




ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದ ಮಹಿಳಾ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
ಉಡುಪಿ : ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಅವಮಾನಿಸಿ ಮಾತುಗಳು ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಕುರಿತು ಶಾಸಕ ಸಿ.ಟಿ ರವಿ ಉಲ್ಲೇಖಿಸಿದ ಅಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದ ಮಹಿಳಾ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರದಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು.

ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಅಮಿತ್ ಶಾ ಸಚಿವರಾಗಿ ಮುಂದುವರಿಯುವ ನೈತಿಕತೆ ಇರುವುದಿಲ್ಲ. ತಕ್ಷಣವೇ ರಾಜೀನಾಮೆ ನೀಡಬೇಕೆಂದು ಸಮಿತಿಯ ಮುಖಂಡರು ಆಗ್ರಹಿಸಿದರು.
ಕರ್ನಾಟಕದ ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಶಾಸಕ ಸಿ.ಟಿ.ರವಿಯವರು ರಾಜ್ಯದ ಮಹಿಳಾ ಸಚಿವರನ್ನು ಉದ್ದೇಶಿಸಿ ಅಕ್ಷೇಪಾರ್ಹ ಮಾತುಗಳನ್ನು ನಾವು ಖಂಡಿಸುತ್ತೇವೆ. ಸಡಿಲ ನಾಲಗೆಯ ಹಗುರ ಮಾತುಗಳಾನ್ನಾಡುವ ಚಾಳಿಯನ್ನು ಹೊಂದಿರುವ ಸಿ.ಟಿ. ರವಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಇದೇ ಸಂದರ್ಭದಲ್ಲಿ ಮುಖಂಡರು ಒತ್ತಾಯಿಸಿದರು.
ದೇಶದ ಸಂವಿಧಾನದ ಬೆಳಕಿನಲ್ಲಿ ಸರ್ವ ಸಮಾನತೆಯನ್ನು ಒಪ್ಪಿಕೊಂಡು, ಲಿಂಗ-ಜಾತಿ- ಮತ ಧರ್ಮ- ಭೇದವಿಲ್ಲದೇ ಬಾಳುವ ಆಶಯವನ್ನು ಹೊಂದಿರುವ ಬಹು ತತ್ವ ಭಾರತದ ಜನತೆಯಾಗಿ ನಾವು ಈ ಮೇಲಿನ ಒತ್ತಾಯಗಳನ್ನು ಮಾಡುತ್ತಿದ್ದೇವೆ ಎಂದು ಸಮಿತಿ ಆಗ್ರಹಿಸಿದೆ.

ಪ್ರತಿಭಟನಾ ಸಭೆಯಲ್ಲಿ ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ. ಕುಂದಾಪುರ ಮಹಿಳಾ ಸಂಘದ ಅಧ್ಯಕ್ಷೆ ಬಲ್ಕೀಸ್, ಬೈಂದೂರು ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ನಾಡ, ಮುಖಂಡರಾದ ನಳಿನಿ.ಎಸ್, ಗಿರಿಜಾ, ರವಿಕಲಾ, ಪದ್ದು, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು,ಮುಖಂಡರಾದ ರವಿ.ವಿ.ಎಮ್, ಕುಂದಾಪುರ, ರಾಮ ಕಾರ್ಕಡ ಸಾಲಿಗ್ರಾಮ, ರಂಗನಾಥ ಉಡುಪಿ, ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಕೋಶಾಧಿಕಾರಿ ಶಶಿಧರ ಗೋಲ್ಲ, ಉಪಾಧ್ಯಕ್ಷರಾದ ಎಚ್.ನರಸಿಂಹ,ಚಿಕ್ಕ ಮೊಗವೀರ, ಕಾರ್ಯದರ್ಶಿ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್. ಎಸ್.ಕಾಂಚನ್, ಮುಖಂಡರಾದ ಸುಭಾಸ್ ನಾಯಕ್, ಸದಾಶಿವ ಪೂಜಾರಿ, ಉಮೇಶ್ ಕುಂದರ್, ಮೋಹನ್ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಉಪಸ್ಥಿತರಿದ್ದರು







































