ದಲಿತ ಮೀನುಗಾರ ಮಹಿಳೆಯ ಮೇಲಿನ ಹಲ್ಲೆ : ದಲಿತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಖಂಡನೆ
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯದ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಘಟನೆಯನ್ನು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಘಟಕ ಖಂಡಿಸಿದೆ.
ಯಾವುದೇ ಕಾರಣಕ್ಕೂ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುವುದು ಅಮಾನವೀಯವಾದದ್ದು. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಲ್ಲೆ ನಡೆಸಿದವರ ವಿರುದ್ಧ ಪೊಲೀಸ್ ಇಲಾಖೆ ಮತ್ತು ಸರಕಾರ ಕಠಿಣ ಕಾನೂನು ಕ್ರಮ ತೆಗೆದುಕೊಂಡು ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.
ಮಹಿಳೆಗೆ ಹಲ್ಲೆ ನಡೆಸುವಾಗ ಸ್ಥಳದಲ್ಲಿದ್ದ ನೂರಾರು ಮಂದಿ ಚಂದ ನೋಡುತ್ತಾ ಇದ್ದುದನ್ನು ಗಮನಿಸಿದರೆ ಇಲ್ಲಿ ಮನುಷ್ಯ ಸತ್ತಿರುವುದನ್ನು ಗಮನಿಸಬಹುದು. ಆದ್ದರಿಂದ ಸರಕಾರ ಮಲ್ಪೆ ಬಂದರಿನಲ್ಲಿ ಮಾನವೀಯತೆಯ ಅಗತ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಡಿ ಎಚ್ ಎಸ್ ಮನವಿ ಮಾಡಿದೆ.
ಈ ಘಟನೆ ದೇಶಮಟ್ಟದಲ್ಲಿ ಚರ್ಚೆಯಲ್ಲಿರುವಾಗ ಉಡುಪಿ ಶಾಸಕರಾಗಲೀ, ಸಂಸದರಾಗಲೀ ದಲಿತ ಮಹಿಳೆಯ ಹಲ್ಲೆಯ ಬಗ್ಗೆ ಮಾತನಾಡದಿರುವುದು ವಿಪರ್ಯಾಸ ಎಂದು

ಉಡುಪಿ ಜಿಲ್ಲಾ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಸಂಜೀವ ಬಳ್ಳೂರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದರು.



































