ಸೇವಾಭಾರತಿ ಸಂಸ್ಥೆಯಲ್ಲಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ವ್ಯಕ್ತಿತ್ವ ವಿಕಸನ ಶಿಬಿರ
ಕಾರ್ಕಳ : ಸ್ವಯಾರ್ಜಿತ ಸಂಪತ್ತು ಶೇಖರಿಸಿ ಪೀಳಿಗೆಗೆ ಕಾಯ್ದಿರಿಸುವುದು ವ್ಯರ್ಥ .ಪರಿಸ್ಥಿತಿಗನುಗುಣವಾಗಿ ಅರ್ಹರಿಗೆ ಸಂಪತ್ತಿನ ಸದ್ವಿನಿಯೋಗ ಮಾಡುವುದು ಶ್ರೇಷ್ಠ ಪುಣ್ಯದ ಕೆಲಸ .ದಾನಧರ್ಮ ಯಾವಾಗಲೂ ಪ್ರದರ್ಶನದ ವಿಷಯವಾಗಬಾರದು , ಬದಲಿಗೆ ನಿದರ್ಶನವಾಗಿ ಸಮಾಜದಲ್ಲಿ ಪ್ರಸ್ತುತವಾಗಬೇಕು ಎಂದು ಹಿರಿಯ ರೊಟೇರಿಯನ್ , ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ ಹೇಳಿದ್ದಾರೆ .
ಕಾರ್ಕಳ ಅನಂತಶಯನ ಸೇವಾಭಾರತಿ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ಹಿರಿಯಸಾಹಿತಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಹೊಸಸಂಜೆ ಬಳಗ ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು .

ಸೋಲನ್ನು ಸವಾಲಾಗಿ ಸ್ವೀಕರಿಸಿ : ಕವಯಿತ್ರಿ ಲಲಿತಾ ಮುದ್ರಾಡಿ ಸಲಹೆ
ಪರೀಕ್ಷೆಯಲ್ಲಿ ಫೇಲಾದರೆ ಜೀವನದಲ್ಲಿ ಫೇಲ್ ಅಲ್ಲ .ಸೋಲನ್ನು ಸವಾಲಾಗಿ ಸ್ವೀಕರಿಸಿ ; ಪ್ರಯತ್ನಶೀಲತೆ ಜಾರಿಯಲ್ಲಿರಲಿ .ಪ್ರಯತ್ನಪಡದೇ ಬಂದ ಗೆಲುವು ನಿಜವಾದ ಗೆಲುವಲ್ಲ .ಸಮಸ್ಯೆ ಬಂದಾಗ ಗೊಂದಲಕ್ಕೀಡಾಗದೆ ಅದು ಸಮಸ್ಯೆಯೇ ಅಲ್ಲ ಎಂದು ತಿಳಿದುಕೊಳ್ಳಿ .ಸಾಮರ್ಥ್ಯಕ್ಕೆ ಸರಿಯಾಗಿ ಬದುಕು ಕಟ್ಟಿಕೊಳ್ಳಿ ಎಂದು ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕಿ , ಕವಯಿತ್ರಿ ಲಲಿತಾ ಮುದ್ರಾಡಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು .
ಆಸೆ ಅತಿಯಾದರೆ ಮಾತ್ರ ನಿರಾಸೆ ಕಾದಿರುತ್ತದೆ .ಆಸೆಗಳಿಗೆ ಮಿತಿ ಇರಲಿ .ಆರೋಗ್ಯವಂತ ಶರೀರ ಮನಸ್ಸು ಇದ್ದಾಗ ಅದುವೇ ನಮ್ಮ ಅದ್ಭುತ ಶಕ್ತಿ .ಮನಸ್ಸು ಸಂಕುಚಿತಗೊಳಿಸಿಕೊಳ್ಳಬೇಡಿ .
ತುಳಿಯಲು ಪ್ರಯತ್ನಿಸಿದವರು ತಾತ್ಸಾರ ಮಾಡಿದವರ ಎದುರು ತಲೆ ಎತ್ತಿ ನಿಲ್ಲಬೇಕು ; ಅಂತಹ ಸಾಧನೆ ಮಾಡಿ ಎಂದು ಅವರು ಕರೆ ನೀಡಿದರು .
ಉದ್ಯಮಿ ಬೋಳ ರಘುರಾಮ ಕಾಮತ್ , ಟ್ರಸ್ಟ್ ನ ಪದಾಧಿಕಾರಿಗಳಾದ ವಿಘ್ನೇಶ್ ಫಾಟಕ್ ಮತ್ತು ಆನಂದ ಭಟ್ ಉಪಸ್ಥಿತರಿದ್ದರು .
ಹೊಸಸಂಜೆ ಬಳಗದ ಅಧ್ಯಕ್ಷ ಆರ್ .ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು .





































