ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ

Picture of RB NEWS

RB NEWS

Bureau Report

ಬೆಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ದೃಷ್ಟಿಯಿಂದ ರಾಜ್ಯ ಸರಕಾರ ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್ ಅವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉದಯ್ ಶೆಟ್ಟಿ ಅವರು, ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ವತಿಯಿಂದ “ತುಳು ಅಭಿವೃದ್ಧಿ ಪ್ರಾಧಿಕಾರ”ವನ್ನು ಶೀಘ್ರವಾಗಿ ಸ್ಥಾಪಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ತುಳು ಭಾಷೆಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ದ್ರಾವಿಡ ಭಾಷೆಯಾಗಿದ್ದು, ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ತುಳು ಭಾಷೆಯು ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಜಾಗತೀಕರಣದ ಪರಿಣಾಮವಾಗಿ ಪ್ರಾದೇಶಿಕ ಭಾಷೆಗಳ ಬಳಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ತುಳು ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯತೆ ಹೆಚ್ಚಾಗಿದೆ ಎಂದರು.

ಈಗಾಗಲೇ ಯುನೆಸ್ಕೋ (UNESCO) ಸಹ ತುಳು ಭಾಷೆಯನ್ನು ಸಂರಕ್ಷಿಸಬೇಕಾದ ಭಾಷೆಗಳ ಪೈಕಿ ಪರಿಗಣಿಸಿರುವ ಹಿನ್ನೆಲೆಯಲ್ಲಿ, ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ತುಳು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರ, ತುಳು ಸಾಹಿತ್ಯ, ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಉತ್ತೇಜನ, ಶಾಲೆ ಮತ್ತು ಕಾಲೇಜುಗಳಲ್ಲಿ ತುಳು ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ, ತುಳು ಜಾನಪದ ಕಲೆ, ಯಕ್ಷಗಾನ, ಭೂತಾರಾಧನೆ ಹಾಗೂ ಇತರ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ, ತುಳು ಭಾಷೆಗೆ ಸಂವಿಧಾನಿಕ ಹಾಗೂ ಶೈಕ್ಷಣಿಕ ಮಾನ್ಯತೆ ದೊರಕುವಂತೆ ಕ್ರಮ ಕೈಗೊಳ್ಳುವುದು,ತುಳುನಾಡಿನ ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ನೆರವು ನೀಡುವಂತೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನಕ್ಕೆ ಬೇಡಿಕೆ
ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನಲ್ಲಿ ತುಳು ಭವನ ನಿರ್ಮಾಣ ಮಾಡುವ ಕುರಿತು ಮನವಿ ಮಾಡಿಕೊಂಡಿದ್ದು, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸುಸಜ್ಜಿತ ತುಳು ಭವನ ನಿರ್ಮಾಣ ಅಗತ್ಯವಾಗಿದೆ.
ಕಾರ್ಕಳವು ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ತುಳು ಭಾಷೆ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಹಾಗೂ ಇತರ ಜನಪದ ಕಲೆಗಳು ಇಂದಿಗೂ ಜೀವಂತವಾಗಿವೆ. ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಅಧ್ಯಯನ ಮತ್ತು ಪ್ರಚಾರಕ್ಕಾಗಿ ಕಾರ್ಕಳದಲ್ಲಿ ತುಳು ಭವನದ ಅಗತ್ಯವಿದೆ.
ಪ್ರಸ್ತಾವಿತ ತುಳು ಭವನದಲ್ಲಿ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬಹುದಾಗಿದೆ. ಇದರಿಂದ ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
ಆದ್ದರಿಂದ, ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನಲ್ಲಿ ಸರ್ಕಾರದ ವತಿಯಿಂದ ಸೂಕ್ತ ಜಾಗವನ್ನು ಗುರುತಿಸಿ, ಅಗತ್ಯ ಅನುದಾನವನ್ನು ಮಂಜೂರು ಮಾಡಿ ಶೀಘ್ರದಲ್ಲೇ ತುಳು ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಉದಯ್ ಶೆಟ್ಟಿ ಮುನಿಯಾಲ್ ಅವರು ನೂತನ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top