ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
ಕಾರ್ಕಳ : ತೋಟಗಾರಿಕೆ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2024-25ನೇ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಗೇರು, ಕೊಕೊ, ಜಾಯಿಕಾಯಿ, ಅನಾನಸ್ಸು, ಅಂಗಾಂಶ ಬಾಳೆ ಹಾಗೂ ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಹಲಸು, ಮ್ಯಾಂಗೋಸ್ಟಿನ್ ಮತ್ತು ಡ್ರಾಗನ್ ಫೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ ಲಭ್ಯವಿದೆ, ಸಣ್ಣ ಸಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ. 50 ರ ದರದಲ್ಲಿ ಗರಿಷ್ಠ ರೂ. 7.50 ಲಕ್ಷಗಳು ಸಹಾಯಧನ, ಅಂಗಾಂಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ ಗರಿಷ್ಠ ರೂ. 100.00 ಲಕ್ಷಗಳ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 30ರ ದರದಲ್ಲಿ ಪ್ರತಿ ಎಕರೆಗೆ ಗರಿಷ್ಠ ರೂ. 480.00 ಸಹಾಯಧನವಿದೆ. ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ. 40 ರ ಸಹಾಯಧನ ಲಭ್ಯವಿದೆ. ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ. 40ರ ದರದಲ್ಲಿ ಗರಿಷ್ಠ ರೂ. 8.00 ಲಕ್ಷಗಳ ಸಹಾಯಧನ ಲಭ್ಯವಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ/ರೈತ ಸಂತೆ/ನೇರ ಮಾರುಕಟ್ಟೆ, ಸ್ಥಾಪಿಸಲು ಶೇ. 40 ರ ಗರಿಷ್ಟ ರೂ. 10.00 ಲಕ್ಷಗಳ ಸಾಲ ಆಧಾರಿತ ಸಹಾಯಧನ ನೀಡಲು ಅವಕಾಶವಿರುತ್ತದೆ.
ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಾಗೂ ಕ್ಷೇತ್ರ ಹಂತದಲ್ಲಿ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 40 ರ ದರದಲ್ಲಿ ಗರಿಷ್ಠ 10.00 ಲಕ್ಷಗಳ ವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆಗಳನ್ನು ಕ್ಷೇತ್ರದ ಹಂತದಲ್ಲಿ ನಿರ್ವಹಿಸಲು ಹಾಗೂ ಶೇಖರಿಸಲು ಪ್ಯಾಕ್ ಹೌಸ್ ಗಳ ನಿರ್ಮಾಣಕ್ಕೆ ಶೇ. 50ರ ದರದಲ್ಲಿ ಗರಿಷ್ಠ 2.00 ಲಕ್ಷಗಳ ಸಹಾಯಧನ ಲಭ್ಯವಿದೆ. ರೈತರ ಯಾಂತ್ರೀಕರಣ ಆವಶ್ಯಕತೆಗೆ 20 hp ಗಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಖರೀದಿಗೆ ರೂ. 0.75 ದಿಂದ 1.0 ಲಕ್ಷದವರೆಗೆ ರ ಸಹಾಯಧನ ಲಭ್ಯವಿದೆ.
ಕೃಷಿ ಯಾಂತ್ರೀಕರಣ ಉಪ ಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ರೈತರಿಗೆ ಅವಶ್ಯವಿರುವ ಬ್ರಶ್ ಕಟ್ಟರ್, ಚೈನ್ ಸಾ, ಏಣಿ, ಕಾರ್ಬನ್ ಪ್ರೈಬರ್ ದೋಟಿ, ಕೈಗಾಡಿ, ಮದು ಸಿಂಪರಣಾ ಯಂತ್ರಗಳು, ಮೊಟಾರು ಚಾಲಿತ ಕೈಗಾಡಿ, ಸೋಲಾರ್ ಶೆಡ್, ಕಾಳುಮೆಣಸು ಸುಲಿಯುವ ಯಂತ್ರ, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ಜಾಫ್ ಕಟ್ಟರ್ ಒಳಗೊಂಡಂತೆ ಇಲಾಖಾ ಅನುಮೋದಿತ ಕಂಪನಿಗಳಿಂದ ಖರೀದಿಸಿದ ಗರಿಷ್ಠ 5 ಯಂತ್ರೋಪಕರಣಗಳಿಗೆ ಶೇ. 40/50ರ ದರದಲ್ಲಿ ಗರಿಷ್ಠ 1.25 ಲಕ್ಷ ಸಹಾಯಧನ ಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ತಲೆದೋರುತ್ತಿರುವ ನೀರಿನ ಕೊರತೆಗೆ ಪರಿಹಾರವಾಗಿ ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 1200 ಘನ ಮೀ ಅಳತೆಯ ನೀರು ಸಂಗ್ರಹಣಾ ಘಟಕಕ್ಕೆ ರೂ. 75000/-, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2500 ಘನ ಮೀ ಅಳತೆಗೆ ರೂ. 1.50 ಲಕ್ಷ, 4500 ಘನ ಮೀ ಅಳತೆಗೆ ರೂ. 2.80 ಲಕ್ಷ, 6500 ಘ.ಮೀ ಅಳತೆಗೆ ರೂ. 4.00 ಲಕ್ಷ ಹಾಗೂ 9000 ಘ.ಮೀ ಅಳತೆಯ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ರೂ. 5.00 ಲಕ್ಷ ಸಹಾಯಧನ ಲಭ್ಯವಿದೆ,
ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಪ.ಜಾತಿ ಮತ್ತು ಪ.ಪಂಗಡ ರೈತರಿಗೆ ಶೇ. 90 ರಷ್ಟು ಹಾಗೂ ಇತರೇ ವರ್ಗದ ರೈತರಿಗೆ ಶೇ. 55 ರಷ್ಟು ಸಹಾಯಧನ ಲಭ್ಯವಿದೆ. ಸಹಾಯಧನಕ್ಕೆ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್ ಗಳ ಮೂಲಕ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ. ಹನಿ ನೀರಾವರಿ ಮೂಲಕ ಪೋಷಕಾಂಶಗಳನ್ನು ನೀಡಲು ಅನುಕೂಲವಾಗುವಂತೆ ನೀರಿನಲ್ಲಿ ಕರಗುವ ಪೋಷಕಾಂಶಗಳ ಖರೀದಿಗೆ ಸಹಾಯಧನ ಲಭ್ಯವಿದೆ.
ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಅಭಿವೃದ್ಧಿ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಕೊಳವೆ ಬಾವಿ, ತೆರೆದ ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್ /ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ, ಎರೆಹುಳು ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬಹುದಾಗಿದೆ.
ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ಪ್ರಾಯೋಗಿಕ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 10 ಪೆಟ್ಟಿಗೆ ಖರೀದಿಗೆ ಶೇ. 75 ರಿಂದ 90 ರ ಸಹಾಯಧನ ಲಭ್ಯವಿದೆ. ಕೃಷಿ ಭೂಮಿ ಹೊಂದಿರದ ಆಸಕ್ತರಿಗೆ ಗರಿಷ್ಠ 4 ಪೆಟ್ಟಿಗೆಗಳ ಖರೀದಿಗೆ ಸಹಾಯಧನ ಲಭ್ಯವಿರುತ್ತದೆ.
ಅಸಂಪ್ರದಾಯಿಕ ಇಂಧನ ಮೂಲಗಳಲ್ಲಿ ಒಂದಾದ ಸೌರಶಕ್ತಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಸೌರಶಕ್ತಿ, ಚಾಲಿತ ಪಂಪ್ ಸೆಟ್ ಗಳ ಖರೀದಿಗೆ ಇಲಾಖೆಯಿಂದ ಶೇ. 50ರ ಸಹಾಯಧನ ಲಭ್ಯವಿದೆ. 3 HP ಪಂಪ್ ಸೆಟ್ ಒಟ್ಟು ವೆಚ್ಚ 2.00 ಲಕ್ಷಗಳಿದ್ದು, ರೂ. 1.00 ಲಕ್ಷ ಸಹಾಯಧನ ಹಾಗೂ 5 HP ಮೇಲ್ಪಟ್ಟ ಪಂಪ್ ಸೆಟ್ ಗಳಿಗೆ ಒಟ್ಟು ವೆಚ್ಚ 3.00 ಲಕ್ಷಗಳಿಗೆ ರೂ. 1.50 ಲಕ್ಷ ಸಹಾಯಧನ ಲಭ್ಯವಿದೆ. ಈ ವೆಚ್ಚದಲ್ಲಿ ಸೋಲಾರ” ಪ್ಯಾನಲ್, ಕೇಬಲ್, ನಿಯಂತ್ರಣ ಘಟಕಗಳು ಹಾಗೂ ಪಂಪ್ ಗಳನ್ನು ಒಳಗೊಂಡಿರುತ್ತದೆ. ಸೌರಶಕ್ತಿ, ಬಳಸಿ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸುವ ಸಲುವಾಗಿ ಬಳಸುವ ಸೋಲಾರ* ಶೆಡ್ ಗಳ ನಿರ್ಮಾಣಕ್ಕೆ ಇಲಾಖಾ ಸಹಾಯಧನ ಲಭ್ಯವಿದೆ.






































