ದಲಿತರ ಮೀಸಲು ಅನುದಾನ ಗ್ಯಾರೆಂಟಿ ಯೋಜನೆಗೆ?! ಡಿಎಚ್ಎಸ್ ಖಂಡನೆ
RB NEWS
Bureau Report
ದಲಿತರ ಮೀಸಲು ಅನುದಾನ ಗ್ಯಾರೆಂಟಿ ಯೋಜನೆಗೆ?! ಡಿಎಚ್ಎಸ್ ಖಂಡನೆ
ಉಡುಪಿ, ಮಾ. 5 : ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 24.17 ರಷ್ಟು ದಲಿತರಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಮೀಸಲಿರಿಸಿದ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಅನುದಾನವನ್ನು ಗ್ಯಾರೆಂಟಿ ಯೋಜನೆಗಳು ಹಾಗೂ ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿ (ಡಿ.ಎಚ್.ಎಸ್.) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 2023ರಲ್ಲಿ ಸುಮಾರು 11,000 ಕೋಟಿ ರೂ., 2024ರಲ್ಲಿ 14,279 ಕೋಟಿ ರೂ. ಹಾಗೂ 2025ರಲ್ಲಿ ಸುಮಾರು 38,000 ಕೋಟಿ ರೂ. ಅನುದಾನವನ್ನು ಗ್ಯಾರೆಂಟಿ ಯೋಜನೆಗಳು ಹಾಗೂ ಅನ್ಯ ಕಾಮಗಾರಿಗಳಿಗೆ ಬಳಸಲಾಗಿದ್ದು, ಇದರಿಂದ ದಲಿತರನ್ನು ವಂಚಿಸಲಾಗಿದೆ ಎಂದು ಸಮಿತಿ ಆರೋಪಿಸಿದೆ. 2026-27ನೇ ಸಾಲಿನ ಬಜೆಟ್ನಲ್ಲಿ ಸರಕಾರ ಈ ದಲಿತ ವಿರೋಧಿ ನೀತಿಯನ್ನು ಕೈಬಿಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ತಿಳಿಸಿದ್ದಾರೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾ. 3ರಂದು ರಾಜ್ಯಾದ್ಯಂತ ದಲಿತ ಹಕ್ಕುಗಳ ಸಮಿತಿಯ ಕರೆಯ ಮೇರೆಗೆ ನಡೆದ ಬಜೆಟ್ ಪೂರ್ವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ದಲಿತರ ಜೀವನಮಟ್ಟದ ಅಭಿವೃದ್ಧಿ ಪ್ರಮಾಣ, ದಲಿತರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ಸಮಗ್ರ ಚರ್ಚೆ ನಡೆಯಬೇಕು. ದಲಿತಪರ ಯೋಜನೆಗಳನ್ನು ಜಾರಿಗೆ ತರದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ವಿವರ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ವಿಧಿಸಿದ ಶಿಕ್ಷೆಗಳ ಕುರಿತು ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು. ದಲಿತರ ಮೀಸಲು ಅನುದಾನ ಮತ್ತು ಕಾರ್ಯಯೋಜನೆಗಳ ಕುರಿತು ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಿಸಿ ಚರ್ಚೆ ನಡೆಸಿ, ಸರಕಾರ ದಲಿತರ ಅಭ್ಯುದಯಕ್ಕೆ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಉಡುಪಿಯಲ್ಲಿ ದಲಿತರ ಭೂಮಿ ಹಕ್ಕಿಗಾಗಿ ಹೋರಾಟ ಉಡುಪಿ ಜಿಲ್ಲೆಯಲ್ಲಿ ದಲಿತ ಹಕ್ಕುಗಳ ಸಮಿತಿಯು ದಲಿತರ ಭೂಮಿ ಹಕ್ಕಿನ ವಿಚಾರವನ್ನು ಕೇಂದ್ರೀಕರಿಸಿ ಹಾಗೂ ದಲಿತರ ಸಮಸ್ಯೆಗಳ ಕುರಿತು ವ್ಯಾಪಕ ಹೋರಾಟ ನಡೆಸುತ್ತಿದೆ. ಕರ್ನಾಟಕ ಭೂ ಅನುದಾನ ನಿಯಮ 1969ರ ನಿಯಮ 5ರ ಪ್ರಕಾರ ಪ್ರತಿ ಗ್ರಾಮದಲ್ಲಿ ಲಭ್ಯವಿರುವ ಸರಕಾರಿ ಜಮೀನಿನಲ್ಲಿ ಶೇ. 50ರಷ್ಟು ಜಮೀನನ್ನು ದಲಿತರಿಗೆ ಮೀಸಲಿಡಬೇಕೆಂಬ ಬೇಡಿಕೆಯನ್ನು ಸಂಘಟನೆ ಮುಂದಿಟ್ಟಿದ್ದು, ಪ್ರತಿ ಗ್ರಾಮದಲ್ಲಿ ಸಂಘಟನೆಗಳನ್ನು ಕಟ್ಟುವ ಮೂಲಕ ಹೋರಾಟ ಮುಂದುವರಿಸಿದೆ. ಕುಮ್ಕಿ, ಅಕ್ರಮ-ಸಕ್ರಮ, ಒತ್ತುವರಿ ಅಥವಾ ಹೆಚ್ಚುವರಿ ಹೆಸರಿನಲ್ಲಿ ಸರಕಾರಿ ಜಮೀನು ಉಳ್ಳವರ ಪಾಲಾಗುತ್ತಿರುವುದನ್ನು ಸಂಘಟನೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿಯೂ ದಲಿತರಿಗೆ ಭೂಮಿ ಹಕ್ಕು ಒದಗಿಸುವ ಕ್ರಮ ಕೈಗೊಳ್ಳದಿದ್ದಲ್ಲಿ ಸಂಪೂರ್ಣ ಸರಕಾರಿ ಜಮೀನು ಬಲಾಢ್ಯರ ಸ್ವತ್ತಾಗುವ ಅಪಾಯವಿದೆ ಎಂದು ಸಂಜೀವ ಬಳ್ಕೂರು ಎಚ್ಚರಿಸಿದರು. ಈ ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ವಿ.ಎಂ., ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ನಾಗರತ್ನಾ ಆರ್., ನಾಗರತ್ನಾ ನಾಡ, ಸುಧಾಕರ ಪಾಣಾರ, ಸಮಿತಿಯ ಮುಖಂಡರಾದ ಬಾಬು ಬಳ್ಕೂರು, ಸುಶೀಲಾ ಬಳ್ಕೂರು, ರಾಮ ಕರ್ಕಡ, ಅಣ್ಣಪ್ಪ ಬಳ್ಕೂರು, ವಿಜಯಕುಮಾರ್ ಬಳ್ಕೂರು, ರಾಜು ಪಾಣಾರ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸೇರಿದಂತೆ ಹಲವರು ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಲಿಖಿತ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.