ತುಂಬಿಸಿದ್ದು ಫುಲ್ ಟ್ಯಾಂಕ್ ಪೆಟ್ರೋಲ್ : ಪಾವತಿಸಿದ್ದು ₹100 : ಹೀಗೊಂದು ವಂಚನೆ

Picture of RB NEWS

RB NEWS

Bureau Report

ಮಂಗಳೂರು: ಕಾರಿನ ಟ್ಯಾಂಕ್‌ಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಕೇವಲ ₹100 ಪಾವತಿಸಿ ಉಳಿದ ಹಣ ನೀಡದೆ ಪರಾರಿಯಾದ ಆರೋಪದ ಘಟನೆ ಉಡುಪಿ ನಗರದ ಅಂಬಲಪಾಡಿ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಸೆ.9ರಂದು ರಾತ್ರಿ ಸುಮಾರು 9 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಉಡುಪಿ ನಗರದ ಅಂಬಲಪಾಡಿಯ ರಂಜಿತ್ ಶೆಟ್ಟಿ ಮಾಲೀಕತ್ವದ ಅಭಿನಂದನ್ ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದ ಗ್ರಾಹಕನೊಬ್ಬ ತನ್ನ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡಿದ್ದಾನೆ.

ಪೆಟ್ರೋಲ್ ತುಂಬಿಸಿದ ಬಳಿಕ ಜಿಪೇ ಮೂಲಕ ಕೇವಲ ₹100 ಪಾವತಿಸಿ, ಪಾವತಿಸಬೇಕಿದ್ದ ಉಳಿದ ಮೊತ್ತವನ್ನು ನೀಡದೆ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಖಿಲ್ ಎಂಬವರು ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚನೆಗೊಳಗಾದ ಗ್ರಾಹಕನ ಕುರಿತು ಲಭ್ಯವಿದ್ದ ಮಾಹಿತಿಯನ್ನೂ ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿತ ಗ್ರಾಹಕನ ಪತ್ತೆ ಹಾಗೂ ಬಂಧನಕ್ಕೆ ಪೊಲೀಸರು ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳು ಹಾಗೂ ಜಿಪೇ ಮೂಲಕ ನಡೆದ ₹100 ಪಾವತಿಯ ವಿವರಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಿದ್ದರೂ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ದೂರುದಾರರ ಪರವಾಗಿ ಅಸಮಾಧಾನ ವ್ಯಕ್ತವಾಗಿದೆ.

ಪ್ರಕರಣದ ಕುರಿತು ಪೊಲೀಸರು ಶೀಘ್ರ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಗಳು ಹಾಗೂ ಡಿಜಿಟಲ್ ಪಾವತಿ ವಿವರಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top