ತೆಂಕು -ಬಡಗಿನ ಸವ್ಯಸಾಚಿ ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣರ ರಜತ ಸಂಭ್ರಮ
ಮಾ.23ಕ್ಕೆ ಮಂದಾರ್ತಿಯಲ್ಲಿ “ಹಿಲಿಯಾಣ -ಬೆಳ್ಳಿಯಾನ” ದ ಸಡಗರ
ತೆಂಕು -ಬಡಗಿನ ಉಭಯ ಕಡೆ ಬ್ರೌಷರ್ ಬಿಡುಗಡೆಯೊಂದಿಗೆ ಸಿದ್ಧತೆ
ತೆಂಕು, ಬಡಗುತಿಟ್ಟುಗಳ ಸವ್ಯಸಾಚಿ ಕಲಾವಿದ, ತೆಂಕಿನ ಜನಪ್ರಿಯ,ಪ್ರತಿಷ್ಠಿತ ಹನುಮಗಿರಿ ಮೇಳದ ಪ್ರಧಾನ ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣ ತನ್ನ ಕಲಾಯಾನದ ರಜತ ಸಂಭ್ರಮದಲ್ಲಿದ್ದಾರೆ.
2025ರ ಮಾ. 23ರಂದು ಕಲಾವಿದ ಹಿಲಿಯಾಣರ ರಜತಸಂಭ್ರಮದ ಕಾರ್ಯಕ್ರಮಗಳು ಮಂದಾರ್ತಿ ದುರ್ಗಾ ಸನ್ನಿಧಿಯಲ್ಲಿ (ಶೇಡಿಕೂಡ್ಲು) ನಡೆಯಲಿದ್ದು, ತನ್ನಿಮಿತ್ತ ರಚಿಸಲಾದ ಆಮಂತ್ರಣ ಬ್ರೌಷರ್ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ಮತ್ತು ಮಂದಾರ್ತಿ ಶ್ರೀದುರ್ಗಾಪರಮೇಶ್ಶರಿ ದೇವಳದಲ್ಲಿ ಬಿಡುಗಡೆಗೊಂಡಿತು.

ಬಡಗಿನಿಂದ ಬಂದು ತೆಂಕಿನಲ್ಲಿ ಮೆರೆದ ಕಲಾವಿದನೊಬ್ಬನ ಕಲಾಯಾನದ ರಜತೋತ್ಸವಕ್ಕೆ ಕೇರಳ -ಕರ್ನಾಟಕದ ತೆಂಕು, ಬಡಗಿನ ನೆಲದಲ್ಲಿ ಬ್ರೌಷರ್ ಬಿಡುಗಡೆಯಾದುದು ಇದೇ ಪ್ರಥಮ.
ತೆಂಕುತಿಟ್ಟಿನ ಸ್ತ್ರೀವೇಷಗಳಿಗೆ ಪ್ರೌಢಿಮೆಯ ಒಪ್ಪಕೊಟ್ಟು, ರಂಗಸ್ಥಳದ ರಾಜ್ಞಿಯಾಗಿ ಮೆರೆದು ವಿಭಿನ್ನ ಸ್ತ್ರೀವೇಷಗಳನ್ನು ಆಯಾ ಪಾತ್ರದ ಘನತೆಗೆ ತಕ್ಕ ರಸಪೋಷಿಸಿ ಮೆರೆಸಿ ಪ್ರೇಕ್ಷಕರ ಮನಗೆದ್ದ ಸಂತೋಷ್,ಕುಮಾರ್ ಹಿಲಿಯಾಣ ಅವರ ಕಲಾಯಾನದ ರಜತ ಸಂಭ್ರಮ “ಹಿಲಿಯಾಣ-ಬೆಳ್ಳಿಯಾನ” ಎಂಬ ಶೀರ್ಷಿಕೆಯೊಂದಿಗೆ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮಕ್ಕೆ ಇನ್ನು ಕೇವಲ ಶತದಿನಗಳಷ್ಟೇ ಇದ್ದು, ಸಿದ್ಧತೆಗಳು ಆರಂಭಗೊಂಡಿದೆ.
ಕಾರ್ಯಕ್ರಮದ ಪ್ರಚಾರಕ್ಕಾಗಿ ಎರಡು ವಿನ್ಯಾಸಗಳ ವಿಭಿನ್ನ ಎರಡು ವರ್ಣರಂಜಿತ ಬ್ರೌಷರ್ ರಚಿಸಲಾಗಿದೆ. ಮೊದಲ ಬ್ರೌಷರ್ ನ.23ರಂದು ಭಗವಾನ್ ಶ್ರೀಸತ್ಯಸಾಯಿ ಬಾಬ ಅವರ 99ನೇ ಜನ್ಮದಿನಾಚರಣೆಯಂಗವಾಗಿ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಯಕ್ಷಮಿತ್ರರು ಬೆಂಗಳೂರು ಇದರ ಸಾರಥಿ ಶ್ಯಾಮಸೂರ್ಯ ಮುಳಿಗದ್ದೆ ಆಯೋಜಿಸಿದ ಹನುಮಗಿರಿ ಮೇಳದ ಬಯಲಾಟದ ರಂಗಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು.
ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರು ಬ್ರೌಷರ್ ಬಿಡುಗಡೆಗೈದು ಕಲಾವಿದ ಹಿಲಿಯಾಣರಿಗೆ ಮಂತ್ರಾಕ್ಷತೆ ಇತ್ತು ಹರಸಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ, ಹನುಮಗಿರಿ ಮೇಳದ ಯಜಮಾನ ಡಾ.ಟಿ ಶಾಮಭಟ್ , ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ಸಂಚಾಲಕ ಹಿರಣ್ಯ ಮಹಾಲಿಂಗ ಭಟ್, ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗರು, ರಾಜೇಶ್ ಭಟ್ ನಿಡುವಜೆ, ಶ್ಯಾಮಸೂರ್ಯ ಮುಳಿಗದ್ದೆ ಮತ್ತು ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉಪಸ್ಥಿತರಿದ್ದರು.
ಎರಡನೇ ಬ್ರೌಷರ್ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು.
ಕಲಾಯಾನದ ಬೆಳ್ಳಿಹಬ್ಬವನ್ನಾಚರಿಸುವ ಕಲಾವಿದ ಹಿಲಿಯಾಣರಿಗೆ ಮಂದಾರ್ತಿ ಅಮ್ಮನ ಹಾಗೂ ಊರವರೆಲ್ಲರ ಆಶೀರ್ವಾದಗಳಿರಲೆಂದು ದೇವಳದ ಪರ ಪ್ರಾರ್ಥಿಸಲಾಯಿತು.
ಮಂದಾರ್ತಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಕಲಾಪೋಷಕ ವಿಠಲ ಶೆಟ್ಟಿ ಮಂದಾರ್ತಿ, ಮಂದಾರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕಾಂತ ಅಡಿಗ, ಗಂಗಾಧರ ಶೆಟ್ಟಿ ಮಂದಾರ್ತಿ,
ಅಶೋಕ್ ಕುಂದರ್ ಮಂದಾರ್ತಿ , ಪ್ರದೀಪ ಶೆಟ್ಟಿ ಮಂದಾರ್ತಿ, ರವಿರಾಜ್ ಶೆಟ್ಟಿ, ಕಲಾವಿದ ಪ್ರಕಾಶ್ ಕಿರಾಡಿ, ಪ್ರಸಾದ ಕಾವಡಿ ಮೊದಲಾದವರು ಉಪಸ್ಥಿತರಿದ್ದು ಬ್ರೌಷರ್ ಬಿಡುಗಡೆಗೊಳಿಸಲಾಯಿತು.


























