ತಿಂಗಳೆ : ಧರ್ಮ-ಕಲೆ -64ನೇ ಸಾಹಿತ್ಯೋತ್ಸವ

Picture of RB NEWS

RB NEWS

Bureau Report


ಹೆಬ್ರಿ : ಕಾರಣಿಕದ ತಿಂಗಳೆಯಲ್ಲಿ ಧರ್ಮದೈವಗಳ ನೇಮೋತ್ಸವ, ಕಲೋತ್ಸವದ ಜೊತೆಗೆ 64ನೇ ಸಾಹಿತ್ಯೋತ್ಸವ ತಿಂಗಳೆ ಚಾವಡಿಯಲ್ಲಿ ಪ್ರತೀ ವರ್ಷದಂತೆ ಮಾ.08 ರಂದು ನಡೆಯಿತು. ಸಾವಂತವಾಡಿಯ ಹಿಂದೂ ದುರ್ಗಾ ಸಂಸ್ಥಾನದ ಘನವೆತ್ತ ರಾಜ ಬಹದ್ದೂರು ಕೇಮ್ ಸಾವಂತ್ ಬೋಸ್ಲೆ ಅಧ್ಯಕ್ಷತೆ ವಹಿಸಿ, ಅಚ್ಚ ಕನ್ನಡದಲ್ಲೇ ತಿಂಗಳೆಯ ಸಾಹಿತ್ಯೋತ್ಸವದ ಮಹತ್ವ ವಿವರಿಸಿ ಕೊಂಕಣ ಕಡಲತೀರದ ಇತಿಹಾಸ, ಸಂಸ್ಕೃತಿ, ಆಚರಣೆ, ಸಮಾನತೆ, ಯಕ್ಷಕಲಾರಾಧನೆಯ ವೈವಿಧ್ಯತೆಯನ್ನು ತೆರೆದಿಟ್ಟರು. ತಮ್ಮ ಬಾಲ್ಯದ ಶಿಕ್ಷಣದೊಂದಿಗೆ ಇಲ್ಲಿಯ ಕನ್ನಡ, ತುಳುವಿನ ಪ್ರಭಾವವನ್ನು ಅವರು ವಿಶ್ಲೇಷಿಸಿದರು.
ಸಾಹಿತ್ಯೋತ್ಸವದ ಮಾತಿನ ಮಂಟಪದಲ್ಲಿ ಅನುಭವ ಮಂಟಪ ಶೀರ್ಷಿಕೆಯಲ್ಲಿ ನಿರರ್ಗಳವಾಗಿ ಮಾತನಾಡಿದ ಡಾ. ವೀಣಾ ಬನ್ನಂಜೆ ವಚನ ಸಾಹಿತ್ಯ, ಶರಣ ಸಾಹಿತ್ಯದ ಮಹತ್ವ ತಿಳಿಸಿ, ಬೆಳಕು ಇಲ್ಲದಿದ್ದರೆ ಶಬ್ದವೇ ಬೆಳಕು, ಶಬ್ದವೇ ಇಲ್ಲದಿದ್ದರೆ ಆತ್ಮವೇ ಬೆಳಕು ಎಂದು ಹೇಳಿ ಜೀವನದಲ್ಲಿ ಸವಾಲುಗಳೇ ನನ್ನ ಅತ್ಯಂತ ಪ್ರಿಯವಾದ ಸಂಗತಿ ಎಂದು ಪ್ರತಿಪಾದಿಸಿದರು.
ಸಾಹಿತ್ಯೋತ್ಸವದ ಮಾತಿನ ಮಂಟಪದ ಇತಿಹಾಸದ ಪುಟಗಳಲ್ಲಿ ಸಾವಂತವಾಡಿ ಶೀರ್ಷಿಕೆಯಲ್ಲಿ ಯುವವಾಗ್ಮಿ ಶ್ರೀಕಾಂತ ಶೆಟ್ಟಿ ಮಾತನಾಡಿ ಗಂಜೀಫಾ ಕಲೆ, ಯಕ್ಷಗಾನ, ಗಾಂ ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿದ ನಾಡು ಸಾವಂತವಾಡಿ. ಸ್ವಾತಂತ್ರö್ಯ ಹೋರಾಟ, ಗೆರಿಲ್ಲಾ ಯುದ್ಧತಂತ್ರ , ಮರದ ಆಟಿಕೆಗಳ ತಯಾರಿ, ಹಿಂದೂಗಳ ರಕ್ಷಣೆಗೆ ನಿಂತ ನಾಡು ಸಾವಂತವಾಡಿ ಎಂದರು.
ಸಮಾರಂಭದಲ್ಲಿ ಮುಂಬೈನ ಹಿರಿಯ ಸಾಹಿತಿ ವಿಜಯ ಪಾತ್ರೇಪಕರ್ ಪಾಲ್ಗೊಂಡು ಕನ್ನಡದಲ್ಲೇ ಮಾತನಾಡಿ ಮರಾಠಿ-ಕನ್ನಡ ಬಾಂಧವ್ಯ ,ಸಂಸ್ಕೃತಿ, ಕಲಾರಾಧನೆ ಚಿರಕಾಲ ಉಳಿಯಲಿ ಎಂದು ಹಾರೈಸಿದರು.
ಸಾಹಿತ್ಯೋತ್ಸವದಲ್ಲಿ ಪ್ರತಿಷ್ಠಿತ ತಿಂಗಳೆ ಪ್ರಶಸ್ತಿಯನ್ನು ಖ್ಯಾತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ತಿಂಗಳೆ ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮಸ್ಥರಿಗೆ ತಮ್ಮ ಸಂಸ್ಥೆಯ ಮೂಲಕ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ ಕೊಡಿಸುವುದಾಗಿ ಪ್ರಕಟಿಸಿದರು. ರ‍್ಯಾಂಕ್ ವಿಜೇತೆ ಹಾಗೂ ಸ್ಥಳೀಯ ಪ್ರತಿಭೆ ತಣ್ಣೀರು ಪ್ರಿಯಾ ಉದಯ ಆಚರ‍್ಯ ಅವರನ್ನು ಸಮಾರಂಭದಲ್ಲಿ ಪ್ರೋತ್ಸಾಹಿಸಿ, ಸನ್ಮಾನಿಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಿಂಗಳೆ ಡಾ. ಕೆ ಅಣ್ಣಪ್ಪ ಶೆಟ್ಟಿ, ಕಾರ್ಯಕ್ರಮದ ರೂವಾರಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮೊದಲು ಯಕ್ಷಗುರು ಸಂಜೀವ ಸುವರ್ಣ ನೇತೃತ್ವದಲ್ಲಿ ಚಕ್ರವ್ಯೂಹ ಯಕ್ಷಪ್ರದರ್ಶನ ನಡೆಯಿತು. ಡಾ. ಪ್ರಶಾಂತ್ ಶೆಟ್ಟಿ ನಿರೂಪಿಸಿ, ವಿಕ್ರಮಾರ್ಜುನ ಹೆಗ್ಗಡೆ ಸ್ವಾತಿಸಿದರು. ಅಮಿತಾಂಜಲಿ ಕಿರಣ್ ವಂದಿಸಿದರು. ಬಳಿಕ ತಿಂಗಳೆ ಬ್ರಹ್ಮಬೈದರ್ಕಳ, ಶಿವರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ, ಗೆಂಡೋತ್ಸವ ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top