾ ಪ್ರಶಸ್ತಿ ಪ್ರದಾನ: ಕೇಳ ಕಾಶಿಪಟ್ಣದಲ್ಲಿ ನಿಡ್ಲೆ ಮಂಡಳಿಯಿಂದ ಅಗಲಿದ ಕಲಾವಿದರಿಗೆ ಸ್ಮೃತಿಗೌರವ
ಬೆಳ್ತಂಗಡಿ: ಕಳೆದ 37ವರ್ಷಗಳಿಂದ ದಕ್ಷಿಣ ಭಾರತದಾದ್ಯಂತ ಮಳೆಗಾಲದಲ್ಲಿ ತೆಂಕುತಿಟ್ಟು ಯಕ್ಷಗಾನವನ್ನು ಪಸರಿಸಿದ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪಾಲಿಗೆ ಊರುಗೋಲಿನಂತಿದ್ದು, ಸಮರ್ಪಣಾ ಭಾವದ ಮೇಳನಿಷ್ಠೆಯಿಂದ ದುಡಿದ ದಿ.ಕುಂಬ್ಳೆ ಶ್ರೀಧರ ರಾವ್ ಮತ್ತು ದಿ. ಗಂಗಾಧರ ಪುತ್ತೂರು ಇವರ ಸಂಸ್ಮರಣೆ ಸಹಿತ ಸ್ಮರಣಾ ಪ್ರಶಸ್ತಿ ಪ್ರದಾನ ಕೇಳ ಕಾಶೀಪಟ್ಣ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಜರುಗಿತು.
ದಿ.ಕುಂಬ್ಳೆ ಮತ್ತು ಪೂತ್ತೂರು ಗಂಗನವರ ಸ್ಮೃತಿಪ್ರಶಸ್ತಿ ಸಹಿತ ಸನ್ಮಾನವನ್ನು ಹಿರಿಯ ಕಲಾವಿದರಾದ, ಹನುಮಗಿರಿ ಮೇಳದ ವೇಷಧಾರಿ ಸದಾಶಿವ ಕುಲಾಲ್ ಹಾಗೂ ಪುತ್ತೂರು ಗಂಗಾಧರರ ಒಡನಾಡಿ ನಿಡ್ಲೆ ನಾರಾಯಣ ಭಟ್ಟರಿಗಿತ್ತು ಗೌರವಿಸಲಾಯಿತು.
ಬೀಡಿ ಕಟ್ಟುತ್ತಿದ್ದ ನನಗೆ ಕಲಾಶ್ರಯ ನೀಡಿದ ಮಂಡಳಿಯಲ್ಲಿ ಪ್ರಶಸ್ತಿ
ಸನ್ಮಾನ,ಪ್ರಶಸ್ತಿ ಸ್ವೀಕರಿಸಿ ಕೃತಜ್ಞತಾ ಮಾತನ್ನಾಡಿದ ಚತುರ ವೇಷಧಾರಿ ವೇಣೂರು ಸದಾಶಿವ ಕುಲಾಲ್ “ಒಂದು ಕಾಲದಲ್ಲಿ ಆಟದ ಹುಚ್ಚಿಂದ ನಾನು ಮೇಳಸೇರಿದ್ದೆ. ಆಗ ಬಡತನದ ತಾಂಡವ. ಮಳೆಗಾಲದಲ್ಲಿ ಯಾವ ಆದಾಯವೂ ಇಲ್ಲದ ದೈನೇಸಿ ಸ್ಥಿತಿ. ಕುಣಿಯುವುದಲ್ಲದೇ ನನಗೆ ಮತ್ತೇನೂ ಕಸುಬು ಗೊತ್ತಿರಲಿಲ್ಲ. ಆ ದಿನದಲ್ಲಿ ಹೊಟ್ಟೆ ಹಸಿವಷ್ಟೇ ಅಲ್ಲ, ಕುಟುಂಬ ನಿರ್ವಹಣೆಗಾಗಿ ಅನಿವಾರ್ಯತೆಯಿಂದ ಅಕ್ಕನ ಜತೆ ನಾನೂ ಬೀಡಿ ಕಟ್ಟಿದೆ.
ಈ ಸಂದರ್ಭದಲ್ಲಿ ನನ್ನನ್ನು ಮಳೆಗಾಲದ ತಂಡಕ್ಕೆ ಕರೆದು ಕಲಾಶ್ರಯ ನೀಡಿ ಕೈ ಹಿಡಿದೆತ್ತಿ ಆಧರಿಸಿದವರು ನಿಡ್ಲೆ ಗೋವಿಂದ ಭಟ್ಟರು. ಈ ಮಂಡಳಿಯಲ್ಲಿ ಏನೇನೂ ಅರಿಯದ ನನಗೆ ಸಮಗ್ರ ಪ್ರಸಂಗ ಪಥದರ್ಶಕರಾಗಿ ಹೆಜ್ಜೆ,ಹೆಜ್ಜೆಯನ್ನೂ ಹೇಳಿಕೊಟ್ಟವರು ಕುಂಬ್ಳೆ ಶ್ರೀಧರ ರಾವ್. ಇವರಿಬ್ಬರು ನನ್ನನ್ನು ಪ್ರೋತ್ಸಾಹಿಸದೇ ಇರುತ್ತಿದ್ದರೆ ನಾನಿಂದು ಕಲಾವಿದನಾಗಿ ನಿಮ್ಮ ಮುಂದೆ ಈ ಥರ ಇರುತ್ತಿರಲಿಲ್ಲ. ಈಗ ಅದೇ ಕುಂಬ್ಳೆ ಶ್ರೀಧರಣ್ಣನ ಸ್ಮೃತಿಗೌರವ ಪೂರ್ವಕ ಪ್ರಶಸ್ತಿ ಮುಡಿಯುವ ಈ ವೇಳೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ನಿಜಕ್ಕೂ ನಾನೇ ಧನ್ಯ ಎಂದರು ಸದಾಶಿವ ಕುಲಾಲ್.
ಅನನ್ಯ ಮಾದರಿಯ ಕಲಾವಿದರು..
ದಿ.ಕುಂಬ್ಳೆ ಶ್ರೀಧರರಾವ್ ಮತ್ತು ಪುತ್ತೂರು ಗಂಗಾಧರ ಅವರನ್ನು ಸಂಸ್ಮರಿಸಿ ಪತ್ರಕರ್ತ, ಲೇಖಕ, ಕಣಿಪುರ ಡಿಜಿಟಲ್ ಮೀಡಿಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಮಾತನಾಡಿದರು.
“ಬದುಕನ್ನಿಡೀ ಕಲೆಗಾಗಿಯೇ ಮೀಸಲಾಗಿಟ್ಟ ಉಭಯ ಕಲಾವಿದರ ಯಕ್ಷಪಥ ಆದರ್ಶ, ಅನುಕರಣೀಯವಾಗಿದೆ. ತನಗಿಂಥದೇ ಪಾತ್ರ, ತನಗಿಂಥದೇ ಸೌಕರ್ಯಗಳ ಸೌಲಭ್ಯ ಬೇಕೆಂದು ಬಯಸದೇ ಸಂಚಾರಿ ಮೇಳದದ ಸಾಂಘಿಕ ಯಶಸ್ಸೇ ಮೇಳದ ಯಶಸ್ಸೆಂದು ಕಾಯಾ, ವಾಚಾ, ಮನಸಾ ಮೇಳದ ಮುನ್ನಡೆಗೆ ಪೂರಕ, ನಿಷ್ಠರಾಗಿ ದುಡಿದ ಇವರಂಥ ಕಲಾವಿದರು ಇಡೀ ಯಕ್ಷಲೋಕಕ್ಕೇ ಮಾದರಿ. ಇಃಥವರು ಇನ್ನು ಯಾವ ಮೇಳಕ್ಕೂ ಸಿಗಲಾರರು” ಎಂದು ಎಂ.ನಾ. ನುಡಿದರು.
ಕೇಳ ಶ್ರೀ ಪಂಚಲಿಂಗೇಶ್ವರ ದೇಗುಲದ ಅರ್ಚಕ ಕೆ.ಅನಂತ ಆಸ್ರಣ್ಣ ಸಭಾಧ್ಯಕ್ಷತೆ ವಹಿಸಿದರು.
ಕೇಳ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ .ಕೆ, ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸಂಸ್ಥಾಪಕ ಹಾಗೂ ಹಿರಿಯ ಕಲಾವಿದರಾದ ನಿಡ್ಲೆ ಗೋವಿಂದ ಭಟ್, ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ ಹೆಗ್ಡೆ ಧರ್ಮಸ್ಥಳ, ಯಕ್ಷಗಾನ ಕಲಾಪೋಷಕ, ಉದ್ಯಮಿ ಸತೀಶ ಭಟ್ ಬಜಗೋಳಿ, ಕಾಶೀಪಟ್ಣ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಶೈಲೇಶ್ ಕೋಟ್ಯಾನ್, ಕುಂಬ್ಳೆ ಶ್ರೀಧರರಾವ್ ಸಹೋದರ, ಕಲಾವಿದ ಕುಂಬ್ಳೆ ಗೋಪಾಲ್ ರಾವ್ ಬೆಂಗಳೂರು ಅತಿಥಿಗಳಾಗಿ ಪಾಲ್ಗೊಂಡರು.
ಸಂಸ್ಮರಣಾ ಪ್ರಶಸ್ತಿ ಮಾನಿತರ ಸನ್ಮಾನ ಪತ್ರವನ್ನು ಅನುಕ್ರಮವಾಗಿ ಈಶ್ವರ ಚಂದ್ರ ನಿಡ್ಲೆ, ಗಣೇಶ್ ಅಳಿಯೂರು ವಾಚಿಸಿದರು. ಪ್ರಶಸ್ತಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ನಿಡ್ಲೆ ನಾರಾಯಣ ಭಟ್ಟರು ದಿ.ಪುತ್ತೂರು ಗಂಗಾಧರ ನನ್ನ ಸಹಪಾಠಿ. ನಮ್ಮಿಬ್ಬರ ನಡುವೆ ಸಹಪಠುತ್ವಕ್ಕೂ ಮೀರಿದ ಬಾಂಧವ್ಯಗಳಿತ್ತು. ಆತ ನಮ್ಮ ಮನೆಯ ಬಂಧು. ಆ ಹೆಸರಲ್ಲೊಂದು ಗೌರವ ಬದುಕಿನ ಭಾಗ್ಯ ಎಂದರು.
ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೊರೋನ ಕಾಲದಲ್ಲಿ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ಕಳೆದೆರಡು ವರ್ಷಗಳಿಂದ ಭಾಗವತ ಕರುಣಾಕರ ಶೆಟ್ಟಿಗಾರ ಕಾಶೀಪಟ್ಣ ಸಾರಥ್ಯದಲ್ಲಿ ಅಭಿಯಾನ ಮುಂದುವರಿಸಿದೆ. ಈ ವರ್ಷ ಒಂದು ಮಂಡಲ (48) ಆಟವನ್ನು ಪೂರೈಸಿದ ಸಾರ್ಥಕ್ಯದೊಂದಿಗೆ ಇಂದು ಮಳೆಗಾಲದ ತಿರುಗಾಟಕ್ಕೆ ಈ ವರ್ಷದ ಮಂಗಲ ಹಾಡಲಿದೆ. ನಿನ್ನೆ ಕಾಶೀಪಟ್ಣ ದೇವಾಲಯದಲ್ಲಿ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ದಮಯಂತಿ ಪುನರ್ ಸ್ವಯಂವರ-ರುಕ್ಮಿಣಿ ಕಲ್ಯಾಣ ಆಖ್ಯಾನದ ಬಯಲಾಟ ಜರುಗಿತು.































